ಪುತ್ತೂರು: ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದ ಉದ್ಯಮ ಸ್ಥಾಪಿಸುವ ಕನಸಿರುವ ಆರಂಭಿಕ, ಮಧ್ಯಮ ಹಾಗೂ ಉದಯೋನ್ಮುಖ ಉದ್ಯಮಿಗಳಿಗೆ ನಮ್ಮ ಪ್ರದೇಶದಲ್ಲಿರುವ ವಿಶಿಷ್ಟವಾದ ಉತ್ಪನ್ನ ಅಥವಾ ಸೇವೆಗಳನ್ನು ಪೋಷಿಸಲು ಸೂಕ್ತ ಅವಕಾಶ ಕಲ್ಪಿಸುವ ಉದ್ದೇಶದ ’ಬೊಲ್ಪು’ ವಿಶೇಷ ಕಾರ್ಯಯೋಜನೆಯ ಕುರಿತ ಮಾಹಿತಿ ಸಭೆಯನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಸುದ್ದಿ ಸಹಸಂಸ್ಥೆ ಅರಿವು ಎಂಟರ್ಪ್ರೈಸಸ್ ವತಿಯಿಂದ ಬ್ಲಡ್ ಬ್ಯಾಂಕ್ ಬಳಿಯ ರೋಟರಿ ಸಭಾಭವನದಲ್ಲಿ ಸೆ.8 ರಂದು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕ್ಗಳಿಂದ ಸಾಲಸೌಲಭ್ಯ, ಉದ್ಯಮ ಆರಂಭಿಸಲು ಅಥವಾ ವಿಸ್ತರಿಸುವ ಬಗ್ಗೆ ಪೂರ್ವಭಾವಿ ಮಾಹಿತಿ ನೀಡಿದ ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಎಸ್.ಎಸ್ ನಾಯಕ್, ಭಾರತ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರತೀ ಹಳ್ಳಿಯಲ್ಲಿನ ಉದ್ಯಮಿಗಳು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಎಂಎಸ್ಎಂಇ ಇಕೋ ಸಿಸ್ಟಮ್ ಉತ್ತಮವಾಗಿದೆ. ಮಾನದಂಡ ಇರುವ ಪ್ರತಿಯೊಬ್ಬರಿಗೂ ಯಾವುದೇ ಖಾತರಿ ಇಲ್ಲದೆ 10 ಕೋಟಿ ರೂ.ವರೆಗೆ ಸಾಲ ನೀಡುವ ಏಕೈಕ ದೇಶ ಭಾರತ ಎಂದರು.
ಕರ್ನಾಟಕ ನ್ಯೂ ಇಂಡಿಯಾ ಪಾಲಿಸಿ ಪ್ರಕಾರ, ಹೊಸ ಘಟಕದ ಪ್ರಾರಂಭ ಅಥವಾ ಘಟಕ ವಿಸ್ತರಣೆ ಮಾಡುವುದಾರೆ ಸ್ಟ್ಯಾಂಪ್ ಡ್ಯೂಟಿಯಲ್ಲಿ ಸಂಪೂರ್ಣ ವಿನಾಯಿತಿ ನೀಡಲಾಗುತ್ತಿದೆ. ಬ್ಯಾಂಕಿನವರೂ ಈ ಬಗ್ಗೆ ತಿಳಿಸುವುದಿಲ್ಲ. ಇದರ ಮಾಹಿತಿ ಕೊರತೆಯಿಂದ ಹೆಚ್ಚಿನವರು ಸ್ಟ್ಯಾಂಪ್ ಡ್ಯೂಟಿ ಪಾವತಿಸುತ್ತಾರೆ. ಪ್ರವಾಸೋದ್ಯಮ ಪ್ರಾರಂಭಿಸುವವರಿಗೂ ಕೆಲವು ಸ್ಟ್ಯಾಂಪ್ ಡ್ಯೂಟಿಯಲ್ಲಿ ವಿನಾಯಿತಿಗಳಿವೆ ಎಂದರು.
