ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಹಾಗೂ ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತ-ಮುತ್ತ ಅಭಿವೃದ್ಧಿಪಡಿಸುವ ಸಲುವಾಗಿ ತಾಂಬೂಲ ಪ್ರಶ್ನಾ ಚಿಂತನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ಹಾಗೂ ಶಶಿ ಪಂಡಿತ್ ಅವರು ತಾಂಬೂಲ ಪ್ರಶ್ನೆ ಚಿಂತನೆ ನಡೆಸಿದರು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ನಿರ್ಮಾಣಕ್ಕೆ ಗುರುಬಲ ಇರುವುದು ಕಂಡುಬಂದಿದೆ. ಸುತ್ತುಪೌಳಿ ಈಗ ಇರುವ ಹಾಗೆ ಬಿಟ್ಟಲ್ಲಿ ಭವಿಷ್ಯದಲ್ಲಿ ಪೌಳಿಯ ಪತನವಾಗಬಹುದು ಎಂಬುದು ಕಂಡುಬಂದಿದ್ದು, ಪೌಳಿಯನ್ನು ಶೀಘ್ರ ಮಾಡುವುದಕ್ಕೆ ದೈವಾನುಗ್ರಹವಿದೆ. ಮರದಿಂದಲೇ ಪೌಳಿಯನ್ನು ಮಾಡತಕ್ಕದು ಎಂಬುದನ್ನು ಪ್ರಶ್ನಾ ಚಿಂತನೆಯ ಮೂಲಕ ತಿಳಿಸಲಾಗಿದೆ.
ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಗಣಪತಿಗೆ ಗುಡಿ ಇಲ್ಲದೇ ಇದ್ದು, ದೇವಸ್ಥಾನದ ನೈರುತ್ಯ ದಿಕ್ಕಿನಲ್ಲಿ ಗಣಪತಿ ಪ್ರತಿಷ್ಠೆ ಮಾಡಬಹುದು. ಗಣಪತಿ ಗುಡಿಗೆ ಶಿಲಾನ್ಯಾಸ ಮಾಡಿ ಪೌಳಿಯ ಕರ್ಯ ಪ್ರಾರಂಭ ಮಾಡುವುದು. ಪೌಳಿ ಕೆಲಸ ಪ್ರಾರಂಭ ಮಾಡುವಾಗ ಕಾಳಬೈರವ ಹಾಗೂ ಬಲ್ಲಾಳರಾಯ ವಿಗ್ರಹ ಬಾಲಾಯ ಪ್ರತಿಷ್ಠೆ ಮಾಡಿ ಕೆಲಸ ನಂತರ ಮಾಡುವುದು, ಈಗ ಇರುವ ದಿಕ್ಕಿನಲ್ಲಿ ಪ್ರತಿಷ್ಠೆ ಮಾಡುವುದು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದ್ದು, ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತ-ಮುತ್ತ ಅಭಿವೃದ್ಧಿ ಪಡಿಸುವ ಬಗ್ಗೆ ಕಾಶಿಕಟ್ಟೆ ಗಣಪತಿ ಗುಡಿಯನ್ನು ವಾಸ್ತುಶಿಲ್ಪಕ್ಕೆ ಸರಿಯಾಗಿ ನಿರ್ಮಾಣ ಮಾಡಬೇಕು. ಅಲ್ಲದೇ ಅದೇ ಸ್ಥಳದಲ್ಲಿ ಪ್ರಶ್ನೆ ಮಾಡತಕ್ಕದ್ದು ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ನೇತೃತ್ವ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಪಾಲೇರಿ, ಡಾ.ರಘು, ಮಹೇಶ್ ಕುಮಾರ್ ಕರಿಕ್ಕಳ, ಸೌಮ್ಯ ಭರತ್, ಪ್ರವೀಣ್ ರೈ, ಲೀಲಾ ಮನಮೋಹನ್, ಎಂಜಿನೀಯರ್ಗಳಾದ ಪ್ರಮೋದ್ ಕುಮಾರ್, ಉದಯಕುಮಾರ್,ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತ ಕಲ್ಲಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ರವೀಂದ್ರ ಶೆಟ್ಟಿ, ಶಿವರಾಮ ರೈ, ಕೃಷ್ಣ ಭಟ್, ಮಾಧವ ಮತ್ತಿತರರು ಉಪಸ್ಥಿತರಿದ್ದರು.