ಈ ಮುದಿತನವೇ ನನಗೆ ಶಾಪವಾಯಿತೇ?… ಅನಾಥ ಗೋವಿನ ಸ್ವಗತ!

0

ಈ ಮಳೆಗಾಳಿಗೆ ಬೆಚ್ಚಗಿನ ಹಟ್ಟಿಯಲ್ಲಿರಬೇಕೆಂಬ ಆಸೆಯಾಗುತ್ತಿದೆ. ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಬೇಕೆಂಬ ಮನಸ್ಸಾಗುತ್ತಿದೆ. ಈ ವೃದ್ಧಾಪ್ಯದ ಕಾಲದಲ್ಲಿ ಹೊಟ್ಟೆ ತುಂಬಾ ಉಂಡು ಒಂದೆಡೆ ಮಲಗಬೇಕೆಂಬ ಇಚ್ಚೆಯಾಗುತ್ತಿದೆ. ತನ್ನ ಕೊನೆ ಉಸಿರಿನ ತನಕ ಮಾಲಕನ ಪ್ರೀತಿಯಲ್ಲಿ ಮೈ ಮರೆಯಬೇಕೆಂದು ಮನವು ಹಾತೊರೆಯುತ್ತಿದೆ. ಆದರೆ ಈ ಮುದಿತನವೇ ನನಗೆ ಶಾಪವಾಯಿತೇ? ಓ ಭಗವಂತ ಮನುಜರು ಯಾಕೆ ಇಷ್ಟು ಕ್ರೂರವಾದರು ?


ಹೌದು…. ನಾನೊಂದು ಮೂಕ ಗೋವು. ಸಣ್ಣಳಿರುವಾಗ ನನ್ನ ಮಾಲಕನ ಪ್ರೀತಿಯಲ್ಲಿ ಬೆಳೆದವಳು. ನನ್ನ ಸಾಕಿ ಸಲಹಿದ ಮಾಲಕನಿಗೆ ನನ್ನ ಅಮೃತದಂತಹ ಹಾಲನ್ನು ಕೊಟ್ಟು ಮನೆಮಂದಿಯ ದಾಹವನ್ನು ತಣಿಸಿದವಳು. ಕೃಷಿಗೆ ಬೇಕಾದ ಸಗಣಿ- ಗಂಜಲವ ನೀಡಿ ಅವರ ಕುಟುಂಬವನ್ನು ಬೆಳೆಸಿದವಳು. ಬೆಳಗಿಸಿದವಳು. ಅಂದ ಚೆಂದದ ಮುದ್ದಾದ ಕರುಗಳನ್ನು ಹೆತ್ತು ಮಾಲಕನ ಮುಖದಲ್ಲಿ ಮಂದಹಾಸ ಮೂಡಿಸಿದವಳು. ತನ್ನ ಎಳೆಯ ಹರೆಯದಲ್ಲಿ ಆ ಮನೆಯವರ ಪ್ರೀತಿಗೆ ಪಾತ್ರಳಾದವಳು. ಇಂದು ನಾನು ಯಾರಿಗೂ ಬೇಡವಾಗಿದ್ದೇನೆ. ಅದಕ್ಕೆ ಕಾರಣ ನನ್ನ ಮುದಿತನವೇ? ಅನಾರೋಗ್ಯವೇ? ಹೇಳು ದೇವಾ….


ಕೆಲವರು ಶುದ್ಧ ಮನಸ್ಸಿನಿಂದ ನನ್ನ ಪರಿವಾರವನ್ನು ಗೋ ಮಾತೆ ಎಂದು ಪೂಜಿಸಿದರೆ, ಕೆಲವರು ರಾಜಕೀಯಕ್ಕಾಗಿ ಮಾತ್ರ ನನ್ನ ಪರಿವಾರವನ್ನು ಬಳಸಿಕೊಂಡು ಮರೆತವರಿದ್ದಾರೆ. ಜೀವನದಲ್ಲಿ ಹರೆಯ, ಆರೋಗ್ಯ ಇರುವಾಗ ಎಲ್ಲವೂ. ಏನೂ ಇಲ್ಲದೆ ನಿಷ್ಪ್ರಯೋಜಕರಾದಾಗ ಉಪಕಾರ ಪಡೆದುಕೊಂಡ ಮನೆಮಂದಿಗೂ ಬೇಡವಾಗುತ್ತಾರೆ ಎನ್ನುವುದಕ್ಕೆ ನನ್ನ ಬದುಕೇ ಸಾಕ್ಷಿ.


