





ವಿಟ್ಲ: ಬಿಜೆಪಿ ಅಧಿಕಾರದಲ್ಲಿರುವ ಸಂಘ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಆ ಬಗ್ಗೆ ಚಕಾರವೆತ್ತದ ಬಿಜೆಪಿ ಗಾಜಿನಮನೆಯಲ್ಲಿ ಕುಳಿತು ಇನ್ನೊಬ್ಬರ ಮನೆಗೆ ಕಲ್ಲೆಸೆಯುವ ಕಾರ್ಯ ಬಿಟ್ಟು ತನ್ನ ಮನೆಯಲ್ಲಿ ಏನಾಗಿದೆ ಅದನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡಲಿ ಎಂದು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಹೇಳಿದರು.



ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಫಿಸಾ ಪ್ರಕರಣವನ್ನು ಉಲ್ಲೇಖಿಸಿದ ಅವರು ನಡೆದ ಪ್ರಕರಣವನ್ನು ಸಮರ್ಥಿಸುವುದಿಲ್ಲ ಆದರೆ ಪಂಚಾಯತಿ ಪ್ರತಿನಿಧಿಗಳು ಪಕ್ಷಾತೀತವಾಗಿ ಆಯ್ಕೆ ಆಗುವ ಕಾರಣ ಅಲ್ಲಿ ನಡೆಯುವುದನ್ನು ಪಕ್ಷದ ಮೇಲೆ ಹೇರಲು ಸಾಧ್ಯವಿಲ್ಲ. ಅವರ ಸದಸ್ಯತ್ವವನ್ನು ರದ್ದು ಪಡಿಸುವ ಹಕ್ಜು ಪಕ್ಷಕ್ಕೆ ಇಲ್ಲ. ಆದರೂ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ. ಪಕ್ಷವು ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತದೆ ಎಂದರು.





ಮಾಣಿಲ ಗ್ರಾಮದ 16ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೆರುವಾಯಿ ವ್ಯವಸಾಯ ಸಂಘದ ನಿರ್ದೇಶಕರಾದ ಮಹೇಶ ಭಟ್ ಎಂಬವರ ಮೇಲೆ ಕಳೆದ ಮಾರ್ಚ್ 25ರಂದು ಫೋಕ್ಸೋ ಪ್ರಕರಣ ದಾಖಲಾಗಿದೆ ಆಗ ಬಿಜೆಪಿಯವರು ಎಲ್ಲಿ ಹೋಗಿದ್ದರು. ಈ ಬಗ್ಗೆ ಬಿಜೆಪಿ ಏನು ಕ್ರಮ ಕೈಗೊಂಡಿದೆ. ನಿರ್ದೇಶಕ ಸ್ಥಾನದಿಂದ ಯಾಕೆ ಅವರನ್ನು ತೆರವುಗೊಳಿಸಿಲ್ಲ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ವಾ ಎಂದು ಅವರು ಪ್ರಶ್ನಿಸಿದರು.
ಪೆರುವಾಯಿ ವ್ಯವಸಾಯ ಸಹಕಾರ ಸಂಘದಲ್ಲಿ ಬಿಜೆಪಿ ಆಡಳಿತ ಮಂಡಳಿಯಿದೆ. ಅಲ್ಲಿ ಅವ್ಯವಹಾರ ನಡೆದ ಬಗ್ಗೆ ಲೋಕಾಯುಕ್ತ ಹಾಗೂ ಸಹಕಾರಿ ಇಲಾಖೆಯ ತನಿಖೆ ನಡೆಸಬೇಕು ಎಂದು ಸಹಕಾರಿ ಸಂಘದ ಸದಸ್ಯರು ಈ ಹಿಂದೆಯೇ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಲು ಬಿಜೆಪಿ ಯಾಕೆ ಆಗ್ರಹಿಸುತ್ತಿಲ್ಲ. ಆಡಿಟ್ ರಿಪೋರ್ಟ್ ಮಾಡುವಾಗ ಕಂಡು ಬಂದ ನ್ಯೂನತೆಗಳನ್ನು ಯಾಕೆ ಬಹಿರಂಗ ಪಡಿಸುತ್ತಿಲ್ಲ ಎಂದು ಪದ್ಮನಾಭ ಪೂಜಾರಿ ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ. ಎಸ್. ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ ವಿಟ್ಲ, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಪೆರುವಾಯಿ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರನಾಥ ರೈ ಉಪಸ್ಥಿತರಿದ್ದರು.









