-ವಿದ್ಯಾರ್ಥಿಗಳ ಏಕಾಗ್ರತೆಗೆ ಸಂಗೀತ, ನೃತ್ಯ ಪೂರಕ: ಪ್ರೊ.ವಿ.ಜಿ.ಭಟ್
ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಪ್ರಸ್ತುತಿಯಲ್ಲಿ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯ ತರಂಗಿಣಿ-4’ಕಾರ್ಯಕ್ರಮ ಇಲ್ಲಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ
ನಡೆಯಿತು.
ಪುತ್ತೂರಿನ ವಿವೇಕಾನಂದ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ.ವಿ.ಜಿ.ಭಟ್ ಉದ್ಘಾಟಿಸಿ, ಸಂಗೀತ, ನೃತ್ಯಗಳು ವಿದ್ಯಾರ್ಥಿಗಳ ಏಕಾಗ್ರತೆಗೆ ಪೂರಕ. ಭಾರತೀಯ ಕಲೆಗಳನ್ನು ಎಳವೆಯಲ್ಲೇ ಅಭ್ಯಶಿಸಬೇಕು. ಇದು ಆತ್ಮಸ್ಥೈರ್ಯ ಹೆಚ್ಚಳಕ್ಕೂ ಕಾರಣವಾಗುತ್ತದೆ. ಉತ್ತಮರಲ್ಲಿ ಕಲಿತರೆ ವಿದ್ಯೆ ಹಾಗೂ ವಿದ್ಯಾರ್ಥಿಗಳೂ ಬಹಳಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಬಳಿಕ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನ ಹಾಗೂ ನಟುವಾಂಗದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ಹಾಡುಗಾರಿಕೆ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುತ್ತೂರು ಸಹಕರಿಸಿದರು.

ವಿದ್ಯಾರ್ಥಿಗಳಾದ ಅನಘ ಸರಸ್ವತಿ, ದೇವಿಕಾ ಕಿರಣ್, ಜಿಯಾ, ಮನಸ್ವಿ, ಶಮಾ ಎಸ್.ಪಿ., ಮೌಕ್ತಿಕಾ, ಸಂಜನಾ ಭಟ್, ಸಂಹಿತಾ, ಸುದಿಕ್ಷ ಎಸ್.ಭಟ್, ಸ್ಮೃತಿ ಭರತನಾಟ್ಯ
ಪ್ರದರ್ಶಿಸಿದರು. ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್. ಉಪಾಧ್ಯಕ್ಷ ಡಾ.ಕೃಷ್ಣಕುಮಾರ್ ಪಿ.ಎಸ್, ಕಾರ್ಯದರ್ಶಿ ಆತ್ಮಭೂಷಣ್ ಮತ್ತಿತರರು ಇದ್ದರು. ಸಿಂಚನಾ ಎಸ್.ಭಟ್ ಸ್ವಾಗತಿಸಿದರು. ಪೃಥ್ವಿಶ್ರೀ ಸುಬ್ರಹ್ಮಣ್ಯ ಹಾಗೂ ಧನ್ವಿ ರೈ ನಿರೂಪಿಸಿ ವಂದಿಸಿದರು.