ಹೌದು…. ನಾನು ಮೂಕ ಗೋವು. ಮಾತಾ ಸ್ವರೂಪಿಣಿ. ಆದರೆ ನನಗೀಗ ಪ್ರಾಯವಾಯಿತು. ಗೊಡ್ಡು ದನವೆಂಬ ಹಣೆಪಟ್ಟಿಯೂ ಬಂತು. ಸಹಜ ವೃದ್ಧಾಪ್ಯದಲ್ಲಿ ಕಾಲುಗಳು ಊನಗೊಂಡು ನಡೆದಾದಲು ಕಷ್ಟ ಪಡುವ ಸ್ಥಿತಿ ನನ್ನದಾಯಿತು. ಆದ್ದರಿಂದ ಸಾಕಿ ಸಲಹಿದವರ ಪ್ರೀತಿಯನ್ನು ಕಳೆದುಕೊಳ್ಳುವಂತಳಾದೆ. ಕಳೆದ ಸುಮಾರು ನಾಲ್ಕೈದು ತಿಂಗಳಿಂದ ನನ್ನ ಬೆಚ್ಚಗಿನ ಹಟ್ಟಿಯಿಂದ ಹೊರದಬ್ಬಲ್ಪಟ್ಟೆ. ಈಗ ನಾನು ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮದ ದರ್ಬೆ ರಸ್ತೆಯ ಕಜೆ, ನೆಕ್ಕಲ ಪರಿಸರದಲ್ಲಿದ್ದೇನೆ. ಕಾಲು ಊನಗೊಂಡು ಸರಿಯಾಗಿ ನಡೆಯಲೂ ಆಗದ ನಾನು ಮೆಲ್ಲನೇ ಕಾಲೆಳೆದುಕೊಂಡು ಕಷ್ಟದಲ್ಲಿ ಆ ಕಡೆ ಈ ಕಡೆ ಹೋಗಿ ಅಲ್ಲೇ ರಸ್ತೆ ಬದಿಯಲ್ಲಿಯಲ್ಲಿರುವ ಅಲ್ಪಸ್ವಲ್ಪ ಹುಲ್ಲನ್ನು ಮೇಯ್ದು ಅರೆ ಹೊಟ್ಟೆ ತುಂಬಿಸಿ ಹಸಿವಿನಿಂದ ದಿನಕಳೆಯುತ್ತಿದ್ದೇನೆ. ಅಲ್ಲೇ ಎಲ್ಲಾದರೂ ಮರವಿದ್ದರೆ ಅದರ ನೆರಳಲ್ಲಿ ಮಲಗಿ ಬಿಸಿಲು, ಮಳೆ ಗಾಳಿಯಿಂದ ಸ್ವಲ್ಪ ರಕ್ಷಣೆ ಪಡೆಯುತ್ತಿದ್ದೇನೆ. ಅಕ್ಕಚ್ಚು, ಹಿಂಡಿಯ ಆಸೆಯನ್ನು ಬಿಟ್ಟಿದ್ದೇನೆ. ನನ್ನ ಸ್ಥಿತಿಯ ಬಗ್ಗೆ ೩೪ ನೆಕ್ಕಿಲಾಡಿಯ ಗ್ರಾಮ ಸಭೆಯಲ್ಲೂ ಪ್ರಸ್ತಾಪವಾಯಿತು. ಆಗ ನನ್ನ ಬದುಕಿನಲ್ಲಿ ಸಣ್ಣ ಭರವಸೆಯೊಂದು ಚಿಗುರಿತು. ಇನ್ನಾದರೂ ನನ್ನನ್ನು ಇಲ್ಲಿಂದ ಕೊಂಡು ಹೋಗಬಹುದೆಂಬ ನಿರೀಕ್ಷೆಯೂ ಬೆಳೆಯಿತು. ಆದರೆ ನನ್ನ ಆ ಕನಸುಗಳೆಲ್ಲಾ ಕನಸಾಗಿಯೇ ಉಳಿಯಿತು. ನನಗೀಗ ಅರ್ಥ ಆಗಿದೆ. ನನ್ನಿಂದ ಈಗ ಯಾವ ಉಪಕಾರ ಮಾಡಲು ಸಾಧ್ಯವಿಲ್ಲ. ನಾನು ಈಗ ನಿಷ್ಪ್ರಯೋಜಕಳು. ಆದ್ದರಿಂದ ನಾನು ಈಗ ಬೇಡವಾಗಿದ್ದೇನೆ. ಬೆಚ್ಚಗಿನ ಹಟ್ಟಿಯಿಂದ ಬೀದಿಗೆ ತಳ್ಳಲ್ಪಟ್ಟಿದ್ದೇನೆ ಎಂದು. ಬತ್ತಿಹೋದ ನನ್ನ ಕಣ್ಣುಗಳಲ್ಲಿ ಈಗ ಹನಿ ನೀರು ಬರುತ್ತಿಲ್ಲ. ಬಾಡಿ ಹೋದ ಬದುಕಲ್ಲಿ ಆಸೆಗಳು ಚಿಗುರುತ್ತಿಲ್ಲ. ಇನ್ನೇನಿದ್ದರೂ ಈ ಪ್ರಕೃತಿಯೇ ನನಗೆಲ್ಲಾ ಎಂದು ನೆನೆದು ದೇವರು ಕೊಟ್ಟ ಆಯಸ್ಸನ್ನು ಪೂರ್ತಿಗೊಳಿಸುತ್ತೇನೆ. ಒಂದು ಮಾತ್ರ ಪದೇ ಪದೇ ನನ್ನ ಮನದಲ್ಲಿ ಹಾದು ಹೋಗುತ್ತಿದೆ. ಹೌದು… ನಾನು ಈಗ ನತದೃಷ್ಟಳು. ಮನುಜನ ಸ್ವಾರ್ಥಕ್ಕೆ, ನಿಷ್ಕರುಣೆಗೆ ಬಲಿಯಾದವಳೆಂದು….!
ಇಂತಿ ವೃದ್ಧ ಗೋವು

