545 ಕೋಟಿ ರೂ. ವ್ಯವಹಾರ – ರೂ. 2,01,68,360.36 ಲಾಭ – 12% ಡಿವಿಡೆಂಟ್
ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ 2024-25ನೇ ಸಾಲಿನಲ್ಲಿ 545 ಕೋಟಿ ರೂ. ವ್ಯವಹಾರ ನಡೆಸಿ ರೂ. 2,01,68,360.36 ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 12% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು ಹೇಳಿದರು.

ಅವರು ಉರಿಮಜಲಿನಲ್ಲಿರುವ ಇಡ್ಕಿದು ಸೇವಾ ಸಹಕಾರಿ ಸಂಘದ ‘ಶತಾಮೃತ’ದ ಅವರಣದಲ್ಲಿ ಸೆ.9ರಂದು ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರ್ಷಾಂತ್ಯಕ್ಕೆ ಸಂಘದಲ್ಲಿ 4085 ಸದಸ್ಯರಿದ್ದು ರೂ.4,35,72,756ಪಾಲು ಬಂಡವಾಳವಿದೆ. ರೂ.7,65,80,482.51 ವಿವಿಧ ನಿಧಿಗಳಿವೆ. ರೂ.112.23ಕೋಟಿ ಠೇವಣಿ ಇದೆ. ದುಡಿಯುವ ಬಂಡವಾಳ ರೂ.129.86ಕೋಟಿ ಹೊಂದಿದೆ. ಸದಸ್ಯರಿಗೆ ವಿತರಿಸಿದ ಸಾಲಗಳ ಪೈಕಿ ಶೇ.95 ವಸೂಲಾತಿಯಾಗಿದೆ. ಬ್ಯಾಂಕೇತರ ವ್ಯವಹಾರ ಹಾಗೂ ಸೇವಾಕಾರ್ಯಗಳಲ್ಲಿ ರೂ.7,76,52,027.00, ವ್ಯವಹಾರಮಾಡಿ ರೂ. 47,12,713.24 ಲಾಭ ಗಳಿಸಿರುತ್ತದೆ. ಸರಕಾರದಿಂದ ಸುಮಾರು ಎರಡೂವರೆ ಕೋಟಿ ರೂಪಾಯಿ ಬಡ್ಡಿ ಬರಲು ಬಾಕಿ ಇದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ.

ಇದೇ ಸಂದರ್ಭದಲ್ಲಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್.ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ ಅವರು ಇಡ್ಕಿದು ಸೇವಾ ಸಹಕಾರಿ ಸಂಘ ಒಂದು ಚಳವಳಿಯನ್ನು ಮಾಡುತ್ತಿದೆ. ಗ್ರಾಮದ ಜನರ ಏಳಿಗೆಗಾಗಿ ಸದಾ ಶ್ರಮಿಸುತ್ತಿದೆ. ಎಲ್ಲಾ ವಸ್ತುಗಳು ಒಂದೇ ಜಾಗದಲ್ಲಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹಿರಿಯರು ಕಟ್ಟಿದ ಸಂಸ್ಥೆ ಇದು. ನಾವೆಲ್ಲರೂ ಒಂದೇ ದಿಕ್ಕಿನಲ್ಲಿ ಸಾಗಿ ಈ ಸಹಕಾರ ಸಂಘವನ್ನು ಬೆಳೆಸೋಣ ಎಂದರು.

