ಸ್ವಚ್ಚತೆ ನಮ್ಮ ಜೀವನದ ಅವಿಭಾಜ್ಯ ಅಂಗ- ವೆಂಕಟ್ರಮಣ ಬೋರ್ಕರ್
ನಿಡ್ಪಳ್ಳಿ; ಸ್ವಚ್ಚತೆ ಇಲ್ಲದಿದ್ದರೆ ಮನುಷ್ಯ ಬದುಕಲು ಸಾಧ್ಯವಿಲ್ಲ.ಇಡೀ ಪರಿಸರವನ್ನು ಮಲೀನಗೊಳಿಸದೆ ರೋಗ ಬಾರದ ರೀತಿಯಲ್ಲಿ ನಾವು ಸ್ವಚ್ಚವಾಗಿ ಇಟ್ಟುಕೊಳ್ಳ ಬೇಕು. ಆದುದರಿಂದ ಸ್ವಚ್ಛತೆ ನಮ್ಮ ಅವಿಭಾಜ್ಯ ಅಂಗ ಎಂದು ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಹೇಳಿದರು.

ನಿಡ್ಪಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ಇವರು ಸೆ.10ರಂದು ಸ್ವಚ್ಚತಾ ಶ್ರಮದಾನದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಒಂದು ಸಂಘಟನೆ ಕಟ್ಟಿಕೊಂಡು ಇಂತಹ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲಾ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ ನಾಯ್ಕ ಕೆದಿಲ ಮಾತನಾಡಿ ಉತ್ತಮ ಸಾಮಾಜಿಕ ಬದ್ದತೆಗೊಸ್ಕರ ನಾವು ಉತ್ತಮ ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ.ಪ್ರಧಾನಿಯವರ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಕೆಲಸ ಮಾಡಿ ಅವರ ಯೋಜನೆಗೆ ಅರ್ಥ ಬರುವ ನಿಟ್ಟಿನಲ್ಲಿ ನಾವು ಸ್ವಚ್ಚತಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಳೆದ 5 ವರ್ಷಗಳಿಂದ ಇದುವರೆಗೆ ಸುಮಾರು 50 ಸರಕಾರಿ ಶಾಲೆಗಳಲ್ಲಿ ನಾವು ಸ್ವಚ್ಚತೆ ಮತ್ತು ಶಾಲಾ ಕೈ ತೋಟ ರಚನೆ ಮಾಡಿದ್ದು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ ಅವರು ಮಕ್ಕಳಿಗೆ ಪಾಠದೊಂದಿಗೆ ಸಮಾಜದಲ್ಲಿ ಬದುಕುವ ಪಾಠವನ್ನು ಹೇಳಿಕೊಡ ಬೇಕು ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಾ ಎನ್ ಸಂಘಟನೆಯ ಕೆಲಸವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.ಸ್ವಚ್ಚತಾ ಸಂಚಾಲಕ ತಿರುಮಲೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೇಷಪ್ಪ ನಾಯ್ಕ ಮರ್ಕಿನಿ ವಂದಿಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯೆ ವಿಮಲಾ ದೈತೋಟ ಕಾರ್ಯಕ್ರಮ ನಿರೂಪಿಸಿದರು.ಬಾಲಕೃಷ್ಣ ನಾಯ್ಕ ಡಿ, ಅತಿಥಿ ಶಿಕ್ಷಕಿ ಸುಮಾ.ಡಿ,ಮರಾಟಿ ಸಂರಕ್ಷಣಾ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.ಸಭಾ ಕಾರ್ಯಕ್ರಮದ ನಂತರ ಶಾಲಾ ಸುತ್ತ ಸ್ವಚ್ಚತಾ ಶ್ರಮದಾನ ನಡೆಸಿದರು.