ಪ್ರಾಕೃತಿಕ ವಿಕೋಪ, ಮಳೆ, ಪ್ರಾಣಿಗಳ ದಾಳಿ- ಅಡಿಕೆ ಬೆಳೆ, ಮರ ನಾಶ : ಕೇರಳ ಮಾದರಿಯಲ್ಲಿ ಪರಿಹಾರಕ್ಕೆ ಆಗ್ರಹಿಸಿದ ಕೃಷಿಕ ಸಮಾಜ

0

ಕರ್ನಾಟಕ ಸರಕಾರ ರೈತರಿಗೆ ನೀಡುವ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಬೇಕು
ಅಡಿಕೆ ಮರ ನಾಶಕ್ಕೆ ಮರು ನಾಟಿಗಾಗಿ ಕೇರಳ ಮಾದರಿಯಲ್ಲಿ ಸಹಾಯಧನ ನೀಡಬೇಕು
ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಹಾನಿಯ ಕುರಿತು ಸರ್ವೆ ಮಾಡಬೇಕು
ಕೊಳೆರೋಗದಿಂದ ಹಾನಿಯಾದ ಅಡಿಕೆ ಬೆಳೆಗಾರನಿಗೆ ಪರಿಹಾರ ನೀಡಬೇಕು
ಬೆಲೆ ವಿಮಯ ವಿಮಾ ಮೊತ್ತವನ್ನು ಹೆಚ್ಚಿಸುವ ನೆಲೆಯಲ್ಲಿ ಸರಕಾರ ಟರ್ಮ್ ಶೀಟ್ ಬದಲಾಯಿಸಬೇಕು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ವಾಣಿಜ್ಯ ಬೆಳೆಯ ಜಿಲ್ಲೆಯಾಗಿ ಇಂದು ಪರಿವರ್ತನೆಯಾಗಿ ಅಡಿಕೆ ಈ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾಗಿದೆ. ಆದರೆ ಪ್ರಾಕೃತಿಕ ವಿಕೋಪ, ಮತ್ತು ಅತಿಯಾದ ಮಳೆಯಿಂದ ಹಾಗು ಕಾಡು ಪ್ರಾಣಿಗಳ ದಾಳಿಯಿಂದ ಅಡಿಕೆ ಬೆಳೆ ಹಾಗು ಮರ ನಾಶ ಆಗಿದೆ. ಇದಕ್ಕೆ ಪರಿಹಾರವಾಗಿ ಕೇರಳ ಮಾದರಿಯಂತೆ ನೀಡಬೇಕೆಂದು ದ.ಕ.ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 4000 ದಿಂದ 5000 ಮಿಲಿ ಮೀಟರ್ ಮಳೆಯಾಗುತ್ತಿದೆ. ಈ ವರ್ಷದಲ್ಲಿ ಮೇ ತಿಂಗಳಲ್ಲಿ ಆರಂಭವಾದ ಮಳೆ ಸಪ್ಟೆಂಬರ್ ತನಕವು ನಿರಂತರವಾಗಿ ಸುರಿಯುತ್ತಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 27,602 ಹೆಕ್ಟರ್ ತೆಂಗು ಬೆಳೆ 1,02,106 ಹೆಕ್ಟೇರ್ ಅಡಿಕೆ ಬೆಳೆ 38,011 ಹೆಕ್ಟರ್ ಕಾಳು ಮೆಣಸು ಬೆಳೆಯುತ್ತಿದ್ದು ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ರೈತಾಪಿ ವರ್ಗ ಕುಂಭ ದ್ರೋಣ ಮಳೆಯಿಂದ ಅಡಿಕೆ, ಕಾಳುಮೆಣಸು ಹಾಗು ತೆಂಗು ಬೆಳೆ ನಾಶವಾಗಿ ಇಂದು ಆರ್ಥಿಕ ಹೊಡೆತ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಶೇ.70 ಬೆಳೆ ಮಳೆಯಿಂದಾಗಿ ಹಾನಿಯಾಗಿದ್ದು, ಪ್ರಾಕೃತಿಕ ವಿಕೋಪ, ಗಾಳಿ, ಸಿಡಿಲು, ಭೂ ಕುಸಿತ ಇದರಿಂದಾಗಿ ಜಿಲ್ಲೆಯಲ್ಲಿ ಅಡಿಕೆ ಕೃಷಿಕರಿಗೆ ಅಪಾರ ಹಾನಿಯಾಗಿದ್ದು, ಪ್ರಸ್ತುತ ಕಾಡುಪ್ರಾಣಿಗಳಿಂದ ರೈತರು ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. ಸುಳ್ಯ, ಮಡಿಕೇರಿ ತಾಲೂಕಿನಲ್ಲಿ ಕಾಣಿಸಿಕೊಂಡ ಅಡಿಕೆಯ ಹಳದಿ ರೋಗ ಪ್ರಸ್ತುತ ಕಡಬ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿಗು ವ್ಯಾಪಿಸಿದೆ. ಎಲೆಚುಕ್ಕಿರೋಗ ಪ್ರತಿವರ್ಷ ಅಡಿಕೆ ಮರಕ್ಕೆ ಬಾದಿಸುತ್ತಿದ್ದು, ಅಡಿಕೆಮರ ಸತ್ತು ಹೋಗುವಂತಹದ್ದು ಹಾಗೂ ಇಳುವರಿ ಕಡಿಮೆ ಯಾಗುವಂತಹದು ನಿರಂತರವಾಗಿ ನಡೆಯುತ್ತಾ ಇದೆ. ಮತ್ತೊಂದು ಕಡೆ ಈ ಭಾರಿ ಮಳೆಗಾಲದಲ್ಲಿ ರೈತರಿಗೆ ಅಡಿಕೆ ಮರಕ್ಕೆ ಬೋರ್ಡೋ ಸಿಂಪಡಣೆಗೂ ಅವಕಾಶ ಸಿಗಲಿಲ್ಲ. ಹಾಗಾಗಿ ಅಡಿಕೆ ಬೆಳೆಗಾರ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ರೈತರಿಗೆ ನೀಡುವ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಬೇಕು. ಅಡಿಕೆ ಮರ ನಾಶ ಹೊಂದಿರುವ ರೈತರಿಗೆ ಮರು ನಾಟಿ ಮಾಡಲು ಕೇರಳ ಮಾದರಿಯಲ್ಲಿ ಸಹಾಯಧನ ನೀಡಬೇಕು. ಸರಕಾರ ತಕ್ಷಣ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಹಾನಿಯ ಕುರಿತು ಸರ್ವೆ ಮಾಡಬೇಕು. 2018ರಲ್ಲಿ ಸರಕಾರ ಅಡಿಕೆಗೆ ಕೊಳೆರೋಗ ಬಂದಾಗ ಪರಿಹಾರ ನೀಡಿ ಉತ್ತಮ ಕೆಲಸ ಮಾಡಿತು. ಈ ವರ್ಷ ಕೂಡ ಅದೇ ರೀತಿಯ ಕೊಳೆರೋಗದಿಂದ ಹಾನಿಯಾದ ಅಡಿಕೆ ಬೆಳೆಗಾರನಿಗೆ ಪರಿಹಾರ ನೀಡಬೇಕು. ಬೆಲೆ ವಿಮಯ ವಿಮಾ ಮೊತ್ತವನ್ನು ಹೆಚ್ಚಿಸುವ ನೆಲೆಯಲ್ಲಿ ಸರಕಾರ ಟರ್ಮ್ ಶೀಟ್ ಬದಲಾಯಿಸಬೇಕು ಎಂದು ಹೇಳಿದ ಅವರು ತಕ್ಷಣ ರೈತರ ಹಿತವನ್ನು ಕಾಪಾಡದ ಹೋದರೆ ರಾಜ್ಯದ ಇತರ ಭಾಗದಲ್ಲಿರುವ ರೈತರ ಹಾಗೆ ರೈತ ಆತ್ಮಹತ್ಯೆಗೂ ಶರಣಾಗುವ ಸಮಯ ದೂರ ಇಲ್ಲ ಎನ್ನುವ ವಿಚಾರವನ್ನು ಕೂಡ ಸರಕಾರದ ಮುಂದಿಡುತ್ತಿದ್ದೇವೆ ಎಂದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕೊರಂಗ, ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.



ಕೇರಳದಲ್ಲಿ 1 ಮರಕ್ಕೆ 300 ರೂಪಾಯಿ !
