ಪುತ್ತೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಳುವಾಜೆ ಶಿವಾಜಿನಗರದಲ್ಲಿ ಕಳೆದ 15 ವರ್ಷಗಳಿಂದ ಈ ಊರಿನ ಸುಮಾರು ೩೦ ಕುಟುಂಬಗಳು ಮನೆಗೆ ಹೋಗುವ ರಸ್ತೆಗಾಗಿ ಸದ್ದಿಲ್ಲದೆ ಹೋರಾಡುತ್ತಿದ್ದರು. ಕಂಡ ಕಂಡ ಜನಪ್ರತಿನಿಧಿಗಳ ಬಳಿ, ಅಧಿಕಾರಿಗಳ ಬಳಿ ಮನವಿಯನ್ನೂ ಸಲ್ಲಿಸಿದ್ದರು. ಇವರ ನಿರಂತರ ಹೋರಾಟಕ್ಕೆ ಯಾವುದೇ ಪ್ರತಿಫಲವೂ ಸಿಕ್ಕಿರಲಿಲ್ಲ. ಇನ್ನು ಹೋರಾಟ ವ್ಯರ್ಥ ಎಂದು ಮನಗಂಡ ಈ ಕುಟುಂಬಗಳು ಕೊನೆಗೆ ಭೇಟಿಯಾಗಿದ್ದು, ಶಾಸಕ ಅಶೋಕ್ ರೈ ಅವರನ್ನು, ಶಾಸಕರ ಕಚೇರಿಗೆ ಬಂದ ಇವರು ರಸ್ತೆ ಸಮಸ್ಯೆ ಬಗ್ಗೆ ವಿವರಿಸಿದ್ದರು.
ನಾನು ಬರುತ್ತೇನೆ, ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದು ಶಾಸಕರು ಭರವಸೆಯನ್ನು ನೀಡಿದ್ದರು.
ಕೊಟ್ಟ ಮಾತಿನಂತೆ ಮಂಗಳವಾರದಂದು ಕಳುವಾಜೆ ಭೇಟಿ ನೀಡಿದ್ದಾರೆ. ಭೇಟಿ ನೀಡುವ ಮುನ್ನ ಕಂದಾಯ ಅಧಿಕಾರಿಗಳು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಸ್ತೆ ಫಲಾನುಭವಿಗಳನ್ನು ಸ್ಥಳಕ್ಕೆ ಬರುವಂತೆ ಶಾಸಕರು ಸೂಚನೆಯನ್ನು ನೀಡಿದ್ದರು.
ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 30 ಕುಟುಂಬಗಳು ತನ್ನ ಬಳಿ ಹೇಳಿದ ವಿಚಾರ ಸತ್ಯವಾಗಿದೆ ಎಂದು ಶಾಸಕರಿಗೆ ಗೊತ್ತಾಗಿದೆ. ಜಾಗವನ್ನು ಅಳತೆ ಮಾಡಿ ಈ ಮನೆಗಳಿಗೆ ರಸ್ತೆ ಮಾಡಲು ಇಲ್ಲಿ ಜಾಗ ಇದೆಯೇ ಎಂದು ಪರಿಶೀಲನೆ ಮಾಡಿ ಎಂದು ಕಂದಾಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಜಾಗ ಅಳತೆ ಮಾಡಲು ಶಾಸಕರು ಹೇಳಿಯೇ ಹೇಳುತ್ತಾರೆ ಎಂದು ಮೊದಲೇ ಅರಿತುಕೊಂಡಿದ್ದ ಕಂದಾಯ ಅಧಿಕಾರಿಗಳು ಎಲ್ಲವನ್ನೂ ಸಿದ್ದಮಾಡಿಯೇ ಬಂದಿದ್ದರು. ಎಲ್ಲವನ್ನೂ ಪರಿಶೀಲಿಸಿದ ಶಾಸಕರು ಕೂಡಲೇ ರಸ್ತೆ ಕಾಮಗಾರಿ ಆರಂಭ ಮಾಡುವಂತೆ ಪಟ್ಟಣ ಪಂಚಾಯತ್ಗೆ ಸೂಚನೆಯನ್ನು ನೀಡಿ ರಸ್ತೆ ಕೆಲಸ ಆದ ಬಳಿಕ ಅದಕ್ಕೆ ಕಾಂಕ್ರೀಟ್ ಮಾಡಿಯೂ ಕೊಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
15 ವರ್ಷಗಳಿಂದ ಆಗದ ಕೆಲಸ ಶಾಸಕ ಅಶೋಕ್ ರೈ ಅವರ ಒಂದೇ ಭೇಟಿಗೆ ಎಲ್ಲವೂ ಪರಿಹಾರವಾದಾಗ ಅಚ್ಚರಿ ಎಂಬಂತೆ ಸೇರಿದ್ದ ಬಡ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜೊತೆಗೆ ಶಾಸಕರಿಗೆ ಕೃತಜ್ಞತೆಯನ್ನು ಹೇಳಲೂ ಮರೆಯಲಿಲ್ಲ. ಶಾಸಕರ ಜೊತೆ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀನಿವಾಸ ಸಹಿತ ಹಲವು ಇದ್ದರು.