ಕಾಣಿಯೂರು: ನಶಿಸಿ ಹೋಗುತ್ತಿರುವ ಪಾರಂಪರಿಕ ನಿತ್ಯೋಪಯೋಗಿ ಕರಕುಶಲ ವಸ್ತುಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಸದಾ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಕಡಬ ತಾಲೂಕಿನ ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಿದಿರಿನ ಬುಟ್ಟಿ ಹೆಣೆಯುವ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು.

ಸಾಂಪ್ರದಾಯಿಕವಾದ ಅದೆಷ್ಟೋ ಕೌಶಲಗಳನ್ನು ಮುಂದಿನ ಪೀಳಿಗೆಗೆ ತಿಳಿಪಡಿಸುವ ಪ್ರಯತ್ನವನ್ನು ಮಾಡುತ್ತಲೇ ಇದೆ. ಅಂತಹ ಕಲೆಗಳಲ್ಲಿ ಬಿದಿರು ಬುಟ್ಟಿ ತಯಾರಿಕೆಯೂ ಒಂದು. ಇತ್ತೀಚಿನ ದಿನಗಳಲ್ಲಿ ಅಪರೂಪವೆನಿಸುವ ಕರಕುಶಲ ವಿದ್ಯೆ. ಕೊರಗ ಸಮುದಾಯದವರ ಕುಲಕಸುಬು ಆಗಿರುವ ಇದು ಆಧುನಿಕತೆಯ ಪ್ಲಾಸ್ಟಿಕ್ ನ ಪ್ರಾಬಲ್ಯದ ಎದುರು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವ ಗುಡಿ ಕೈಗಾರಿಕೆ. ಈ ಬುಟ್ಟಿ ಹೆಣೆಯುವ ಕುಶಲಕರ್ಮಿಗಳು ಬೊಬ್ಬೆಕೇರಿ ಶಾಲಾ ಮುಂಭಾಗದಲ್ಲಿ ಅನಿರೀಕ್ಷಿತವಾಗಿ ಬಂದಾಗ ಗ್ರಾಮೀಣ ಶಾಲೆಯ ಮಕ್ಕಳಿಗೆ ತಿಳಿಸುವ ಪ್ರಯತ್ನ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಬುಟ್ಟಿ ಹೆಣೆಯುವ ವಿದ್ಯೆಯನ್ನು ಪರಿಚಯಿಸಿ, ಈ ಕಾಯಕವನ್ನು ನೋಡುವ ಸದಾವಕಾಶವನ್ನು ಕಲ್ಪಿಸಲಾಯಿತು. ವಿದ್ಯಾರ್ಥಿಗಳೊಂದಿಗೆ ಶಾಲೆಯ ಶಿಕ್ಷಕರೂ ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆಯಲ್ಲಿ ತೊಡಗಿಸಿಕೊಂಡರು. ಮುಖ್ಯಗುರು ಶಶಿಕಲಾ, ಶಿಕ್ಷಕರಾದ ಜನಾರ್ದನ ಹೇಮಳ, ಗೀತಾಕುಮಾರಿ, ಶೋಭಿತಾ, ಸುರೇಖಾ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ ಉಪಸ್ಥಿತರಿದ್ದರು.