ಪುತ್ತೂರು: 8 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರು ವಾಸವಾಗಿದ್ದ ಪಿಜಿಯೊಂದಕ್ಕೆ ಊಟ ತಿಂಡಿ ಕೊಡುವ ನೆಪದಲ್ಲಿ ಬಂದು ಅಲ್ಲಿದ್ದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಸಾಬೀತಾಗಿ ಅಪರಾಧಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಆರೋಪಿಯಾಗಿದ್ದ ನರಿಮೊಗ್ರು ಗ್ರಾಮದ ಮುಕ್ವೆ ನಿವಾಸಿ ನಮನ್ ನಾಯಕ್ ಮೇಲಿನ ಆರೋಪ ಸಾಬೀತಾಗಿದ್ದು ಆತನಿಗೆ ಜೈಲು ಶಿಕ್ಷೆ ವಿಧಿಸಿ ಪುತ್ತೂರು ನ್ಯಾಯಾಲಯ ತೀರ್ಪು ನೀಡಿದೆ.2017ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಆರೋಪಿತ ನಮನ್ ನಾಯಕ್, ಬಾಲಕಿಯರಿಗೆ ಲೈಂಗಿಕ ಕಿರುಕುಳ ಕೊಡುವ ಉದ್ದೇಶದಿಂದ ಊಟ ತಿಂಡಿ ಕೊಡುವ ನೆಪದಲ್ಲಿ ಆಗಾಗ್ಗೆ ಪಿಜಿಗೆ ಬಂದು ತಡರಾತ್ರಿಯವರೆಗೆ ಕಾಲಹರಣ ಮಾಡುತ್ತಿದ್ದುದಲ್ಲದೇ ಬಾಲಕಿಯರೊಂದಿಗೆ ಲೈಂಗಿಕ ಉದ್ದೇಶವಿಟ್ಟುಕೊಂಡು ಅಶ್ಲೀಲ ಪದಗಳನ್ನು ಬಳಸುತ್ತಾ, ಬಾಲಕಿಯರನ್ನು ಅವಮಾನಪಡಿಸುತ್ತಿದ್ದುದಲ್ಲದೇ ತಡರಾತ್ರಿ ಹುಡುಗಿಯರ ಪಿಜಿಗೆ ಬರಬಾರದು ಎಂದು ಹೇಳಿದ್ದಕ್ಕೆ ಅವರೊಂದಿಗೆ ಏರುಧ್ವನಿಯಲ್ಲಿ ಮಾತನಾಡಿ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಿ ಬಾಲಕಿಯರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 12 ಸಾಕ್ಷಿಗಳನ್ನು ವಿಚಾರಿಸಿದೆ.ಬಾಲಕಿಯರು ನ್ಯಾಯಾಲಯದಲ್ಲಿ ಆರೋಪಿ ವಿರುದ್ದ ಸವಿವರವಾದ ಹೇಳಿಕೆ ನೀಡಿದ್ದರು.ಪುತ್ತೂರು ನಗರ ಪೊಲೀಸ್ ಠಾಣೆಯ ಆಗಿನ ಉಪನಿರೀಕ್ಷಕಿ ಓಮನಾ ಎನ್.ಕೆ.ರವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬಗ್ಗೆ ವಿವರವಾದ ಸಾಕ್ಷ್ಯ ನೀಡಿದ್ದರು.ನ್ಯಾಯಾಧಿಶೆ ಸರಿತಾ ಡಿ.ಅವರು ವಾದ-ಪ್ರತಿವಾದ ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ.ಭಾ.ದಂ.ಸಂ.ಕಲಂ 448ರಡಿಯ ಅಪರಾಧಕ್ಕೆ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.1ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 2 ತಿಂಗಳ ಸಾದಾ ಶಿಕ್ಷೆ ಮತ್ತು ಭಾ.ದಂ.ಸಂ. ಕಲಂ 354ರಡಿಯ ಅಪರಾಧಕ್ಕೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.30 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ಭಾ.ದಂ.ಸಂ. ಕಲಂ 506ರಡಿಯ ಅಪರಾಧಕ್ಕೆ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 03 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕ್ಸೋ ಕಾಯ್ದೆ ಕಲಂ 12ರಡಿಯ ಅಪರಾಧಕ್ಕೆ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 03 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಽಸಿ ನ್ಯಾಯಾಽಶರು ಆದೇಶಿರುತ್ತಾರೆ.ದಂಡದ ಮೊತ್ತದಲ್ಲಿ ರೂ.20 ಸಾವಿರವನ್ನು ನೊಂದ ಮಹಿಳೆಗೆ ನೀಡಲು ಆದೇಶಿಸಲಾಗಿದೆ. ನೊಂದ ಐವರು ಬಾಲಕಿಯರಿಗೆ ದಂಡ ಪ್ರಕ್ರಿಯಾ ಸಂಹಿತೆ ಕಲಂ 357ರಡಿಯಲ್ಲಿ ತಲಾ ರೂ.20 ಸಾವಿರವನ್ನು ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯವು ಆದೇಶಿಸಿದೆ. ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಕುದ್ರಿಯ ಪುಷ್ಪರಾಜ ಅಡ್ಯಂತಾಯರವರು ವಾದಿಸಿದ್ದರು.