ಕಾಣಿಯೂರು: ಊರಿನ ಸಮಸ್ತ ಜನರನ್ನು ಒಗ್ಗೂಡಿಸಿಕೊಂಡು, ಎಲ್ಲರ ಮನಸ್ಸುಗಳನ್ನು ಬೆಳಗಿಸಿ, ಜೊತೆಗೆ ಊರನ್ನು ಬೆಳಗಿಸುವಂತಹ ಕಾರ್ಯ ಜೋಕಾಲಿ ಬಳಗದಿಂದ ಆಗುತ್ತಿರುವುದು ಶ್ಲಾಘನೀಯ. ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಶಕ್ತಿ ದೇಶದ ಭವಿಷ್ಯದ ಸಮೃದ್ಧಿಯ ಸಂಕೇತ. ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಜೋಕಾಲಿ ಬಳಗ ಮಾದರಿ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಹೇಳಿದರು.
ಅವರು ಜೋಕಾಲಿ ಬಳಗ ಕೃಷ್ಣಾಪುರ, ಕಾೖಮಣ ಇದರ ವತಿಯಿಂದ ಶ್ರೀ ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ ಸೆ 21ರಂದು ಕೃಷ್ಣಾಪುರ ಜೋಕಾಲಿ ಕ್ರೀಡಾಂಗಣದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಮುಂಡಾಳ ಮಾತನಾಡಿ, ಹಲವಾರು ಕನಸುಗಳನ್ನು ಇಟ್ಟುಕೊಂಡು ಆರಂಭವಾದ ಜೋಕಾಲಿ ಬಳಗವು ಬೆಳ್ಳಿಹಬ್ಬವನ್ನು ಯಶಸ್ವಿಯಾಗಿ ಪೂರೈಸಿದೆ. ಬಳಗದ ಎಲ್ಲಾ ಸದಸ್ಯರ ಸಹಕಾರದಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿರುವ ಕೀರ್ತಿ ಜೋಕಾಲಿ ಬಳಗಗಿದೆ ಎಂದರು. ಉದ್ಯಮಿ ವಿಶ್ವನಾಥ ಅಂಬುಲ ಮಾತನಾಡಿ, ಸಮಾಜ ಸೇವೆಯಂತಹ ಧನಾತ್ಮಕ ಚಿಂತನೆಯನ್ನು ನಮ್ಮ ಜೀವನದಲ್ಲಿ ನಿತ್ಯ ನಿರಂತರ ಅಳವಡಿಸಿಕೊಳ್ಳಬೇಕು. ಸಮಾಜದ ಎಲ್ಲಾ ಬಂಧುಗಳು ಜೊತೆಗೂಡಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಜೋಕಾಲಿ ಬಳಗವು ಮಾದರಿ ಸಂಘಟನೆಯಾಗಿ ಹೊರಹೊಮ್ಮಲಿ ಎಂದರು. ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯ ಮೋಹನ ಅಗಳಿ ಮಾತನಾಡಿ, ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ಉತ್ತಮ ನಾಯಕನಾಗಿ ಬೆಳೆಯಲು ಸಾಧ್ಯ ಜೋಕಾಲಿ ಬಳಗವು ಮಾದರಿ ಸಂಘವಾಗಿ ಹೊರಹೊಮ್ಮಿ ರಾಷ್ಟ ಮಟ್ಟದಲ್ಲಿ ಕೀರ್ತಿ ತರಲಿ ಎಂದರು. ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್, ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಗತ್ರಾಜ್ ಬೈತಡ್ಕ, ಜೋಕಾಲಿ ಬಳಗದ ಸ್ಥಾಪಕಾಧ್ಯಕ್ಷ ವೆಂಕಟೇಶ್ ಮುಂಡಾಳ ಉಪಸ್ಥಿತರಿದ್ದರು. ಜೋಕಾಲಿ ಬಳಗದ ಸ್ಥಾಪಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮರಕ್ಕಡ ಸ್ವಾಗತಿಸಿ, ಕಾರ್ಯದರ್ಶಿ ಪವನ್ರಾಜ್ ಸಜಂಕು ಮರಕ್ಕಡ ವಂದಿಸಿದರು. ಮಾಜಿ ಅಧ್ಯಕ್ಷ ವಿಜೇತ್ ಮುಂಡಾಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಉದ್ಘಾಟನಾ ಸಮಾರಂಭ:
ಬೆಳಿಗ್ಗೆ ನಡೆದ ಕಾರ್ಯಕ್ರಮವನ್ನು ಅಗಳಿ ಶ್ರೀ ಸದಾಶಿವ ದೇವಸ್ಥಾನ ಅರ್ಚಕ ಈಶ್ವರಚಂದ್ರ ಭಟ್ ಉದ್ಘಾಟಿಸಿ ಶುಭಹಾರೈಸಿದರು. ನಾರ್ಯಬೈಲು ಸ.ಕಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಮೋಹಿನಿ ನಾರ್ಯ ಅಧ್ಯಕ್ಷತೆ ವಹಿಸಿದ್ದರು. ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಕಲ್ಲಮಾಡ ಶ್ರೀ ಉಳ್ಳಾಕುಲ ಕ್ಷೇತ್ರದ ಉತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ ಉಪಸ್ಥಿತರಿದ್ದರು. ಜೋಕಾಲಿ ಬಳಗದ ಗೌರವಾಧ್ಯಕ್ಷ ಸೀತಾರಾಮ ಗೌಡ ಮುಂಡಾಳ ಸ್ವಾಗತಿಸಿ, ಕಾರ್ಯದರ್ಶಿ ಪವನ್ರಾಜ್ ಮರಕ್ಕಡ ವಂದಿಸಿದರು. ಮಾಜಿ ಅಧ್ಯಕ್ಷ ವಿಜೇತ್ ಮುಂಡಾಳ ಕಾರ್ಯಕ್ರಮ ನಿರೂಪಿಸಿದರು.
ಭಜನಾ ಕಾರ್ಯಕ್ರಮ
ಬೆಳಿಗ್ಗೆ ಜೋಕಾಲಿ ಭಜನಾ ಮಂಡಳಿಯ ಸದಸ್ಯರು, ನಾರ್ಯಬೈಲು ಶಾಲಾ ವಿದ್ಯಾರ್ಥಿಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.