ಸದಸ್ಯರ ಸಲಹೆಗಳು
ದ.ಕ.ಜೇನು ವ್ಯವಸಾಯಗಾರರ ಸಹಕಾರ ಸಂಘದ ಉಪಾಧ್ಯಕ್ಷರಾದ ಪಿ. ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತುರವರು ಮಾತನಾಡಿ ಕ್ಷೇಮ ನಿಧಿಯನ್ನು ಮೊತ್ತವನ್ನು ಸಿಬ್ಬಂದಿಗಳಿಗೆ ಸರಿಯಾದ ರೀತಿಯಲ್ಲಿ ಬಳಕೆ ಮಾಡುವಂತೆ ಸಲಹೆ ನೀಡಿದರು. ಸಾಲ ವಸೂಲತಿಯ ವಿಚಾರದಲ್ಲಿ ಸಂಸ್ಥೆಯ ಬೆಳವಣಿಗೆಗೆ ಸಮಸ್ಯೆಯಾಗದ ರೀತಿಯಲ್ಲಿ ಸಾಲ ಮರುಪಾವತಿಸದವರ ವಿರುದ್ದ ಕಾನೂನಾತ್ಮಕವಾಗಿ ಸಹಕಾರಿ ನಿಯಮವಾಳಿಗಳಂತೆ ಕ್ರಮ ಕೈಗೊಳ್ಳುವುದು ಸಂಸ್ಥೆ ಅಭಿವೃದ್ಧಿಯ ದೃಷ್ಟಿಯಲ್ಲಿ ಒಳಿತು ಎಂದು ಅಭಿಪ್ರಾಯ ತಿಳಿಸಿದರು.

ಈ ವೇಳೆ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲುರವರು ಮಾತನಾಡಿ, ಆದಷ್ಟು ಸಾಲಗಾರರನ್ನು ಮನವೊಲಿಸಿ ಸಾಲ ಮರುಪಾವತಿ ಮಾಡಿಸುವ ಕೆಲಸ ಮಾಡಲಾಗುತ್ತಿದೆ. ಉಳಿದಂತೆ ಸುಸ್ತಿದಾರ ಸಾಲಗಾಗರಿಗೆ ಬಡ್ಡಿಯಲ್ಲಿ ವಿನಾಯಿತಿ ನೀಡಿ ಮರುಪಾವತಿ ಮಾಡಿಸಲಾಗುತ್ತಿದೆ ಎಂದರು.

ಕೊಂಕೋಡಿ ಪದ್ಮನಾಭ ರವರು ಮಾತನಾಡಿ ಸಂಸ್ಥೆ ಜನ ಕಲ್ಯಾಣದ ಕೆಲಸ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತಸ ತಂದಿದೆ. ಇದು ಆಡಳಿತ ಮಂಡಳಿಯ ಅಭಿನಂದನೀಯ ಕೆಲಸ ಎಂದರು.

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಕೆ.ಎಸ್. ಉರಿಮಜಲುರವರು ಮಾತನಾಡಿ ರೂ 5೦ ಲಕ್ಷದವರೆಗೆ ಸಾಲ ವಿತರಣೆ ಮಾಡುತ್ತಿದ್ದೀರಿ. ತುಂಬಾ ಒಳ್ಳೆಯ ವಿಚಾರ. ನಾವುಗಳು ಅಂತಹ ಲೋನ್ ನೀಡುವ ಸದಸ್ಯನಿಗೆ ಇನ್ಶ್ಯೂರೆನ್ಸ್ ಮಾಡಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲುರವರು ಮಾತನಾಡಿ ಈಗಾಗಲೇ ಆ ಬಗ್ಗೆ ಆಲೋಚನೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ಶೂರೆನ್ಸ್ ವಿಚಾರವನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದರು.

ಇಡ್ಕಿದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರುರವರು ಮಾತನಾಡಿ ಸಂಘದ ಉಪಕಾರ ನಿಧಿಯಿಂದ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಡ್ಕಿದು ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಶಿವಪ್ರಸಾದ್ ಕೂವೆತ್ತಿಲರವರು ಮಾತನಾಡಿ ವಿದ್ಯಾಮೃತ ಯೋಜನೆ ಅಡಿಯಲ್ಲಿ ಸಿಇಟಿ ಕೋಚಿಂಗ್ ನೀಡುವ ಕೆಲಸವನ್ನು ನಮ್ಮ ಸಂಘದಿಂದ ಆಗಬೇಕಿದೆ. ಅದು ನಮ್ಮ ಗ್ರಾಮದ ಹಲವಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಹಾಗೂ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗುವುದು ಎಂದರು.

