ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಶಾಖೆಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮಗಳು ಆ.30ರಂದು ಸರಕಾರಿ ನೌಕರರ ಸಂಘದ ಮೇರಿ ದೇವಾಸಿಯಾ ಸಭಾಂಗಣದಲ್ಲಿ ನಡೆಯಿತು.
ನಾನು ಪಿಂಚಣಿ ಪಡೆಯುವ ನಿವೃತ್ತ ಸರಕಾರಿ ನೌಕರರ-ಡಾ.ಶ್ರೀಪತಿ ರಾವ್:
ಮುಖ್ಯ ಅತಿಥಿಯಾಗಿದ್ದ ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಶ್ರೀಪತಿರಾವ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಯಾಗಿ ನನಗೆ ಎಂಬಿಬಿಎಸ್, ಎಂಡಿ ಸೀಟ್‌ಗಳು ಸರಕಾರ ಕೋಟಾದಲ್ಲಿ ದೊರೆತಿದೆ. ನಂತರ ಕೆಪಿಎಸ್‌ಸಿಯಲ್ಲಿ ಸರಕಾರಿ ಸೇವೆಗೆ ನೇಮಕಾತಿ ದೊರೆತಿದೆ. 1982ರಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಶಸ್ತ್ರ ಚಿಕಿತ್ಸಾ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಂತರ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದು ಕಳೆದ 22 ವರ್ಷಗಳಿಂದ ಪಿಂಚಣಿ ಪಡೆಯುತ್ತಿದ್ದೇನೆ. ಸರಕಾರದ ಋಣ ನನ್ನ ರಕ್ತದಲ್ಲಿದೆ. ಸರಕಾರಿ ನೌಕರರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಯಾವುದೇ ನೌಕರರು ತಮ್ಮ ಸಮಸ್ಯೆಗಳ ಬಗ್ಗೆ ಸಂಘದ ಗಮನಕ್ಕೆ ತಂದಾಗ ಉತ್ತಮ ಸ್ಪಂಧನೆ ನೀಡಿ ನಗುಮೊಗದಿಂದ ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಸೇವೆ ನೀಡುವ ಉತ್ತಮ ಅವಕಾಶವಾಗಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದ ಅವರು 1987ರಲ್ಲಿ ರಜನೀಶ್ ಗೋಯಲ್ ಪ್ರಾರಂಭಿಸಿದ ಸಂಘಕ್ಕೆ 38 ವರ್ಷಗಳ ಬಳಿಕ ಬರಲು ಅವಕಾಶ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸಿದರು.
ಜವಾಬ್ದಾರಿಯ ಕೆಲಸ ನಿರ್ವಹಿಸುವ ಸರಕಾರಿ ನೌಕರರಲ್ಲಿ ಬಹಳಷ್ಟು ನೋವಿದೆ-ನವೀನ್ ಭಂಡಾರಿ:
ಪ್ರತಿಭಾ ಪುರಸ್ಕಾರ ವಿತರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಸರಕಾರದ ಹೊಸ ಹೊಸ ಯೋಜನೆಗಳು ಬಂದರೂ, ಎಲ್ಲಾ ಇಲಾಖೆಗಳಲ್ಲಿಯೂ ಸಿಬ್ಬಂದಿ ಕೊರತೆಯ ಮಧ್ಯೆ ನಿರ್ವಹಣೆ ಮಾಡಬೇಕಾದ ಜವಾಬ್ದಾರಿಯಿದೆ. ಮನೆ, ಇಲಾಖೆ, ಸಮಾಜದ ಜವಾಬ್ದಾರಿಯ ಕೆಲಸ ನಿರ್ವಹಿಸುವ ಸರಕಾರಿ ನೌಕರರಲ್ಲಿ ಬಹಳಷ್ಟು ನೋವಿದೆ. ಅದನ್ನು ತೋರಿಸುವುದಿಲ್ಲ. ಇವುಗಳ ಮಧ್ಯೆಯೂ ಸರಕಾರಿ ನೌಕರರ ಸಹಕಾರಿ ಸಂಘ ಸ್ಥಾಪಿಸಿ, ಸಮಾಜಕ್ಕೆ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದರು.
