ಪುತ್ತೂರು:ಆರು ವರ್ಷಗಳ ಹಿಂದೆ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಗಲಭೆಯ ಸಂದರ್ಭ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲು ಬಿಸಾಡಿ ಜಖಂಗೊಳಿಸಿದ ಆರೋಪಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ದಿ.19-12-2019ರಂದು ಮಂಗಳೂರಿನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಗಲಭೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರೂ ದಿ.20-12-2019ರಂದು ಸಂಜೆ ಪೆರ್ನೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲು ಬಿಸಾಡಿ ಬಸ್ಸಿನ ಗಾಜನ್ನು ಹೊಡೆದು ಸುಮಾರು ರೂ.1000 ನಷ್ಟ ಉಂಟು ಮಾಡಿದ್ದ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸರು ಪೆರ್ನೆ ಗ್ರಾಮದ ನಾಸಿರುದ್ದೀನ್ ಮತ್ತು ಅಬೂಬಕ್ಕರ್ ಸಿದ್ದೀಕ್ ಎಂಬವರ ಮೇಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಈ ಮಧ್ಯೆ ಆರೋಪಿ ಅಬೂಬಕ್ಕರ್ ಸಿದ್ದಿಕ್ ಮೃತಪಟ್ಟಿದ್ದರು.ನಾಸಿರುದ್ದೀನ್ ಮೇಲಿನ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.ಆರೋಪಿಯ ಪರವಾಗಿ ನ್ಯಾಯವಾದಿ ರಮೀಝ್ ಕರ್ವೆಲ್‌ರವರು ವಾದಿಸಿದ್ದರು.