ಪುತ್ತೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ ಯಶೋಗಾಥೆಯನ್ನು ಯುವ ಪೀಳಿಗೆಗೆ ಪರಿಚಯಿಸಲು ರಾಜ್ಯದಲ್ಲಿ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ದಕ್ಷಿಣ ಕರ್ನಾಟಕದಾದ್ಯಂತ ಬರುವ ರಥಯಾತ್ರೆ ಸೆ.15ಕ್ಕೆ ಮಧ್ಯಾಹ್ನ ಪುತ್ತೂರಿಗೆ ಬರಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಎಬಿವಿಪಿ ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ರಾಣಿ ಅಬ್ಬಕ್ಕ ಅವರ 500ನೇ ಜಯಂತ್ಯುತ್ಸವ ಪ್ರಯುಕ್ತ ಈ ಕಾರ್ಯಕ್ರಮ ರೂಪಿಸಲಾಗಿದೆ. ರಥಯಾತ್ರೆಯು ಸೆ.6ರಂದು ಆರಂಭವಾಗಿ ಸೆ.16ಕ್ಕೆ ಮಂಗಳೂರಿನಲ್ಲಿ ಸಮಾರೋಪ ನಡೆಯಲಿದೆ. ಅದಕ್ಕೆ ಮೊದಲು ಸೆ.15ಕ್ಕೆ ಉಪ್ಪಿನಂಗಡಿ ಮಾರ್ಗವಾಗಿ ಪುತ್ತೂರಿಗೆ ಬರುವ ರಥಯಾತ್ರೆಯನ್ನು ಮಧ್ಯಾಹ್ನ ಗಂಟೆ 2ಕ್ಕೆ ಪಡೀಲ್ನಲ್ಲಿ ಸ್ವಾಗತಿಸಿ, ಶೋಭಾಯಾತ್ರೆಯೊಂದಿಗೆ ನೆಹರುನಗರ ವಿವೇಕಾನಂದ ಕಾಲೇಜು ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮಧ್ಯಾಹ್ನ ಗಂಟೆ 3 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಕಿರಣ್ಚಂದ್ರ ಪುಷ್ಪಗಿರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದ ಅವರು ಪುತ್ತೂರಿನ ವಿವಿಧ ವಿದ್ಯಾಸಂಸ್ಥೆಗಳ ಎಬಿವಿಪಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಎಬಿವಿಪಿ ಮಂಗಳೂರು ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಸಿಂಚನ, ನಗರ ಕಾರ್ಯದರ್ಶಿ ಚರಣ್ರಾಜ್, ಸಹಕಾರ್ಯದರ್ಶಿ ರಕ್ಷಾ ಉಪಸ್ಥಿತರಿದ್ದರು.