ಸರಕಾರಿ ನೌಕರರಲ್ಲಿರುವಂತ ಸಂಘಟನೆ ಬ್ಯಾಂಕ್ ಉದ್ಯೋಗಿಗಳಲ್ಲಿಲ್ಲ-ನಾಗರಾಜ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಶಾಖಾ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ಸರಕಾರಿ ನೌಕರರಲ್ಲಿರುವಂತ ಸಂಘಟನೆ ಬ್ಯಾಂಕ್ ಉದ್ಯೋಗಿಗಳಲ್ಲಿಲ್ಲ. ನಿವೃತ್ತಿಯಾದರೂ ಸನ್ಮಾನಿಸುವ ಸಂಘಟನೆಯಿಲ್ಲ. ಇವೆಲ್ಲಾ ಇರುವ ಸರಕಾರಿ ನೌಕರರೇ ಧನ್ಯರು ಎಂದು ಹೇಳಿ ಸರಕಾರಿ ನೌಕರರಿಗೆ ಬ್ಯಾಂಕ್ ನಿಂದ ದೊರೆಯುವ ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು.

ಪುತ್ತೂರಿನ ಸಂಘ ಅದ್ಬುತ ಅಧ್ಯಕ್ಷರನ್ನು ಪಡೆದುಕೊಂಡಿದೆ-ನಾಗರಾಜ್
ಸರಕಾರಿ ನೌಕರರ ಜಿಲ್ಲಾ ಸಂಘದ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಅದ್ಬುತ ಅಧ್ಯಕ್ಷ ಪುತ್ತೂರು ಸರಕಾರಿ ನೌಕರರ ಸಂಘದಲ್ಲಿದ್ದು ಇಲ್ಲಿ ಸಂಘಟನೆ ಅತ್ಯುತ್ತಮವಾಗಿ ಬೆಳೆಯುತ್ತಿದೆ. ಅಧ್ಯಕ್ಷರು ನೌಕರರ ಸಮಸ್ಯೆಗಳನ್ನು ರಾಜ್ಯಾಧ್ಯಕ್ಷರ ಮುಖಾಂತರ ಪರಿಹರಿಸಿಕೊಳ್ಳುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ಧಿಷ್ಠ ಗುರಿ ಇಟ್ಟುಕೊಳ್ಳಬೇಕು. ತಮ್ಮ ಕನಸು ನನಸಾಗಿಸಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪುತ್ತೂರಿನ ಸಂಘ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ-ಸುಂದರ ಗೌಡ:
ರಾಮನಗರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸುಂದರ ಗೌಡ ಮಾತನಾಡಿ, ಸರಕಾರಿ ನೌಕರರ ಸಂಘವು ಪುತ್ತೂರಿನಲ್ಲಿ ಅತ್ಯುತ್ತಮವಾಗಿ ಸಂಘಟನೆಯಾಗುತ್ತಿದ್ದು ರಾಜ್ಯಮಟ್ಟದಲ್ಲಿಯೂ ಗುರುತಿಕೊಂಡಿದೆ. ಪುತ್ತೂರು ಹಾಗೂ ಸುಳ್ಯದಲ್ಲಿ ಕರ್ತವ್ಯ ನಿರ್ವಹಣೆ ಅವಧಿಯಲ್ಲಿ ಸಂಘಟನೆಗೆ ತನ್ನಿದಾದ ಸಹಕಾರ ನೀಡಿದ್ದೇನೆ. ಇತರ ಎಲ್ಲಾ ಸಂಘಟನೆಗಳಿಗೂ ಈ ಸಂಘವೇ ಮಾತೃ ಸಂಘವಾಗಿದೆ. ಈ ಸಂಘವು ಇನ್ನಷ್ಟು ಬೆಳೆಯಲಿ. ಸಂಘಟನೆಗೆ ರಾಜ್ಯ ಪ್ರಶಸ್ತಿ ಲಭಿಸುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಮಾತನಾಡಿ, ಸಂಘವು ಮಾಜಿ ಅಧ್ಯಕ್ಷರು ಹಾಕಿ ತಲಹದಿಯಲ್ಲಿ ಸಂಘಟನೆ ಬೆಳೆಯುತ್ತಿದೆ. ಸಂಘಟನೆ ಬಲಪಡಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಸಂಘದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು. ಇದಕ್ಕೆಲ್ಲಾ ನೌಕರರು ಸ್ಪಂಧನೆ ನೀಡಬೇಕು. ಸದಸ್ಯರಿಗಾಗಿ ಸಂಘದ ಮುಖಾಂತರ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸದಸ್ಯರು ಭಾಗವಹಿಸಬೇಕು. ಸರಕಾರಿ ನೌಕರರ ತುರ್ತು ಬ್ಯಾಂಕಿಂಗ್ ಕೆಲಸಗಳ ಸಂದರ್ಭದಲ್ಲಿ ಎಸ್‌ಬಿಐ ಬ್ಯಾಂಕ್‌ನ ಸಿಬ್ಬಂದಿಗಳು ಉತ್ತಮ ಸ್ಪಂಧನೆ ನೀಡವಂತೆ ವಿನಂತಿಸಿದರು.
