24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲಾ ವ್ಯಾಪಿ ಹೋರಾಟ ಎಚ್ಚರಿಕೆ
ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬು ಎಂಬಲ್ಲಿ ಗೋವನ್ನು ಕದ್ದೊಯ್ದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ, ಅವರನ್ನು ಗಡಿಪಾರು ಮಾಡಬೇಕು. ಗೋವನ್ನು ಕಳೆದು ಕೊಂಡ ಸಂತ್ರಸ್ತರಿಗೆ ಗರಿಷ್ಟ ಪರಿಹಾರ ಒದಗಿಸಬೇಕು. ಜೊತೆಗೆ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸದಿದ್ದಲ್ಲಿ ಜಿಲ್ಲಾ ವ್ಯಾಪಿ ಹೋರಾಟ ಮಾಡಲಾಗುವುದು ಎಂದು ಹಿಂದು ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಸಂಯೋಜಕ ನರಸಿಂಹ ಮಾಣಿ ಅವರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಸೆ.3ರ ತಡರಾತ್ರಿ ಕಡಂಬು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ದೇಜಪ್ಪ ಮೂಲ್ಯ ಅವರ ಮನೆಯ ಹಟ್ಟಿಯಿಂದ ಗೋವನ್ನು ಕದ್ದು ಮನೆ ಬಳಿಯ ಜಾಗದಲ್ಲಿ ಅಮಾನುಷವಾಗಿ ಕಡಿದು, ಮಾಂಸ ಮಾಡಿ ತ್ಯಾಜ್ಯವನ್ನು ಅಲ್ಲೇ ಬಿಸಾಡಿ ಹೋಗಿದ್ದಾರೆ. ಇದನ್ನು ಹಿಂದು ಜಾಗರಣ ವೇದಿಕೆ ಖಂಡಿಸುತ್ತದೆ. ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಇದು 2ನೇ ಪ್ರಕರಣ ಆಗಿದೆ. ಆದರೆ ಇಲ್ಲಿಯ ತನಕವೂ ಆರೋಪಿಗಳ ಬಂಧನ ಆಗಿಲ್ಲ. ಗೋ ಹತ್ಯಾ ಕಾನುನು ಜಾರಿಯಲ್ಲಿದ್ದರೂ ಅದರ ಯಾವ ಭಯವಿಲ್ಲದೆ ಅಕ್ರಮ ಗೋ ಸಾಗಾಟ ನಡೆಯುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ದೇಜಪ್ಪ ಮೂಲ್ಯ ಅವರ ಮನೆಗೆ ಮುಸಲ್ಮಾನ ದನದ ವ್ಯಾಪಾರಿ ಹೋಗಿ ದನ ಮಾರಾಟದ ಕುರಿತು ವಿಚಾರಿಸುವ ನೆಪದಲ್ಲಿ ಮನೆಯ ವಾತಾವರಣವನ್ನು ಗಮನಿಸಿ ಗೋ ಕಳ್ಳತನ ಮಾಡಿರುವ ಅನುಮಾನವಿದೆ ಎಂದ ಅವರು ಗೋ ಕಳ್ಳತನ ಮಾಡಿದ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ವ್ಯಾಪಿ ಹೋರಾಟ ಮಾಡಲಾಗುವುದು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗು ಗಡಿಪಾರು ಮಾಡಬೇಕು ಹಾಗು ಗೋವನ್ನು ಕಳೆದುಕೊಂಡು ನೊಂದ ದೇಜಪ್ಪ ಮೂಲ್ಯ ಅವರಿಗೆ ಗರಿಷ್ಟ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹಿಂದು ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಂಯೋಜಕ ಮೋಹನ್ದಾಸ್ ಕಾಣಿಯೂರು, ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ, ಪುತ್ತೂರು ತಾಲೂಕು ಸಂಯೋಜಕ ಕೀರ್ತನ್ ಸವಣೂರು ಉಪಸ್ಥಿತರಿದ್ದರು.
ಗೋ ಕಳ್ಳತನವನ್ನು ಇಲಾಖೆ ತಡೆಯದಿದ್ದಲ್ಲಿ ನಾವು ತಡೆಯುತ್ತೇವೆ
ಕೆದಿಲ, ಸತ್ತಿಕಲ್ಲು, ಸರೋಳಿ ಭಾಗದಿಂದ ಹಲವು ವರ್ಷಗಳಿಂದ ಗೋ ಕಳ್ಳತನ ಸಾಗಾಟ ನಡೆಯುತ್ತಿದೆ. ಇದು ಇಲಾಖೆಗೂ ಗೊತ್ತಿದೆ. ಆಧರೆ ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ. ಗೋವು ಕಳ್ಳತನ, ಲವ್ ಜಿಹಾದ್, ಡ್ರಗ್ಸ್ ದಂಧೆ ಸಮಾಜದ ಶಾಂತಿಯನ್ನು ಕೆಡಿಸುತ್ತದೆ. ಇದನ್ನು ಮಟ್ಟಹಾಕಲೆಂದು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಅವರು ಹಿಂದು ಕಾರ್ಯಕರ್ತರನ್ನೇ ಗುರಿಯಾಗಿಸಿ ಅವರ ಮನೆಗೆ ಹೋಗಿ ಜಿಪಿಎಸ್ ಪೊಟೋ ತೆಗೆಯುವ ಮೂಲಕ ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಮ್ಯೂನಲ್ ವಿಂಗ್ ಇರುವುದು ಹಿಂದುಗಳನ್ನು ಎದುರಿಸಲು ಎಂಬಂತಿದೆ. ಹಿಂದುಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾನೂನು ಇದೆ ಎಂದು ಹೇಳಿ ಸಮಯ ಪಾಲನೆ, ಮೆರವಣಿಗೆ ತೊಂದರೆ ಕೊಡುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ಗೋ ಹತ್ಯೆ ನಿಷೇಧಕ್ಕೂ ಕಾನೂನು ಇದೆ. ಸುಪ್ರಿಂ ಕೋರ್ಟ್ ಇದನ್ನೂ ಕೂಡಾ ಪಾಲನೆ ಮಾಡುವಂತೆ ಆದೇಶಿಸಿದೆ. ಇದು ಪೊಲೀಸರಿಗೆ ಯಾಕೆ ಕಾಣುವುದಿಲ್ಲ. ಒಂದು ವೇಳೆ ಗೋ ಕಳ್ಳತನವನ್ನು ಇಲಾಖೆ ತಡೆಯದಿದ್ದಲ್ಲಿ ನಾವು ತಡೆಯುತ್ತೇವೆ. ಇದು ನೈತಿಕ ಪೊಲೀಸ್ಗಿರಿ ಅಲ್ಲ. ನಾವು ಮಾಡುವುದು ಸಮಾಜ ಮತ್ತು ಧರ್ಮದ ಕೆಲಸ ಎಂದು ನರಸಿಂಹ ಮಾಣಿ ತಿಳಿಸಿದ್ದಾರೆ.