ಹಿರಿಯ ಸದಸ್ಯರಿಗೆ ಸನ್ಮಾನ
ಹಿರಿಯ ಸದಸ್ಯರಾದ ಪದ್ಮನಾಭ ಬಲ್ಯಾಯ ಅಳಕೆಮಜಲು, ಲಿಂಗಪ್ಪ ಗೌಡ ಸೂರ್ಯ, ಬೇಜ್ಮಿ ವೇಗಸ್, ಕೃಷ್ಣ ಭಟ್ ಎಂ., ಲಕ್ಷ್ಮೀ ಅಮ್ಮ ಮಿತ್ತೂರು, ನಾರಾಯಣ ಭಟ್ ಎಮ್. ಎಸ್., ಕೇಶವ ಭಟ್ ಎಮ್., ಪಾರ್ವತಿ ಅಮ್ಮ ಎಮ್. ದಾಸಮೂಲೆ, ಶ್ರೀರಂಗ ಭಟ್ ಮಿತ್ತೂರು, ಗಣೇಶ್ ಭಟ್ ಮೈಕೆ.ರವರನ್ನು ಸನ್ಮಾನಿಸಲಾಯಿತು.

ಅಡಿಕೆ & ತೆಂಗಿನ ಕಾಯಿ ಕೀಳುವ ವೃತ್ತಿಯವರಿಗೆ ಸನ್ಮಾನ
ಇಡ್ಕಿದು – ಕುಳ ಗ್ರಾಮದ ಅಡಿಕೆ ಮತ್ತು ತೆಂಗಿನಕಾಯಿ ಕೀಳುವ ಹಾಗೂ ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವ ವೃತ್ತಿ ನಿರ್ವಹಿಸುವ ತುಕ್ರ ನೇರ್ಲಾಜೆ, ಕೂಸಪ್ಪ ಮೂಲ್ಯ ಮದಕ, ರಾಮ ಸಪಲ್ಯ ಮಿತ್ತೂರು, ತಿಮ್ಮಯ್ಯ ಸಪಲ್ಯ ಕೋಲ್ಪೆ, ವಂಕಪ್ಪ ಮೂಲ್ಯ ಉರಿಮಜಲು, ಸಂಕಪ್ಪ ಗೌಡ ಅರ್ಕೆಚ್ಚಾರು, ಕೃಷ್ಣಪ್ಪ ಪೂಜಾರಿ ಕಾರ್ಯಾಡಿ, ಸಂಕಪ್ಪ ಗೌಡ ಸೂರ್ಯ, ಪೂವಪ್ಪ ಮೂಲ್ಯ ಕೊಳಂಬೆ, ಸೀತಾರಾಮ ಗೌಡ ಕೋಡಿಜಾಲು, ದೇವಪ್ಪ ಗೌಡ ಕೋಂತ್ಯೋಟ್ಟು, ಈಶ್ವರ ಗೌಡ ಕರ್ಗಲ್ಲುರವರನ್ನು ಗುರುತಿಸಲಾಯಿತು.

ನಿವೃತ್ತ ಸಿಬ್ಬಂದಿಗಳಿಗೆ / ವಿವಿಧ ಸಾಧಕರಿಗೆ ಸನ್ಮಾನ
ಸಂಘದ ನಿವೃತ್ತ ಸಿಬ್ಬಂದಿಗಳಾದ ಚೆನ್ನಪ್ಪ ಕೆ. ಹಾಗೂ ಗಂಗಾಧರ ಡಿ., ರವರನ್ನು ಸನ್ಮಾನಿಸಲಾಯಿತು. ರುದ್ರಭೂಮಿಯಲ್ಲಿ ದುಡಿಯುತ್ತಿರುವ ನಾರಾಯಣ ನಾಯ್ಕ್, ರವರನ್ನು ಸನ್ಮಾನಿಸಲಾಯಿತು.
ನವದೆಹಲಿಯಲ್ಲಿ ನಡೆದ SNIC PM ರ್ಯಾಲಿಯಲ್ಲಿ ಭಾಗವಹಿಸಿದ ಶಿವಕಿರಣ್, 2024-25ನೇ ಸಾಲಿನ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಖೋ.ಖೋ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಲಿಖಿತ್ ಎಸ್., ಕಬಡ್ಡಿ ಪಂದ್ಯಾಟದಲ್ಲಿ ತೃತೀಯ ಸ್ಥಾನ ಪಡೆದ ಲೋಚನಾ ಎಂ., ಮದ್ಯಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ತೃತೀಯ ಸ್ಥಾನ ಪಡೆದ ಸುಶಾ ಎಂ.,
ಗುಜರಾತ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ತೃತೀಯ ಸ್ಥಾನ ಪಡೆದ ಭೂಮಿಕಾ ಕೆ.ರವರನ್ನು ಸನ್ಮಾನಿಸಲಾಯಿತು.

