ಏಣ್ಮೂರು ಸರಕಾರಿ ಪ್ರೌಢಶಾಲೆಯ ವಿಶೇಷ ಚಿತ್ರಕಲಾ ಶಿಕ್ಷಕ ಕುಂತೂರಿನ ಮೋಹನ್‌ರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

0

ಪುತ್ತೂರು: ಸುಳ್ಯ ತಾಲೂಕಿನ ಏಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ಚಿಕಿತ್ರಕಲಾ ಶಿಕ್ಷಕರಾಗಿರುವ ಕಡಬ ತಾಲೂಕಿನ ಕುಂತೂರು ಗ್ರಾಮದ ಏನಾಜೆ ನಿವಾಸಿ ಮೋಹನ ಎ.,ಅವರಿಗೆ 2025-26ನೇ ಸಾಲಿನ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.


ಮೋಹನ ಅವರು 2004ರಲ್ಲಿ ಚಿಕ್ಕಮಗಳೂರಿನ ಸಾಯಿ ಏಂಜೆಲ್ಸ್ ಶಾಲೆ(ಸಿಬಿಎಸ್‌ಇ)ಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ್ದರು. ಇಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ 5-11-2008ರಂದು ಸುಳ್ಯ ತಾಲೂಕಿನ ಏಣ್ಮೂರು ಸರಕಾರಿ ಪ್ರೌಢಶಾಲೆಗೆ ವಿಶೇಷ ಚಿತ್ರಕಲಾ ಶಿಕ್ಷಕರಾಗಿ ನೇಮಕಗೊಂಡು ಸರಕಾರಿ ಸೇವೆ ಆರಂಭಿಸಿದ್ದರು. ಇಲ್ಲಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮೋಹನ ಅವರು ಎಡಮಂಗಲ ಸರಕಾರಿ ಪ್ರೌಢಶಾಲೆ, ಪಂಜ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿಶೇಷ ಚಿತ್ರಕಲಾ ಶಿಕ್ಷಕರಾಗಿ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಿದ್ದಾರೆ. ಪಂಜದಲ್ಲಿರುವ ಸುಳ್ಯ ತಾಲೂಕಿನ ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಸೆಂಟರ್‌ನ ಮುಖ್ಯ ಅಧೀಕ್ಷಕರಾಗಿ ಪ್ರತಿ ವರ್ಷ ಸೇವೆ ಸಲ್ಲಿಸುತ್ತಿದ್ದಾರೆ.


ವಿದ್ಯಾರ್ಥಿಗಳಿಗೆ ರೇಖಾ ಚಿತ್ರಗಳ ಮೂಲಕ ಚಿತ್ರಕಲೆ, ಕರಕುಶಲ ತಯಾರಿ, ಮುಖವಾಡ ತಯಾರಿ, ಪಾಟ್ ಡಿಸೈನ್, ಗೆರಟೆ ಕಲಾಕೃತಿ, ಗಾಜಿನ ಬಳೆಗಳನ್ನು ಸೇರಿಸಿ ಚಿತ್ರಗಳ ರಚನೆ, ಗೂಡು ದೀಪ ತಯಾರಿಸುವುದು, ಆವೆ ಮಣ್ಣಿನ ಕಲಾಕೃತಿ, ಕಸದಿಂದ ರಸ, ರಂಗೋಲಿ ರಚನೆ, ಗೋಡೆಗಳಲ್ಲಿ ವರ್ಲಿಕಲಿ, ಮಧುಬನಿ ಕಲೆ, ಮೆಹಂದಿ ಡಿಸೈನ್, ಪೇಪರ್ ಕಟಿಂಗ್, ಗಾಳಿಪಟ ಹಾರಿಸುವುದು, ದವಸ ಧಾನ್ಯಗಳನ್ನು ಸೇರಿಸಿ ಚಿತ್ರ ರಚನೆ, ಬಟ್ಟೆ ಚೀಲಗಳ ತಯಾರಿ, ಬೊಂಬೆ ತಯಾರಿ, ತ್ರೆಡ್ ವರ್ಕ್, ಅಕ್ಷರ ಲೇಖನ, ವಿವಿಧ ವಿಧಗಳಲ್ಲಿ ಸಹಿ ಮಾಡುವ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ತಯಾರಿ ವಿಧಾನವನ್ನು ಏರ್ಪಡಿಸುವುದು, ಆಷಾಢ ತಿಂಗಳಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುವ ಆಟಿ ಸ್ಪರ್ಧೆ, ಚೆನ್ನಮಣೆ ಸ್ಪರ್ಧೆ, ದವಸ ಧಾನ್ಯಗಳಿಂದ ತಯಾರಿಸುವ ಪೌಷ್ಠಿಕ ಯುಕ್ತ ಅಡುಗೆ ಸ್ಪರ್ಧೆಗಳು, ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಮಾಡಿ ನೇಜಿ ನೆಡುವ ವಿಧಾನವನ್ನು ಹೇಳಿಕೊಡುವುದು ಹಾಗೂ ಸಾವಯವ ವಿಧಾನದಲ್ಲಿ ತರಕಾರಿ ಗಿಡಗಳನ್ನು ಬೆಳೆಸುವುದರ ಬಗ್ಗೆ ಮಾಹಿತಿ ನೀಡುವುದು, ಶಾಲೆಯಲ್ಲಿ ಸುಮಾರು ೧೫ ಕ್ಕಿಂತಲೂ ಹೆಚ್ಚು ವಿವಿಧ ಜಾತಿಯ ಬಾಳೆಯ ಗಿಡಗಳನ್ನು ಸಂಗ್ರಹಿಸಿ ಅದರ ಮಹತ್ವದ ಬಗ್ಗೆ ತಿಳಿಸುತ್ತಿದ್ದಾರೆ.