ದೇಶದ ಎಲ್ಲಾ ಬ್ಯಾಂಕ್ಗಳು 38.5 ಲಕ್ಷ ಕೋಟಿ ರೂ.ವನ್ನು ಎಂಎಸ್ಎಂಇ ವಲಯಕ್ಕೆ ಸಾಲ ನೀಡಿದೆ. ಶೇ.97 ರಷ್ಟು ಎಂಎಸ್ಎಂಇ ಮೈಕ್ರೋ ಹಾಗೂ ಶೇ.2ರಷ್ಟು ಎಂಎಸ್ಎಂಇಗಳು ಸಣ್ಣ, ಶೇ.1ಕ್ಕಿಂತ ಕಡಿಮೆ ಮಧ್ಯಮ ಎಂಎಸ್ಎಂಇಗಳಾಗಿವೆ. ಕೃಷಿ, ರಿಯಲ್ ಎಸ್ಟೇಟ್ನ ಬಿಲ್ಡರ್ಸ್ ಆಂಡ್ ಡೆವಲಪ್ಪರ್ಸ್ ಹೊರತುಪಡಿಸಿ ಉಳಿದೆಲ್ಲಾ ಉದ್ಯಮಗಳು ಎಂಎಸ್ಎಂಇ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇಂತಹ ಎಂಎಸ್ಎಂಇಗಳಿಗೆ ವಿಶ್ವದಲ್ಲಿರುವ ಎಲ್ಲಾ ಸರ್ಕಾರಗಳು ಹೆಚ್ಚಿನ ಒತ್ತು ನೀಡುತ್ತದೆ. ಸ್ಪಾರ್ಟ್ಅಪ್ನವರಿಗೆ ಸ್ಟಾರ್ಟ್ಅಪ್ ಇಂಡಿಯಾ ಸೀಡ್ ಫಂಡಿಂಗ್ ಸ್ಕೀಂ ಇದ್ದು, ಇತ್ತೀಚಿನ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಅರ್ಹರಿಗೆ 50 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ನಿಧಿ ಪ್ರಯಾಸ್ ಗ್ರಾಂಟ್ ಮೂಲಕ 10 ಲಕ್ಷದವರೆಗೆ ನೀಡಲಾಗುತ್ತದೆ. ಹೀಗೆ ಅನೇಕ ನೆರವು ಸ್ಕೀಂಗಳು ಇವೆ. ಆಹಾರೋದ್ಯಮ ಪ್ರಾರಂಭಿಸುವವರಿಗೆ ಸಾಲದ ಮೇಲೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಪಿಎಂಇಜಿಪಿ ಮೂಲಕ ಉತ್ಪಾದಕರಿಗೆ ಯಾವುದೇ ದಾಖಲೆ ಇಲ್ಲದೆ 50 ಲಕ್ಷದ ವರೆಗೆ, ಟ್ರೇಡಿಂಗ್ ಮತ್ತು ಸರ್ವಿಸ್ನವರಿಗೆ 20 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ನೀವು ಯೋಜನೆ ಮಾಡುವ ಸ್ಪೆಷಲ್ ಎಂಟರ್ಪ್ರಿನರ್ಗಳಿಗೆ ಶೇ.35ರಷ್ಟು ಸಬ್ಸಿಡಿ, ನಗರ ಪ್ರದೇಶಗಳಲ್ಲಿ ಯೋಜನೆ ಮಾಡುವ ಸ್ಪೆಷಲ್ ಎಂಟರ್ಪ್ರಿನರ್ಗಳಿಗೆ ಶೇ.25ರಷ್ಟು ಸಬ್ಸಿಡಿ, ಗ್ರಾಮೀಣ ಭಾಗದಲ್ಲಿ ಜನರಲ್ ಇಂಟರ್ಪ್ರಿನರ್ ಪ್ರಾಜೆಕ್ಟ್ ಮಾಡುವವರಿಗೆ ಶೇ.15 ರಷ್ಟು ಸಬ್ಸಿಡಿ, ನಗರ ಪ್ರದೇಶದಲ್ಲಿ ಜನರಲ್ ಇಂಟರ್ಪ್ರಿನರ್ ಪ್ರಾಜೆಕ್ಟ್ ಮಾಡುವವರಿಗೆ ಶೇ.25 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಸಾಲ ತೆಗೆದು ಮೂರು ವರ್ಷ ಸರಿಯಾಗಿ ಮರುಪಾವತಿ ಮಾಡಿದ್ದರೆ ಘಟಕ ವಿಸ್ತರಣೆಗೆ 1 ಕೋಟಿ ರೂ.ವರೆಗೆ ಸಾಲ ನೀಡಲಾಗುತ್ತದೆ. ಇದಕ್ಕೆ ಶೇ.15ರಷ್ಟು ಸಬ್ಸಿಡಿ ಇರುತ್ತದೆ. ಸರ್ವಿಸ್ ಆಂಡ್ ಟ್ರೇಡ್ನವರಿಗೆ 25 ಲಕ್ಷದ ವರೆಗೆ ಸಾಲ ನೀಡುತ್ತಾರೆ. ಇವರಿಗೂ ಶೇ.15 ರಷ್ಟು ಸಬ್ಸಿಡಿ ನೀಡಲಾಗುತ್ತದೆ ಎಂದರು.