ರೈತರ ಪರಿಹಾರಕ್ಕಾಗಿ ಕೇಂದ್ರದಿಂದ 37 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. 27 ಕೋಟಿ ರೂಪಾಯಿ ರಾಜ್ಯದಿಂದ ಬಿಡುಗಡೆ ಮಾಡಿದ್ದಾರೆ. ಒಟ್ಟಿಗೆ ರೂ. 64ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಈ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರು, ಹಳದಿ ರೋಗಕ್ಕೆ ತ್ತುತ್ತಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ರೂ. 60.59 ಲಕ್ಷ ಬಿಡುಗಡೆಯಾಗಿದೆ. ಆದರೆ ರೈತರಿಗೆ ಹಂಚಿಕೆಯಾದ ಮೊತ್ತ ರೂ 15 ಲಕ್ಷ ಮಾತ್ರ. 1 ಎಕ್ರೆಗೆ 600 ರೂಪಾಯಿ ಬಂದ ಹಾಗೆ ಆಗಿದೆ. ಗರಿಷ್ಟ ಒಬ್ಬ ರೈತನಿಗೆ ರೂ. 2 ಸಾವಿರ ಸಿಗಬಹುದು. ಇದು ರಾಜ್ಯ ಸರಕಾರದಿಂದ ರೈತರ ಕಣ್ಣು ಒರೆಸುವ ಕೆಲಸ ಮಾತ್ರ ಮಾಡಿದೆ. ರೈತನ ಅಡಿಕೆ ಮರ ನಾಶ ಆದಾಗ ಅದರ ಮರುನಾಟಿಗೆ ಬೇಕಾದಂತಹ ಸಹಾಯಧನ ಕೊಡಬೇಕೆಂದು ನಾವು ಬೇಡಿಕೆ ಇಟ್ಟದು. ಕೇರಳದಲ್ಲಿ 2025ರ ಗೈಡ್ ಲೈನ್ ಪ್ರಕಾರ ಒಂದು ಅಡಿಕೆ ಮರಕ್ಕೆ 300 ರೂಪಾಯಿ ಕೊಡುತ್ತಾರೆ. ತೆಂಗಿನ ಮರಕ್ಕೆ 700 ರೂಪಾಯಿ ಕೊಡುತ್ತಾರೆ. ಅಲ್ಲಿ ರೈತರು ಕೃಷಿ ಭವನಕ್ಕೆ ಅರ್ಜಿ ಹಾಕಿ ಪರಿಹಾರ ಪಡೆದುಕೊಳ್ಳಬಹುದು. ನಮ್ಮಲ್ಲಿ ಪ್ರಾಕೃತಿಕ ವಿಕೋಪಕ್ಕೆ ಮರ ನಾಶ ಆದರೆ ಒಂದು ಅಡಿಕೆ ಮರಕ್ಕೆ 16 ರೂಪಾಯಿ 92 ಪೈಸೆ ಕೊಡುತ್ತಾರೆ. ಎರಡೂವರೆ ಎಕ್ರೆಗೆ ಅಥವಾ ಒಂದು ಹೆಕ್ಟೇರ್ ಗೆ 22 ಸಾವಿರ ರೂಪಾಯಿ ಕೊಡುತ್ತಾರೆ. 1 ಹೆಕ್ಟೇರ್‌ನಲ್ಲಿ 1300 ಮರ ಇರುತ್ತದೆ. ಅದರಲ್ಲಿಯೂ ಶೇ.33 ಹಾನಿಯಾದರೆ ಮಾತ್ರ ಪರಿಹಾರ ಸಿಗುತ್ತದೆ. ಅದಕ್ಕಿಂತ ಕಡಿಮೆ ಹಾನಿಯಾದರೆ ಪರಿಹಾರ ಸಿಗುವುದಿಲ್ಲ. ಕೇರಳದಲ್ಲಿ 10 ಮರ ಹೋದರೂ ಪರಿಹಾರ ಸಿಗುತ್ತದೆ. ನಮ್ಮ ಸರಕಾರ ಕೇಂದ್ರದ ಗೈಡ್‌ಲೈನ್ ಪಾಲನೆ ಮಾಡುತ್ತದೆಯೋ ಅಥವಾ ರಾಜ್ಯದಲ್ಲಿ ತಮ್ಮದೇ ಆದ ಗೈಡ್ ಲೈನ್ ಇದೆಯೋ ಎಂಬುದು ಪ್ರಶ್ನೆಯಾಗಿದೆ. ಆಯಾ ವರ್ಷದ ಆರ್ಥಿಕ ಬೆಳವಣಿಗೆ ನೋಡಿಕೊಂಡು ರೈತರಿಗೆ ಸಹಾಯ ಮಾಡುವ ಕೆಲಸವನ್ನು ಸರಕಾರ ಮಾಡಬೇಕು.
ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here