ಗೌರವಾರ್ಪಣೆ / ನಗದು ಪುರಸ್ಕಾರ
ಇಡ್ಕಿದು – ಕುಳ ಗ್ರಾಮದ ಅಂಗನವಾಡಿ ಸಹಾಯಕಿಯರು, ಉತ್ತಮ ರೀತಿಯಲ್ಲಿ ಉಳಿಕೆ ಹಾಗೂ ಸಾಲದ ವ್ಯವಹಾರ ನಡೆಸಿದ ನವೋದಯ ಗುಂಪುಗಳನ್ನು ಗೌರವಿಸಲಾಯಿತು. ೨೦೨೪-೨೫ನೇ ಸಾಲಿನಲ್ಲಿ ಇಡ್ಕಿದು – ಕುಳ ವ್ಯಾಪ್ತಿಯ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ನಿರ್ದೇಶಕರಾದ ಚಂದ್ರಹಾಸ ಕಂರ್ದೆಲು, ಜಯಂತ ಕಂಪ, ನವೀನ ಕೆ.ಪಿ. ಪಾಂಡೇಲು, ಉಮೇಶ್ ವಡ್ಯರ್ಪೆ, ಲೋಹಿತಾಶ್ವ ಎಂ. ಮುಂಡ್ರಬೈಲು, ಸತೀಶ ಕೆ. ಅಳಕೆಮಜಲು, ಆನಂದ ಕೆ. ಅಡ್ಯಾಲು, ಹೃಷಿಕೇಶ ಕೆ.ಎಸ್., ಪದ್ಮಾವತಿ ಕೂವೆತ್ತಿಲ, ವಿದ್ಯಾ ವಿ., ನಾಮನಿರ್ದೆಶಕರಾದ ಯೋಗೀಶ್ ಹೆಚ್., ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ವಾರ್ಷಿಕ ವರದಿ ವಾಚಿಸಿದರು. ಸಿಬ್ಬಂದಿ ವಿಶಂತಿ ಶೆಟ್ಟಿ ಪ್ರಾರ್ಥಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ಸ್ವಾಗತಿಸಿದರು. ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ ವಂದಿಸಿದರು. ಸಿಬ್ಬಂದಿಗಳಾದ ಈಶ್ವರ ಕುಲಾಲ್ ಹಾಗೂ ಸಂಜೀವ ಪೆಲತ್ತಿಂಜ ಸಹಕರಿಸಿದರು.

ದಾಖಲೆಯ ಸದಸ್ಯರ ಉಪಸ್ಥಿತಿ ಅಧ್ಯಕ್ಷರ ಸಹಿತ ಆಡಳಿತ ಮಂಡಳಿಯ ಕಾರ್ಯ ವೈಖರಿಗೆ ಮೆಚ್ಚುಗೆ
ಮಹಾಸಭೆಗೆ ಈ ಬಾರಿ 2500ಕ್ಕೂ ಅಧಿಕ ಸದಸ್ಯರು ಆಗಮಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ವಿವಿಧ ಸಮಾಜಮುಖಿಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ 2 ಕೋಟಿ ರೂಪಾಯಿಗೂ ಮಿಕ್ಕಿ ಲಾಭಾಂಶ ಗಳಿಸುವಲ್ಲಿ ಪ್ರಯತ್ನಿಸಿದ ಸಂಘದ ಅಧ್ಯಕ್ಷರು, ನಿರ್ದೇಶಕ ಮಂಡಳಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸದಸ್ಯರುಗಳು ಅಭಿನಂದನೆ ಸಲ್ಲಿಸಿದರು. ಮಾತ್ರವಲ್ಲದೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.