ಮಹಿಳೆಯರಿಗೆ ಅನೇಕ ಯೋಜನೆಗಳಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೇವಲ 5 ಪರ್ಸೆಂಟ್ ಮಾರ್ಜಿನ್ನಲ್ಲಿ 1 ಕೋಟಿ ರೂ.ವರೆಗೆ, ಕೇವಳ 15 ಪರ್ಸೆಂಟ್ ಮಾರ್ಜಿನ್ನಲ್ಲಿ 10 ಕೋಟಿ ರೂ.ವರೆಗೆ ಸಾಲ ನೀಡಲಾಗುತ್ತದೆ. ಪಿಎಂ ವಿಶ್ವಕರ್ಮ ಸ್ಕೀಂ, ಪಿಎಂ ಸ್ವಾ ನಿಧಿ ಸ್ಕೀಂ ಮೂಲಕವೂ ಸಾಲ ನೀಡಲಾಗುತ್ತದೆ. ಯಂತ್ರಗಳಿಗೆ ಸಂಬಂಧಿಸಿ ಉದ್ಯಮ ಪ್ರಾರಂಭಿಸುವವರಿಗೆ ಎಂಸಿಜಿಎಸ್-ಎಂಎಸ್ಎಂಇ ಸ್ಕೀಂ ಮೂಲಕ 100 ಕೋಟಿ ವರೆಗೆ ಸಾಲ ನೀಡಲಾಗುತ್ತದೆ.
ಬೊಲ್ಪು ವಿಶೇಷ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಜಾನ್ಸನ್ ಟೆಲ್ಲಿಸ್, ಮಂಗಳೂರಿನಲ್ಲಿ ಉದ್ಯಮ ಪ್ರಾರಂಭಿಸಲು ಮಂಗಳೂರಿನವರಿಗೆ ನೆರವಾಗಲು ಬೊಲ್ಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಯಮ ಪ್ರಾರಂಭಿಸುವವರಿಗೆ ಅಥವಾ ಉದ್ಯಮ ಅಭಿವೃದ್ಧಿ ಮಾಡಲು ಬಯಸುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಯಾವುದೇ ಉದ್ಯಮ ಪ್ರಾರಂಭಿಸಿ ದೊಡ್ಡಮಟ್ಟದಲ್ಲಿ ಬೆಳೆಸಲು ಸಾಧ್ಯವಾಗದಿದ್ದರೂ ಅಪ್ ಗ್ರೇಡ್ ಆಗಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ ಅವರು, ಬೊಲ್ಪು ಯೋಜನೆಯ ಮೂಲಕ ಕರಾವಳಿ ಪ್ರವಾಸೋದ್ಯಮ, ಮೆಡಿಕಲ್, ಕೈಮಗ್ಗ, ಅಗ್ರಿ ಟೆಕ್, ಸಾವಯವ ಕೃಷಿ, ಡಿಜಿಟಲ್ ಸೊಲ್ಯೂಷನ್, ಬಯೋ ಟೆಕ್ನಾಲಜಿ, ಆಯುರ್ವೇದ, ಮೀನುಗಾರಿಕೆ ಇತ್ಯಾದಿ ಉದ್ಯಮಗಳಿಗೆ ಬೆಂಬಲ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವವರು ತಮ್ಮ ಯೋಜನೆಯ ಸಂಪೂರ್ಣ ಮಾಹಿತಿಯೊಂದಿಗೆ ಸಲ್ಲಿಸತಕ್ಕದ್ದು. ಯಾವ ಸೌಲಭ್ಯಗಳ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ನೆರವು ಒದಗಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಉದ್ಯಮ ಪ್ರಾರಂಭಿಸಲು ಅಥವಾ ಉದ್ಯಮವನ್ನು ವಿಸ್ತರಿಸಲು ಬಯಸುವವರು bolpumangaluru.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದ ಅವರು, ಮಂಗಳೂರಿನವರಿಗಾಗಿ 25 ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಅನುದಾನ ಇಡಲಾಗುತ್ತದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿರ್ದೇಶಕ ಶ್ರೀಕಾಂತ್ ಮೂಡೆತ್ತಾಯ ಹಾಗೂ ಸುದ್ದಿ ಬಿಡುಗಡೆಯ ಹಿರಿಯ ಪತ್ರಕರ್ತ ಉಮೇಶ್ ಮಿತ್ತಡ್ಕ ಅವರು ಕ್ರಮವಾಗಿ ಜಾನ್ಸನ್ ಟೆಲ್ಲಿಸ್ ಮತ್ತು ಎಸ್.ಎಸ್.ನಾಯಕ್ ಅವರ ವ್ಯಕ್ತಿ ಪರಿಚಯ ಮಾಡಿದರು.
