ಧ್ವನಿವರ್ಧಕ ಅಳವಡಿಕೆಗೆ ಸಮಯದ ನಿರ್ಬಂಧ, ಸಡಿಲಿಸುವಂತೆ ಸರಕಾರವೇ ಮುಂದಡಿ ಇಡಬೇಕು – ಸರಪಾಡಿ ಅಶೋಕ ಶೆಟ್ಟಿ

0

ಪುತ್ತೂರು: ಭೌಗೋಳಿಕವಾಗಿ ಕರ್ನಾಟಕದ ಕರಾವಳಿ ಭಾಗ ವಿಭಿನ್ನವಾಗಿ ಕಾಣಿಸಿಕೊಂಡಿರುವುದು ಸರ್ವ ವೇದ್ಯ. ಈ ಕಾರಣಕ್ಕಾಗಿ ಅವಿಭಜಿತ ದ.ಕ. ಜಿಲ್ಲೆ, ನೆರೆಯ ಕಾಸರಗೋಡು, ಉತ್ತರಕನ್ನಡ ಜಿಲ್ಲೆಯ ಜನರನ್ನು ಬುದ್ಧಿವಂತರ ಜಿಲ್ಲೆಯೆಂದು ಕರೆಯಲ್ಪಟ್ಟಿದೆ. ಇದಕ್ಕೆ ಕಾರಣ ಕರಾವಳಿಯ ರಾಜ ಕಲೆಯೆಂದು ವ್ಯಾಖ್ಯಾನಿಸಲ್ಪಟ್ಟ ಗಂಡು ಕಲೆ ಯಕ್ಷಗಾನ. ಈ ಕಲೆಯು ಕರಾವಳಿ ಭಾಗವಲ್ಲದೆ ದೇಶ ವ್ಯಾಪ್ತಿ ಅಂತರಾಷ್ಟ್ರೀಯ ವ್ಯಾಪ್ತಿಯಲ್ಲಿ ಆವರಿಸಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎಣಿಸುತ್ತದೆ. ಆದರೆ ದುರ್ದೈವಶಾತ್ ಈ ಕಲೆಯನ್ನು ನೋಡಿ ಆಕರ್ಷಿತರಾಗಿ ನನ್ನಂತೆ ಸಾವಿರಾರು ಮಂದಿ ಯಕ್ಷಗಾನ ಕಲಾ ಕ್ಷೇತ್ರವನ್ನು ಆಯ್ಕೆ ಮಾಡಿ ಇದೀಗ ಅತಂತ್ರರಾಗಿ ನಡುನೀರಿನಲ್ಲಿ ಕೈಬಿಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಸೂರ್ಯಾಸ್ಥದಿಂದ ಸೂರ್ಯೋದಯದವರೆಗೆ ಪ್ರದರ್ಶಿಸಲ್ಪಡುತ್ತಿದ್ದ ಯಕ್ಷಗಾನ ಪ್ರದರ್ಶನಕ್ಕೆ ಸಮಯ ನಿರ್ಬಧಿಸುವ ಮೂಲಕ ಬ್ರಹ್ಮಾಸ್ತ್ರ ಪ್ರಯೋಗ ಮಾಡಿರುವುದು ಬರಸಿಡಿಲಿನಂತಾಗಿದೆ. ಜಿಲ್ಲಾಡಳಿತ (ಪೋಲಿಸ್ ಇಲಾಖೆ) ರಾತ್ರಿ 10 ಗಂಟೆಯಿಂದ ಧ್ವನಿವರ್ಧಕ ಬಳಕೆ ಮಾಡಬಾರದೆಂದು ತಾಕೀತು ಮಾಡಿರುತ್ತದೆ. ಪೋಲೀಸ್‌ ಇಲಾಖೆಯ ಈ ನಿರ್ಧಾರ ಕಲಾಕ್ಷೇತ್ರವನ್ನು ತಲ್ಲಣಗೊಳಿಸಿದ ಕಾರಣ ಸರ್ವೊಚ್ಚ ನ್ಯಾಯಾಲಯದ ಆದೇಶ ಎಂದು ಉತ್ತರಿಸುತ್ತಿದ್ದಾರೆ. ಹಗಲಿಡಿ ದುಡಿದ ಕಲಾಸಕ್ತರು ರಾತ್ರಿ ಬಿಡುವು ಇರುವುದರಿಂದ ಹಾಗೂ ನಿಶ್ಯಬ್ದ ವಾತಾವರಣ ಇರುವುದರಿಂದ ಯಕ್ಷಗಾನ ಕಲೆಯನ್ನು ಪೂರ್ಣವಾಗಿ ಆಸ್ವಾದಿಸುತ್ತಾರೆ. ಕಲೆಯ ಮೂಲಕ ಪೌರಾಣಿಕ ಕಥಾಭಾಗವನ್ನು ಅರ್ಥಮಾಡಿಕೊಂಡು ಪಾಮರರು ಪಂಡಿತರಾಗುವುದು ಈ ಯಕ್ಷಗಾನ ಕಲೆಯ ಮೂಲಕ ಇದೇ ಇದರೆ ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನ ಪ್ರದರ್ಶನಕ್ಕೆ ತಡೆವೊಡ್ಡುತ್ತಿರುವುದು ದುರಂತವೇ ಸರಿ. ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ಮಾಡುವುದರ ಬಗ್ಗೆ ಆದೇಶ ನೀಡಿದ ಸುಪ್ರೀಂ ಕೋರ್ಟಿಗೆ ಮರು ಮನವಿ ಮಾಡುವುದರ ಮೂಲಕ ರಾಜ್ಯ ಸರಕಾರವು ಒಕ್ಕೊರಲ ನಿರ್ಣಯ ಕೈಗೊಳ್ಳಬೇಕು. ನಗರ ಪ್ರದೇಶ ಸಹಿತ ಗ್ರಾಮಾಂತರ ಪ್ರದೇಶದಲ್ಲಿ ರಾತ್ರಿ 12 ರ ತನಕ ಧ್ವನಿವರ್ಧಕ ಬಳಕೆ ಮಾಡಲು ಇರುವ ತೊಡಕನ್ನು ನಿವಾರಿಸಬೇಕು. ಕಲಾವಿದರ ಬದುಕು ಬೀದಿ ಪಾಲಾಗದಂತೆ ಜನ ಪ್ರತಿನಿಧಿಗಳು ಇಚ್ಛಾ ಶಕ್ತಿ ಪ್ರಕಟಿಸಬೇಕೆಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here