ಬೀಳ್ಕೊಡುಗೆ:
ಸಂಘದ ಪದಾದಿಕಾರಿಗಳಾಗಿದ್ದು ವಯೋನಿವೃತ್ತಿ ಪಡೆದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಎಂ.ಆರ್. ಹಾಗೂ ಚಾಲಕ ಲೀಲಯ್ಯ ಎಂ. ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ:
2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸರಕಾರಿ ನೌಕರರ ಸಂಘದ ಸದಸ್ಯರ ಸುಮಾರು 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಿರಿಯ ಉಪಾಧ್ಯಕ್ಷ ರವಿಚಂದ್ರ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರಾದ ವಿನೋದ್ ಕುಮಾರ್ ಕೆ.ಎಸ್ ಹಾಗೂ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಚಂದ್ರ ನಾಯ್ಕ್, ನಿರ್ದೇಶಕರಾದ ಧರ್ಣಪ್ಪ ಗೌಡ, ಪ್ರಮೋದ್ ಕುಮಾರ್, ನಾಗೇಶ್ ಎಂ., ಸುಧೀರ್ ಪಿ., ಜಗನ್ನಾಥ, ಜೂಲಿಯಾನ್ ಮೊರಾಸ್, ಕೃಷ್ಣ ಬಿ., ವರುಣ್ ಕುಮಾರ್, ಚಂದ್ರಶೇಖರ, ಸುಲೋಚನ ಪಿ.ಕೆ., ಕವಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮ ಬಳಿಕ ಅನ್ನಸಂತರ್ಪಣೆ ನೆರವೇರಿತು.

ಮಹಾಸಭೆ
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಘದ ಕಾರ್ಯದರ್ಶಿ ಅಬ್ರಹಾಂ ಎಸ್.ಎ ವರದಿ ವಾಚಿಸಿದರು. ಕೋಶಾಧಿಕಾರಿ ಚಂದ್ರ ನಾಯ್ಕ್ ಲೆಕ್ಕಪತ್ರ ಮಂಡಿಸಿದರು. ರಾಜ್ಯ ಪರಿಷತ್ ಸದಸ್ಯ ಮಹಮ್ಮದ್ ಅಶ್ರಫ್, ಸಂಘದ ಗೌರವಾಧ್ಯಕ್ಷ ವಿಜಯ ಕುಮಾರ್, ಹಿರಿಯ ಉಪಾಧ್ಯಕ್ಷರಾದ ಹರಿಪ್ರಕಾಶ್ ಬೈಲಾಡಿ ಹಾಗೂ ರವಿಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘ ಎನು ಮಾಡುತ್ತಿದೆ ಎಂಬ ಪ್ರಶ್ನೆಯಿದೆ. ಸಂಘ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಅರಿವಿದೆ. ಸರಕಾರಿ ನೌಕರರಿಗೆ ಪ್ರತಿ ವರ್ಷ ಡಿಎ ಏರಿಕೆ, ವೇತನ ಆಯೋಗ ಜಾರಿಯಾಗಲು ಸಂಘದ ಹೋರಾಟವೇ ಬಹುಮುಖ್ಯ ಕಾರಣವಾಗಿದೆ. ಆದರೂ ನೂರು ವರ್ಷಗಳ ಇತಿಹಾಸವಿರುವ ಸಂಘದಲ್ಲಿ ಸದಸ್ಯತ್ವಕ್ಕೆ ಹಣ ಕಟ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಸಂಘ ಇರುವ ಕಾರಣಕ್ಕೆ ನೌಕರರ ಬೇಕು ಬೇಡಗಳಿಗೆ ಈಡೇರಿಸಿಕೊಳ್ಳಲು ಸಾಧ್ಯವಾಗಿದೆ. ನಾವು ಪಡೆಯುವ ವೇತನವೂ ಸಂಘದ ಹೋರಾಟದ ಫಲವಾಗಿ ದೊರೆತಿದೆ. ವೃಂದ ಸಂಘಗಳ ಸಹಕಾರದೊಂದಿಗೆ ನಮ್ಮ ಸಂಘವು ದೊಡ್ಡ ಸಂಘವಾಗಿ ಸಂಘಟನೆಗೆ ಸಹಕಾರಿಯಾಗಿದೆ.
-ಶಿವಾನಂದ ಆಚಾರ್ಯ, ಅಧ್ಯಕ್ಷರು ಸರಕಾರಿ ನೌಕರರ ಸಂಘ