ಬೊಲ್ಪು ಯೋಜನೆಯ ನಿರ್ದೇಶಕ ಕಾರ್ತಿಕ್ ಎಸ್ ರೈ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಮನೋಜ್, ಸಂಘದ ನಿಯೋಜಿತ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ, ಸುದ್ದಿ ಬಿಡುಗಡೆ ಬೆಳ್ತಂಗಡಿ ವಾರ ಪತ್ರಿಕೆಯ ಸಿಇಒ ಸಿಂಚನ ಊರುಬೈಲ್, ಸುದ್ದಿ ಬಿಡುಗಡೆ ಪುತ್ತೂರು ಪತ್ರಿಕೆಯ ಸಿಇಒ ಸೃಜನ್ ಊರುಬೈಲ್, ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ನ ಅಧ್ಯಕ್ಷರೂ ಆಗಿರುವ ಸುದ್ದಿ ಬಿಡುಗಡೆಯ ಮಂಗಳೂರು ಪ್ರತಿನಿಧಿ ಭಾಸ್ಕರ್ ರೈ ಕಟ್ಟಾ, ಉದ್ಯಮಿ ರಾಜೇಶ್ ಸೀತಾರಾಮ್ ಮತ್ತಿತರರು ಉಪಸ್ಥಿತರಿದ್ದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ ಪೈ ಅವರು ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಮಧುಚಂದ್ರ ಎಲಿಯ, ಭವಿಷ್ ಗೌಡ ಚಾರ್ವಕ, ಕಿರಣ್ ಬೆಟ್ಟಂಪಾಡಿ, ಭರತ್ ಶಾಂತಿನಗರ ಸಹಕರಿಸಿದರು.

ಮಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ:
ಆಸಕ್ತರಿಗೆ ಅರಿವು ಕೇಂದ್ರದ ಮೂಲಕ ರಿಯಾಯಿತಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ಎಂಪಿಸಿ-ರೋಟರಿ, ಕೋಸ್ಟಲ್ ಎಂಎಸ್ಎಂಇ ಸ್ಟಾರ್ಟ್ಅಪ್ ಕಾನ್ಕ್ಲೇವ್-2025 ಎಂಬ ವಿಶೇಷ ಕಾರ್ಯಕ್ರಮನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಹಳೆ ಡಿಸಿ ಕಚೇರಿ ಕಾಂಪೌಂಡ್ ಬಳಿ ಇರುವ ರೆಡ್ಕ್ರಾಸ್ ಪ್ರೇರಣಾ ಹಾಲ್ನಲ್ಲಿ ಸೆ.20 ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ರೂ. 1500 ನೋಂದಣಿ ಶುಲ್ಕವಿದ್ದು, ಅರಿವು ಎಂಟರ್ಪ್ರೈಸಸ್ ಮೂಲಕ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಅದರಂತೆ 1000 ರೂ. ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಎಸ್ಎಸ್ ನಾಯಕ್ ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಅರಿವು ಕೇಂದ್ರದ ನಂಬರನ್ನು ಸಂಪರ್ಕಿಸಬಹುದು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರು ಹೇಳಿದರು. ಮೊ: 8050293990 ಸಂಪರ್ಕಿಸಿರಿ.
ಕೈಗಾರಿಕಾ ಪ್ರದೇಶದ ಅವಶ್ಯಕತೆ
ಕಾರ್ಯಕ್ರಮದ ವೇಳೆ, ಸ್ಥಳೀಯವಾಗಿ ಕೈಗಾರಿಕಾ ಪ್ರದೇಶದ ಅವಶ್ಯಕತೆ ಇರುವ ಬಗ್ಗೆ ಉದ್ಯಮಿಗಳು ತಿಳಿಸಿದರು. ಈ ಬಗ್ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಗಮನಕ್ಕೆ ತರಲಾಗುವುದು ಎಂದು ಸಂಪನ್ಮೂಲ ವ್ಯಕ್ತಿ ಜಾನ್ಸನ್ ಟೆಲ್ಲಿಸ್ ಭರವಸೆ ನೀಡಿದರು.