ಪುತ್ತೂರು:ಆಡಳಿತ ಮತ್ತು ಅಭಿವೃದ್ಧಿ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತ್‌ಗಳಿಗೆ ಗಾಂಧಿ ಜಯಂತಿಯಂದು ನೀಡಲ್ಪಡುವ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪಡೆಯುವ ಭಾಗ್ಯ ಈ ಬಾರಿ ಇಲ್ಲವಾಗಿದೆ.
ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ಜನ್ಮದಿನವಾದ ಅ.2ರಂದು ಈ ಪುರಸ್ಕಾರವನ್ನು ನೀಡಲಾಗುತ್ತಿತ್ತು.ಪ್ರತಿವರ್ಷ ರಾಜ್ಯದ ಪ್ರತಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಒಂದು ಪಂಚಾಯತ್‌ನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿತ್ತು.ಆದರೆ ಈ ವರ್ಷ ಇದುವರೆಗೆ ಪ್ರಶಸ್ತಿಗೆ ಗ್ರಾಮ ಪಂಚಾಯತ್‌ಗಳ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ.ಅಲ್ಲದೆ 2023-24ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ಪುತ್ತೂರು ತಾಲೂಕಿನ ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್‌ಗೆ ಇದುವರೆಗೆ ಪ್ರಶಸ್ತಿ ಪ್ರದಾನವೇ ಆಗಿಲ್ಲ.ಆದರೆ ಪ್ರಶಸ್ತಿಯ ಮೊತ್ತವಾಗಿ ರೂ.5 ಲಕ್ಷ ವಿಶೇಷ ಅನುದಾನ ಲಭಿಸಿದೆ.
ಈ ಬಾರಿಯ ಆಯ್ಕೆ ಯಾಕಿಲ್ಲ?:
ಗ್ರಾ.ಪಂ.ಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಬೇಕಾದರೆ ಹಿಂದಿನ ವರ್ಷದಲ್ಲಿ ಮಾಡಿರುವ ಉತ್ತಮ ಆಡಳಿತ ಮತ್ತು ಆರ್ಥಿಕ ಕಾರ್ಯ ನಿರ್ವಹಣೆ ಆಧರಿಸಿ 150ಕ್ಕೂ ಅಧಿಕ ಪ್ರಶ್ನೆಗಳ ಪ್ರಶ್ನಾವಳಿಗಳನ್ನು ಗ್ರಾ.ಪಂ.ಕಚೇರಿಗಳಿಗೆ ಕಳುಹಿಸಿ ಅವರಿಂದ ಅರ್ಜಿಗಳನ್ನು ಆಹ್ವಾನಿಸಬೇಕು.ಅದರ ಪೈಕಿ ಉತ್ತಮ ಸಾಧನೆ ಮಾಡಿ, ಹೆಚ್ಚು ಅಂಕಗಳನ್ನು ಗಳಿಸಿದ ಗ್ರಾಮ ಪಂಚಾಯತ್‌ಗಳನ್ನು ಪ್ರತಿ ತಾಲೂಕಿಗೆ ಒಂದರಂತೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.ಈ ಪ್ರಕ್ರಿಯೆಗೆ ತಿಂಗಳುಗಳೇ ಹಿಡಿಯುತ್ತದೆ.ಆದರೆ ಈ ಬಾರಿ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆದಿಲ್ಲ. ಇದರ ಬಗ್ಗೆ ಕೇಳಿದಾಗ ಶೀಘ್ರದಲ್ಲೇ ಆಗಲಿದೆ ಎಂಬ ಸಿದ್ಧ ಉತ್ತರ ಅಧಿಕಾರಿಗಳಿಂದ ಸಿಕ್ಕಿದೆ.ಆದರೆ,ಇಲ್ಲಿವರೆಗೆ ಆಯ್ಕೆ ಯಾಕೆ ನಡೆದಿಲ್ಲ ಎಂಬುದಕ್ಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಮ ಪಂಚಾಯತನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ 5 ಲಕ್ಷ ರೂ. ವಿಶೇಷ ಪ್ರೋತ್ಸಾಹ ಧನ ಮತ್ತು ಪ್ರಶಸ್ತಿ ನೀಡಲಾಗುತ್ತದೆ.ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾ.ಪಂ.ಅಧ್ಯಕ್ಷರು-ಉಪಾಧ್ಯಕ್ಷರನ್ನು ಬೆಂಗಳೂರಿಗೆ ಕರೆಸಿ ಅ.2ರ ಗಾಂಧಿ ಜಯಂತಿ ದಿನದಂದು ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಮ್ಮಾನಿಸಲಾಗುತ್ತಿತ್ತು.ಆದರೆ ಈ ಬಾರಿ ಆ ಭಾಗ್ಯ ದೊರೆತಿಲ್ಲ.
ಕಳೆದ ಸಾಲಿನಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು.ಆಯ್ಕೆಯಾಗಿರುವ ಬಗ್ಗೆ ಆದೇಶದ ಪ್ರತಿಯೂ ಬಂದಿದೆ.ಗಾಂಧಿ ಗ್ರಾಮ ಪುರಸ್ಕಾರದ ಐದು ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.ಆದರೆ ಈ ತನಕ ಪಂಚಾಯತ್‌ಗೆ ಪ್ರಶಸ್ತಿ ಪ್ರದಾನವಾಗಿಲ್ಲ.ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕಾಗಿ ಕೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಿಂದ ಸನ್ಮಾನವೂ ಆಗಿದೆ. ಪ್ರಶಸ್ತಿಗೆ ಆಯ್ಕೆಯಾಗಿದ್ದರೂ ಯಾಕೆ ಪ್ರಶಸ್ತಿ ಪ್ರದಾನ ಆಗಿಲ್ಲ ಎಂಬುದು ಗೊತ್ತಿಲ್ಲ
-ಮಲ್ಲಿಕಾ ಅಶೋಕ್ ಪೂಜಾರಿ
ಅಧ್ಯಕ್ಷರು ಕೋಡಿಂಬಾಡಿ ಗ್ರಾಮ ಪಂಚಾಯತ್
ಕಳೆದ ಬಾರಿ ಆಲಂಕಾರು ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು.ಗಾಂಧಿ ಗ್ರಾಮ ಪುರಸ್ಕಾರದ ಐದು ಲಕ್ಷ ರೂ.ವಿಶೇಷ ಅನುದಾನ ಬಿಡುಗಡೆಯಾಗಿದೆ.ಆದರೆ ಪಂಚಾಯತ್‌ಗೆ ಪ್ರಶಸ್ತಿ ಕೊಟ್ಟಿಲ್ಲ. ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದರೂ ಯಾಕೆ ಪ್ರಶಸ್ತಿ ಪ್ರದಾನ ಆಗಿಲ್ಲ ಎಂಬುದರ ಮಾಹಿತಿ ಇಲ್ಲ
-ಸುಶೀಲಾ, ಅಧ್ಯಕ್ಷರು, ಆಲಂಕಾರು ಗ್ರಾಮ ಪಂಚಾಯತ್