34 ನೆಕ್ಕಿಲಾಡಿ ಗ್ರಾಮದ ಕಜೆ, ನೆಕ್ಕಲ ಪರಿಸರದಲ್ಲಿ ಕಳೆದ ಸುಮಾರು ನಾಲ್ಕೈದು ತಿಂಗಳಿನಿಂದ ಮಳೆ, ಗಾಳಿ, ಬಿಸಿಲಿಗೆ ಮೈಯೊಡ್ಡಿಕೊಂಡಿರುವ ಈ ಅನಾಥ ಗೋವನ್ನು ನೋಡುವಾಗ ಕರುಳು ಚುರುಕು ಎನ್ನುತ್ತದೆ. ಇದರಿಂದ ಉಪಯೋಗ ಪಡೆದುಕೊಂಡು ಉಪಯೋಗ ಸಿಗದಾಗ ಇದಕ್ಕೆ ಈ ರೀತಿಯ ಸ್ಥಿತಿ ತಂದವರ ಹೃದಯ ಹೀನತೆ ನೋಡಿದಾಗ ಮೈಜುಂ ಎನ್ನುತ್ತಿದೆ. ಈ ದನದ ನೋವಿನ ನೋವುಗಳನ್ನು ಹೇಳುವ ಮನದ ಮಾತಿನ ಕಾಲ್ಪನಿಕ ಅಕ್ಷರ ರೂಪ ಇಲ್ಲಿದೆ. ಬರಹ ಕಾಲ್ಪನಿಕವಾದರೂ ಅದರ ನೋವು, ಯಾತನೆ, ಸಂಕಟಗಳು ಮಾತ್ರ ಪಕ್ಕಾ ವಾಸ್ತವ.

LEAVE A REPLY

Please enter your comment!
Please enter your name here