ಶಾಲೆಯಲ್ಲಿ ವಿವಿಧ ಜಾತಿಯ ಕಾಡು ಹಣ್ಣಿನ ಗಿಡ, ಪಂಜ ಲಯನ್ಸ್ ಕ್ಲಬ್‌ನ ಸಹಕಾರದಿಂದ ವಿವಿಧ ಜಾತಿಯ ಕಸಿ ಹಣ್ಣಿನ ಗಿಡಗಳ ನಾಟಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಶಾಲೆಯನ್ನು ಅಂದಗೊಳಿಸುವ ಕೆಲಸ ಪ್ರಾರಂಭಿಸಿದ್ದರು. ಅನೇಕ ವಿಧದ ಗಿಡಗಳನ್ನು ನೆಟ್ಟು ನಡೆದಾಡಲು ಇಂಟರ್ಲಾಕ್ ಅಳವಡಿಕೆ, ದಾನಿಗಳ ಸಹಾಯದಿಂದ ಸುಮಾರು ರೂ.೨ ಲಕ್ಷ ಖರ್ಚು ಮಾಡಿ ಅಂದವಾದ ಉದ್ಯಾನವನ್ನು ನಿರ್ಮಿಸಲಾಗಿದೆ. ಶಾಲಾ ಮೈದಾನದಲ್ಲಿ ದೊರೆತಿರುವ ಒಂದು ದೊಡ್ಡ ಕಲ್ಲಿಗೆ ಬಣ್ಣ ಬಳಿದು ಕಲಾಕೃತಿಯನ್ನಾಗಿ ನಿರ್ಮಿಸಲಾಗಿದೆ. ಶಾಲೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಲವು ಚಟುವಟಿಕೆ ಹಮ್ಮಿಕೊಂಡಿದ್ದಾರೆ.


ಕುಂತೂರು ಗ್ರಾಮದ ಏನಾಜೆ ದಿ| ರುಕ್ಮಯ ಗೌಡ ಮತ್ತು ದಿ| ಹೊನ್ನಮ್ಮ ದಂಪತಿಯ ಪುತ್ರರಾಗಿರುವ ಮೋಹನ ಅವರು ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲೆ, ಕುಂತೂರು ಸರಕಾರಿ ಹಿ.ಪ್ರಾ.ಶಾಲೆ, ಕುಂತೂರುಪದವು ಸಂತಜಾರ್ಜ್ ಅನುದಾನಿತ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದುಕೊಂಡಿದ್ದರು. ಬಳಿಕ ಮೂಡಬಿದ್ರೆಯಲ್ಲಿ ಐಟಿಐ ಶಿಕ್ಷಣ, ನಂತರ ಚಿಕ್ಕಮಗಳೂರಿನ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ರವಿಕುಮಾರ್ ಟಿ.ಎಚ್. ಹಾಗೂ ವಿಶ್ವಕರ್ಮ ಆಚಾರ್‌ರವರ ಮಾರ್ಗದರ್ಶನದಲ್ಲಿ ಚಿತ್ರಕಲೆಯಲ್ಲಿ ಡ್ರಾಯಿಂಗ್ ಮಾಸ್ಟರ್, ಆರ್ಟ್‌ಮಾಸ್ಟರ್, ಗ್ರ್ಯಾಚುವೆಟ್ ಡಿಪ್ಲೋಮಾ ಶಿಕ್ಷಣ ಪಡೆದುಕೊಂಡಿದ್ದಾರೆ. ನಂತರ ಬಾಗಲಕೋಟೆ ಇಳಕಲ್‌ನ ಹಂಪಿ ಯುನಿವರ್ಸಿಟಿಯಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಕೋರ್ಸು ಮಾಡಿರುತ್ತಾರೆ. ಇವರ ಪತ್ನಿ ದಿವ್ಯ ಎಂ.ಕೆ.ಅವರು ಏಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಪುತ್ರಿ ರುಚಿತಾ 7ನೇ ಹಾಗೂ ಪುತ್ರ ಶಿಶಿರ್ ೫ನೇ ತರಗತಿಯಲ್ಲಿ ನಿಂತಿಕಲ್ ಕೆ.ಎಸ್.ಗೌಡ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಹೋದರರಾದ ಜಿನ್ನಪ್ಪ ಗೌಡ ಏನಾಜೆ, ತಿಮ್ಮಪ್ಪ ಗೌಡ ಏನಾಜೆ ಅವರು ಕುಂತೂರು ಗ್ರಾಮದ ಏನಾಜೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here