ಒಳಮೊಗ್ರು ಗ್ರಾಪಂನಿಂದ ಸ್ವಚ್ಛತಾ ಅಭಿಯಾನ ಸಮಾರೋಪ, ಸ್ವಚ್ಛತಾ ಸೇನಾನಿಗಳಿಗೆ ಗೌರವಾರ್ಪಣೆ

0

ಪುತ್ತೂರು: ಸರಕಾರದ ಆದೇಶದಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನೈರ್ಮಲ್ಯ, ಶುಚಿತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಒಳಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ನಡೆದ ಗ್ರಾಮ ಸ್ವಚ್ಚತಾ ಹೀ ಸೇವಾ – ಸ್ವಚ್ಚತೆಯೇ ಸೇವೆ ಪಾಕ್ಷಿಕ -2025 ಅಭಿಯಾನ ಕಾರ್ಯಕ್ರಮದ ಸಮಾರೋಪ ಸಮಾರಂಭ ಅ.2 ರಂದು ಪಂಚಾಯತ್ ಸಭಾಂಗಣದಲ್ಲಿ ಜರಗಿತು.


ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತಾರುರವರು ದೀಪ ಬೆಳಗಿಸಿ, ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛತಾ ಸೇನಾನಿಗಳ ಸೇವೆ ಪ್ರಶಂಸನೀಯ, ಗ್ರಾಮಸ್ಥರು ಕಸ,ತ್ಯಾಜ್ಯಗಳನ್ನು ರಸ್ತೆಗೆ ಅಥವಾ ಇನ್ನಿತರ ಕಡೆಗಳಿಗೆ ಎಸೆಯದೆ ಗ್ರಾಪಂನ ಸ್ವಚ್ಛತಾ ವಾಹಿನಿ ವಾಹನಕ್ಕೆ ನೀಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಸಹಕರಿಸುವಂತೆ ಕೇಳಿಕೊಂಡರು.

ಗ್ರಾಪಂ ಸದಸ್ಯರುಗಳಾದ ಮಹೇಶ್ ರೈ ಕೇರಿ ಮತ್ತು ರೇಖಾ ಯತೀಶ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಪಂಚಾಯತ್ ಸ್ವಚ್ಛತಾ ಸೇನಾನಿಗಳಾದ ವಾಹನ ಚಾಲಕಿ ಕಮಲಾಕ್ಷಿ, ಸಿಬ್ಬಂದಿಗಳಾದ ಕವಿತಾ ಯಂ. ಕವಿತಾ ಕುಂಬ್ರರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಪಂಚಾಯತ್‌ನಿಂದ ಕೊಡುಗೆಯಾಗಿ ನೀಡಿದ ‘ಬಾಟಲ್ ಬೂತ್’ ಅನ್ನು ಕುಂಬ್ರ ಪೇಟೆಯ ಕೇಂದ್ರಭಾಗದ ಬಸ್ಸು ತಂಗುದಾಣ ಬಳಿ ಅಳವಡಿಸಲಾಯಿತು. 2026-27 ನೇ ಸಾಲಿಗೆ ಮಹಾತ್ಮಾ ಗಾಂಧಿ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯ ಕ್ರಿಯಾಯೋಜನೆ ತಯಾರಿಸಲು ಅರ್ಜಿಗಳನ್ನು ಸ್ವೀಕರಿಸಲಾಯಿತು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷ ಆಶ್ರಪ್ ಉಜಿರೋಡಿ ಸದಸ್ಯರುಗಳು ಶೀನಪ್ಪ ನಾಯ್ಕ, ಶಾರದಾ ಆಚಾರ್ಯ, ಚಿತ್ರಾ ಬಿ.ಸಿ,ಸುಂದರಿ ಪರ್ಪುಂಜ, ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ, ಅಂಗನವಾಡಿ ಶಿಕ್ಷಕಿ ಆಶಾಲತಾ ರೈ, ಸಹಾಯಕಿ ರಾಜೀವಿ, ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಘ ಸಂಸ್ಥೆಯ ಮುಖ್ಯಸ್ಥರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಕಾರ್ಯಕರ್ತೆಯರು,ಧಾರ್ಮಿಕ ಕೇಂದ್ರದ ಮುಖ್ಯಸ್ಥರು , ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ. ಸ್ವಾಗತಿಸಿ, ವಂದಿಸಿದರು. ಗ್ರಾಪಂ ಸಿಬ್ಬಂದಿಗಳು ಸಹಕರಿಸಿದ್ದರು.


“ ಸ್ವಚ್ಛತಾ ಅಭಿಯಾನದ ಅಂಗವಾಗಿ ಗ್ರಾಮದ 5 ಬಸ್ಸು ತಂಗುದಾಣ, ರುದ್ರಭೂಮಿ, ಅಂಗನವಾಡಿ ಕೇಂದ್ರ ಸೇರಿದಂತೆ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಸ್ವಚ್ಛತಾ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆಯನ್ನು ಮಾಡಲಾಗಿದೆ. ಬಾಟಲ್ ಬೂತ್ ಕೊಡುಗೆಯಾಗಿ ನೀಡಿದ ತಾಪಂಗೆ ಹಾಗೇ ಸ್ವಚ್ಛತೆಯಲ್ಲಿ ಸಹಕರಿಸಿದ ಸರ್ವರಿಗೂ ಗ್ರಾಪಂನಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಗ್ರಾಮದ ಸ್ವಚ್ಛತೆಯಲ್ಲಿ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ

LEAVE A REPLY

Please enter your comment!
Please enter your name here