ಸಂಘದ ವಿಶೇಷ ಯೋಚನೆ – ಯೋಜನೆ
ಎರಡೂವರೇ ವರ್ಷಗಳ ಒಳಗೆ ಕೇಂದ್ರ ಕಚೇರಿ ಆವರಣದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣ ಮಾಡುವ ಯೋಚನೆ ಇದೆ. ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಿಕೊಂಡಿದ್ದು, ಇಡ್ಕಿದು – ಕುಳ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಲಾಭಾಂಶದಲ್ಲಿ ಸುಮಾರು ಹತ್ತುಲಕ್ಷ ರೂಪಾಯಿಯ ಮೊತ್ತವನ್ನು ಗ್ರಾಮೀಣ ರಸ್ತೆ ಅಭಿವೃದ್ಧಿ, ಶಾಲೆಗಳ ಅಗತ್ಯ ಕೊಠಡಿ ನಿರ್ಮಾಣ, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬಸ್ಸು ತಂಗುದಾಣ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಸಂಘದ ವತಿಯಿಂದ ಸೂರ್ಯ ರಸ್ತೆಗೆ 10 ಲಕ್ಷ ರೂಪಾಯಿ ಮೊತ್ತದ ರಸ್ತೆ ಕಾಂಕ್ರಿಟಿಕರಣ ನಡೆದಿದೆ. ಮುಂದಿನ ಭಾರಿ ಕುಳ ಗ್ರಾಮಕ್ಕೆ 10 ಲಕ್ಷ ರೂಪಾಯಿ ವೆಚ್ಚದ ಕೆಲಸ ಕಾರ್ಯಗಳನ್ನು ಮಾಡಲಾಗುವುದು. ಸಂಘದಿಂದ ಸಾಲಪಡೆದಿದ್ದ ಸದಸ್ಯರು ಅನಿರೀಕ್ಷಿತ ಅವಘಡ, ಅಪಘಾತಗಳಲ್ಲಿ ಮರಣಹೊಂದಿದಲ್ಲಿ ಅಂತವರ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಸಂಘದಿಂದ ರೂ 50000ವನ್ನು ಅವರ ಸಾಲದ ಮೊತ್ತದಿಂದ ಮನ್ನಾ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಎಲ್ಲರೂ ಸಹಕಾರದೊಂದಿಗೆ ಸಂಘದ ಬೆಳವಣಿಗೆ ಸಾಧ್ಯ

ಇಡ್ಕಿದು – ಕುಳ ಎರಡೂ ಗ್ರಾಮ ನಮ್ಮ ಸಂಘದ ಎರಡು ಕಣ್ಣುಗಳಿದ್ದಂತೆ. ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂಧಿಸುವ ಹೆಮ್ಮೆಯ ಸಂಸ್ಥೆ ಇದಾಗಿದೆ. ಸಂಘ ಏನೇ ಲಾಭ ಮಾಡಿದ್ದರು, ಪ್ರಶಸ್ತಿಗಳನ್ನು ಪಡೆದಿದ್ದರೂ ಅದು ಸದಸ್ಯ ಬಾಂಧವರ ಸಹಕಾರದಿಂದ ಆಗಿದೆ. ಈಗಾಗಲೇ ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಡಿಯಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲಾಗಿದೆ. ಗ್ರಾಮದ ಪ್ರತೀ ಮನೆಯ ಪ್ರತಿಯೊಬ್ಬರೂ ನಮ್ಮ ಸಂಘದ ಸದಸ್ಯರಾಗಬೇಕೆನ್ನುವುದು ನಮ್ಮ ಆಶಯವಾಗಿದೆ.
ಸುಧಾಕರ್ ಶೆಟ್ಟಿ ಬೀಡಿನಮಜಲು, ಅಧ್ಯಕ್ಷರು, ಇಡ್ಕಿದು ಸೇವಾ ಸಹಕಾರಿ ಸಂಘ