





ಸಂಸ್ಥೆಯ ಅಭಿವೃದ್ಧಿಯಲ್ಲಿ ಪೋಷಕರ ಸಲಹೆಗಳು ಅತ್ಯಂತ ಮುಖ್ಯ : ಚಂದ್ರಕಾಂತ್ ಪೈ


ಪುತ್ತೂರು: ಶಾಲಾ ಚಟುವಟಿಕೆಗೆ ಸಂಬಂಧಪಟ್ಟಂತೆ ಪೋಷಕರು ಮೌನ ವಹಿಸಬಾರದು. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು. ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ಪೋಷಕರ ಸಲಹೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ 2025-26ನೇ ಸಾಲಿನ ರಕ್ಷಕ – ಶಿಕ್ಷಕ ಸಂಘದ ನೂತನ ಅಧ್ಯಕ್ಷ ಚಂದ್ರಕಾಂತ್ ಪೈ ಹೇಳಿದರು.





ಅವರು ವಿದ್ಯಾಲಯದಲ್ಲಿ ಶನಿವಾರ ನಡೆದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಇಂದಿನ ಪೀಳಿಗೆಗೆ ಪಠ್ಯ ಶಿಕ್ಷಣದ ಜೊತೆಗೆ ಧರ್ಮ ಶಿಕ್ಷಣ ಅತ್ಯಂತ ಮುಖ್ಯ, ಇದರ ಅರಿವು ಪೋಷಕರಿಗೆ ಇರಬೇಕು. ಮಕ್ಕಳು ಸ್ವಭಾವತಃ ಪೋಷಕರನ್ನೇ ಅನುಸರಿಸಿ ಬೆಳೆಯುತ್ತಾರೆ. ಹಾಗಾಗಿ ಪೋಷಕರಾದವರು ಮಕ್ಕಳಿಗೆ ಆದರ್ಶವಾಗಿರಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶಕ್ಕೆ ಮಾದರಿಯಾಗಬೇಕು. ವಿನೂತನವಾಗಿ ಏನನ್ನಾದರೂ ತಯಾರಿಸುವ ಕೌಶಲ್ಯಾವೃದ್ಧಿ ಮಕ್ಕಳಲ್ಲಿ ಆಗಬೇಕು. ಶೈಕ್ಷಣಿಕ ವರ್ಷಗಳಲ್ಲಿ ಸಿಗುವ ರಜೆಯನ್ನು ಸಾಮರ್ಥ್ಯವೃದ್ಧಿಗಾಗಿ ಉಪಯೋಗಿಸಿಕೊಳ್ಳಬೇಕು. ಹೊಸ ಹೊಸದಾದ ವೈಜ್ಞಾನಿಕ ಮಾದರಿಗಳನ್ನು ತಯಾರಿಸಿ ಭವಿಷ್ಯದ ವಿಜ್ಞಾನಿಗಳಾಗಿ ದೇಶಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲೆ ಮಾಲತಿ ಡಿ. ಶೈಕ್ಷಣಿಕ ವರ್ಷದಲ್ಲಾಗುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾಲಯದ ಮಾತಾಜಿ ಪ್ರಿಯಾಶ್ರೀ ಕೆ. ಎಸ್. ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದದವರು ಹಾಜರಿದ್ದರು.









