ಪಾಣಾಜೆ : ಪಾಣಾಜೆ ಸುಬೋಧ ಪ್ರೌಢಶಾಲೆಯ 1996-97 ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಮರಳಿ ಶಾಲೆಗೆ ನೆನಪುಗಳ ಜೊತೆಗೆ ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಶಾಲೆಯಲ್ಲಿ ಜರಗಿತು.

ದೇಶದ ನಾನಾ ಕಡೆಗಳಲ್ಲಿ ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರಾಗಿರುವ ಹಿರಿಯ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆ ಮಾಡಿದ ಶಾಲೆಯಲ್ಲಿ ಒಟ್ಟಿಗೆ ಸೇರಿ ತಮಗೆ ಬೋಧಿಸಿದ ಗುರುಗಳ ಪಾಠಗಳನ್ನು ತಾವು ಕಲಿತ ತರಗತಿಗಳಲ್ಲಿಯೇ ಕೂತು ಪಾಠಗಳನ್ನು ಹಾಗೂ ಹಿತವಚನಗಳನ್ನು ಕೇಳಿ ಖುಷಿಪಟ್ಟರು. ಸಮಾರಂಭದ ಅಧ್ಯಕ್ಷರು, ಶಾಲಾ ಸಂಚಾಲಕರು ಮತ್ತು ಶಿಕ್ಷಕರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಮ್ಮ ಗುರುಗಳಾದ ಪಿಲಿಂಗಲ್ಲು ಕೃಷ್ಣ ಭಟ್, ಮೊಳಕ್ಕಾಲು ಶ್ರೀಕೃಷ್ಣ ಭಟ್, ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀಪತಿ ಭಟ್, ಪುರಂದರ ಎಂ ಜಿ, ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ, ಸಂಚಾಲಕರಾದ ಮಹಾಬಲೇಶ್ವರ ಭಟ್ ಹಾಗೂ ಈಗಿನ ಮುಖ್ಯ ಶಿಕ್ಷಕಿ ನಿರ್ಮಲ ಕೆ, ಲಕ್ಷ್ಮೀಶ, ಸದಾಶಿವ ಎಸ್ ವಿ ಮತ್ತು ಜನಿಯ ನಾಯ್ಕ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿದರು.ಅಗಲಿದ ಗುರುಗಳಾದ ಪ್ರಸಾದ್ ಖಂಡೇರಿ, ವಿ ಜಿ ಭಟ್ ಹಾಗೂ ಸಹಪಾಠಿಗಳಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಹಾಲಿ ಮುಖ್ಯ ಶಿಕ್ಷಕಿ ನಿರ್ಮಲ ಕೆ ಹಾಗೂ ಪುರಂದರ ಎಂ ಜಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಾದ ಸುಜಯ್, ರಾಜೇಶ್, ಸವಿತಾ ಶೆಟ್ಟಿ ಮತ್ತು ಹರೀಶ್ ತಾವು ಶಾಲೆಯಲ್ಲಿ ಕಳೆದ ದಿನಗಳನ್ನು ನೆನಪಿಸುತ್ತ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸ್ನೇಹ ಮಿಲನ ಕಾರ್ಯಕ್ರಮದ ರೂವಾರಿ ಹರೀಶ್ ನೆಲ್ಲಿತ್ತಿಮಾರು ಅವರನ್ನು ಸಹಪಾಠಿಗಳು ಸನ್ಮಾನಿಸಿದರು. ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಬ್ಯಾಚಿನ ಕಲರ್ ಫೋಟೋವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಅನುರಾಧ, ವಿಶಾಲಾಕ್ಷಿ ಮತ್ತು ರಾಧಾಕುಮಾರಿ ಪ್ರಾರ್ಥಿಸಿದರು. ಸವಿತಾ ಶೆಟ್ಟಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶಾಲೆಗೆ ರೂ 56 ಸಾವಿರ ದೇಣಿಗೆ ಹಸ್ತಾಂತರ
ಈ ಸಾಲಿನ ಹಿರಿಯ ವಿದ್ಯಾರ್ಥಿಗಳು ಒಟ್ಟು ರೂ 56 ಸಾವಿರವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯಾಗಿ ಹಸ್ತಾಂತರಿಸಿದರು. ಬಿಬಿ ಕ್ರಿಯೇಷನ್ಸ್ ನ ಪ್ರದೀಪ್ ಪಾಣಾಜೆ, ಮೋಹನ್ ಪಾಣಾಜೆ ಸಹಕರಿಸಿದರು.