ಗೇರು ಹಣ್ಣಿನಿಂದ ಲಿಕ್ವಿಡ್ ಬೆಲ್ಲ : ಗೇರು ಸಂಶೋಧನಾ ನಿರ್ದೇಶನಾಲಯದಿಂದ ಸಂಶೋಧನೆ

0

ಪುತ್ತೂರು: ಇನ್ನು ಮುಂದೆ ಸಿಹಿಯ ರುಚಿ ನೋಡುವ ಭಾಗ್ಯ ಮಧುಮೇಹಿಗಳಿಲ್ಲ ಎನ್ನುವ ಚಿಂತೆ ಬಿಡಿ. ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ಹಣ್ಣಿನ ರಸದಿಂದ ತಯಾರಿಸಿದ ಲಿಕ್ವಿಡ್ ಬೆಲ್ಲವನ್ನು ಸಂಶೋಧನೆ ಮಾಡಿ ಮಧುಮೇಹಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಈ ಸಂಶೋಧನೆಯನ್ನು ಗೇರು ಸಂಶೋಧನಾ ನಿರ್ದೇಶನಾಲಯದ ಆಹಾರ ಸಂಸ್ಕರಣಾ ವಿಭಾಗದ ವಿಜ್ಞಾನಿ ಡಾ. ಜ್ಯೋತಿ ನಿಷಾದ್ ಮಾಡಿದ್ದಾರೆ.


ಮಧುಮೇಹಿಗಳು ಕೂಡಾ ಸೇವಿಸಲು ಯೋಗ್ಯವಾದ ಗೇರು ಹಣ್ಣಿನ ರಸದಿಂದ ತಯಾರಿಸಿದ ಲಿಕ್ವಿಡ್ ಬೆಲ್ಲವನ್ನು ಇಲ್ಲಿ ಸಂಶೋಽಸಲಾಗಿದೆ. ಎಲ್ಲಾ ರೀತಿಯ ಪರೀಕ್ಷೆಗಳು ನಡೆದು ಗೇರು ಬೆಲ್ಲಕ್ಕೆ ಪೇಟೆಂಟ್ ಕೂಡಾ ಪಡೆಯಲಾಗಿದೆ. ಕಬ್ಬಿನಿಂದ ತಯಾರಿಸುವ ಬೆಲ್ಲಕ್ಕೆ ಹೋಲಿಸಿದರೆ ಗೇರುಹಣ್ಣಿನ ಬೆಲ್ಲದಲ್ಲಿ ಗ್ಲೆಸೆನಿಕ್ ಅಂಶ ತೀರಾ ಕಡಿಮೆಯಾಗಿದ್ದು, ಈ ಕಾರಣಕ್ಕಾಗಿಯೇ ಮಧುಮೇಹಿಗಳೂ ಇದನ್ನು ಬಳಸಬಹುದಾಗಿದೆ. ಗೇರಿನ ರಸವನ್ನು ಬಳಸಿಕೊಂಡು ಅದರಲ್ಲಿನ ಅಂಶವನ್ನು ಸಾಂದ್ರೀಕರಿಸಿ ಬೆಲ್ಲವನ್ನು ಸಿದ್ಧಪಡಿಸಲಾಗಿದೆ. ದೇಹದ ಇಮ್ಯುನಿಟಿ ಶಕ್ತಿಯನ್ನು ವೃದ್ಧಿಸುವ ಜೊತೆಗೆ ಈ ಬೆಲ್ಲದಲ್ಲಿ ಹೆಚ್ಚಿನ ಪ್ರೋಟೀನ್, ಫೈಬರ್ ಅಂಶಗಳಿದೆ.


ಜೇನು ತುಪ್ಪದಷ್ಟೇ ರುಚಿ:
ಗೇರು ಕೃಷಿಯಲ್ಲಿ ಹೆಚ್ಚಾಗಿ ಗೇರಿನ ಬೀಜಕ್ಕೆ ಮಾತ್ರ ಹೆಚ್ಚಿನ ಬೇಡಿಕೆ ಇರುವ ಕಾರಣ, ಗೇರು ಹಣ್ಣನ್ನು ಹೆಚ್ಚಿನ ಕೃಷಿಕರು ಉಪಯೋಗಿಸದೆ ಎಸೆಯುತ್ತಾರೆ. ಗೇರು ಬೀಜದಷ್ಟೇ ಪೌಷ್ಟಿಕಾಂಶಗಳು ಗೇರು ಹಣ್ಣಿನಲ್ಲೂ ಇದ್ದು, ಇವುಗಳನ್ನು ಬಳಸಿಕೊಂಡು ಹಲವು ಮಾರುಕಟ್ಟೆ ಆಧಾರಿತ ಉತ್ಪನ್ನಗಳನ್ನು ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ ಸಂಶೋಧಿಸಿದ್ದು, ಇವುಗಳ ಸಾಲಿಗೆ ಗೇರು ಹಣ್ಣಿನ ರಸದಿಂದ ತಯಾರಿಸಿದ ಲಿಕ್ವಿಡ್ ಬೆಲ್ಲವೂ ಸೇರಿಕೊಂಡಿದೆ. ಜೇನು ತುಪ್ಪದಷ್ಟೇ ರುಚಿಯಾಗಿರುವ ಈ ಬೆಲ್ಲ ಮುಂದಿನ ದಿನಗಳಲ್ಲಿ ಮಧುಮೇಹಿಗಳಿಗೆ ಸಿಹಿಯ ಅನುಭವವನ್ನು ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ನೀಡಲಿದೆ.

ಪೇಟೆಂಟ್ ಲಭ್ಯ
ಗೇರುಹಣ್ಣಿನ ಬೆಲ್ಲಕ್ಕೆ ಪೇಟೆಂಟ್ ಈಗಾಗಲೇ ದೊರೆತಿದ್ದು, ಇದನ್ನು ಸ್ವಸಹಾಯ ಗುಂಪುಗಳಿಗೆ ಅಥವಾ ಆಸಕ್ತ ಸ್ವ ಉದ್ಯೋಗಿಗಳಿಗೆ ಇದನ್ನು ನೀಡಬಹುದು. ಈ ಬೆಲ್ಲವನ್ನು ಸಿದ್ಧಪಡಿಸಲು ಬೇಕಾದ ಎಲ್ಲಾ ತಂತ್ರಜ್ಞಾನವನ್ನೂ ನೀಡಿ ಈ ಬೆಲ್ಲದ ಉತ್ಪಾದನೆಗೆ ಅವಕಾಶವನ್ನು ಕಲ್ಪಿಸಿಕೊಡಲು ನಿರ್ದೇಶನಾಲಯ ತೀರ್ಮಾನಿಸಿದೆ. ಮುಂದೆ ಮಧುಮೇಹಿಗಳು ಸಿಹಿಯ ಅನುಭವವನ್ನು ಈ ಬೆಲ್ಲದ ಮೂಲಕ ಪಡೆಯುವ ಅವಕಾಶ ಸಿಗಲಿದೆ.
ಡಾ. ದಿನಕರ್ ನಿರ್ದೇಶಕರು

LEAVE A REPLY

Please enter your comment!
Please enter your name here