ಉಪ್ಪಿನಂಗಡಿ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣವನ್ನು ಆಯ್ಕೆ ಮಾಡುವ ನಾಟಕದಡಿ ಚಿನ್ನಾಭರಣವನ್ನು ಲಪಟಾಯಿಸಲು ಯತ್ನಿಸಿದ ವ್ಯಕ್ತಿಗಳಿಬ್ಬರ ಯತ್ನವನ್ನು ಚಿನ್ನಾಭರಣ ಮಳಿಗೆಯ ಸಿಬ್ಬಂದಿಯ ಸಕಾಲಿಕ ಕ್ರಮದಿಂದ ವಿಫಲಗೊಳಿಸಿದ ಘಟನೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.
ಉಪ್ಪಿನಂಗಡಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಆಗಮಿಸಿದ ವ್ಯಕ್ತಿಗಳಿಬ್ಬರಿಗೆ ಮಳಿಗೆಯ ಮಹಿಳಾ ಸಿಬ್ಬಂದಿ ಬಾಕ್ಸ್ವೊಂದರಲ್ಲಿದ್ದ ಚಿನ್ನಾಭರಣವನ್ನು ಕಾಣಿಸತೊಡಗಿದ್ದು, ಈ ವೇಳೆ ಒಬ್ಬಾತ ಆಯ್ಕೆಗೆಂದು ಕೈಗೆತ್ತಿಕೊಂಡ ಚಿನ್ನಾಭರಣವನ್ನು ತ್ವರಿತವಾಗಿ ತನ್ನ ಇನ್ನೊಂದು ಕೈಗೆ ರವಾನಿಸಿ, ಮತ್ತೊಂದು ಆಭರಣದತ್ತ ಗಮನಹರಿಸಿದಂತೆ ನಟಿಸುತ್ತಿದ್ದ. ಇನ್ನೋರ್ವ ವ್ಯಕ್ತಿ ತಾನೂ ಕೂಡಾ ಆಭರಣಗಳ ವಿನ್ಯಾಸದತ್ತ ಗಮನಹರಿಸಿದಂತೆ ನಟಿಸುತ್ತಾ ಅದರ ಬಗ್ಗೆ ಮಾತನಾಡುತ್ತಲೇ ಮಳಿಗೆಯ ಸಿಬ್ಬಂದಿಯ ಗಮನವನ್ನು ವಂಚನಾ ಕೃತ್ಯದಿಂದ ವಿಮುಖಗೊಳಿಸಲು ಯತ್ನಿಸುತ್ತಿದ್ದ. ಈ ಕೃತ್ಯವನ್ನು ಗಮನಿಸಿದ ಮಳಿಗೆಯ ಇನ್ನೋರ್ವ ಸಿಬ್ಬಂದಿ ತಕ್ಷಣವೇ ಎಚ್ಚೆತ್ತು ವ್ಯಕ್ತಿಗಳ ಕೃತ್ಯವನ್ನು ಆಕ್ಷೇಪಿಸಿದ್ದು, ಆಗ ಮಿಂಚಿನ ವೇಗದಲ್ಲಿಯೇ ಇನ್ನೊಂದು ಕೈಯಲ್ಲಿದ್ದ ಚಿನ್ನವನ್ನು ತಕ್ಷಣ ಚಿನ್ನಾಭರಣದ ಬಾಕ್ಸ್ಗೆ ಆತ ಹಾಕುವಂತೆ ವಿಡಿಯೋದಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಚಿನ್ನಾಭರಣ ಮಳಿಗೆಯ ಮಾಲಕರು, ಗ್ರಾಹಕರಾಗಿ ಬಂದವರು ಅಪರಿಚಿತರಾಗಿದ್ದು, ಹಿಂದಿ ಮಾತನಾಡುತ್ತಿದ್ದರು. ಚಿನ್ನವನ್ನು ಲಪಟಾಯಿಸಲು ಅವರು ಪ್ರಯತ್ನ ಮಾಡಿದಾಗ ಸಿಬ್ಬಂದಿ ಎಚ್ಚೆತ್ತುಕೊಂಡು ಅದನ್ನು ತಡೆದಿದ್ದಾರೆ. ಯಾವುದೇ ಚಿನ್ನಾಭರಣ ಮಳಿಗೆಯಿಂದ ಕಳವಾಗಿಲ್ಲ ಎಂದು ತಿಳಿಸಿದ್ದಾರೆ.