ಮಾದರಿ ಸಂಯೋಜನೆಯ ಎರುಂಬು ದಿವ್ಯಜ್ಯೋತಿ ಕಲಾವಿದರ “ಮದಿಮೆದ ಇಲ್ಲಡ್ ” ನಾಟಕ ತಂಡ

0

✒️ಆರ್. ಕೆ. ಕುಲಾಲ್ “ರಾಮ್ದೇವ್” ವಿಟ್ಲ

ನಟನಾ ಕಲೆ ಮನರಂಜನೆ ಮಾತ್ರವಲ್ಲದೆ ಜನರ ಮನಸನ್ನು ಕೆಲವು ಗಂಟೆಗಳಷ್ಟು ಕಾಲವಾದರೂ ನಗಿಸಿ , ಅಳಿಸಿ, ನೆಮ್ಮದಿಯ ಪ್ರಪಂಚಕ್ಕೆ ಒಯ್ಯುತ್ತದೆ. ಪ್ರಸ್ತುತ ವಿದ್ಯಮಾನದಲ್ಲಿ ಯಕ್ಷಗಾನ ಪುರಾಣ ಮತ್ತು ಹಾಸ್ಯ ಪ್ರಜ್ಞೆಯೊಂದಿಗೆ ಪ್ರಸಿದ್ದಿ ಪಡೆದರೆ ನಾಟಕ ಎಲ್ಲಾ ವರ್ಗದ ಜನರಿಗೂ ಹಾಸ್ಯದೊಂದಿಗೆ ಸಾಮಾಜಿಕ, ಸಾಂಸಾರಿಕ ಬದುಕನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸುತ್ತದೆ. ವರ್ತಮಾನದಲ್ಲಿ ಇಂತಹ ನಾಟಕ ಪ್ರದರ್ಶನ ತಂಡಗಳು ಅನೇಕ. ಭಿನ್ನ ಕಥಾನಕ, ಸಂಗೀತ, ಹಾಸ್ಯ ದೊಂದಿಗೆ ಒಂದೊಂದು ತಂಡಗಳು ಹೊಸ ತಂತ್ರಗಾರಿಕೆಯ ಲೇಪನದೊಂದಿಗೆ ಮುಂದಡಿಯಿಡುತ್ತಲೇ ಇದೆ. ಹೀಗಿರುವ ಸನ್ನಿವೇಶದಲ್ಲಿ ಅಪರೂಪದ ಮತ್ತು ಮಾದರಿ ತಂಡ ವಾಗಿರುವ ಎರುಂಬು ದಿವ್ಯಜ್ಯೋತಿ ಕಲಾವಿದರ “ಮದಿಮೆದ ಇಲ್ಲಡ್”ನಾಟಕ ತಂಡದ ಸೂಚಿತ ಗುಣಗಳನ್ನು ನಾವು ಉಲ್ಲೇಖಿಸಲೆಬೇಕು ಮತ್ತು ಪ್ರೋತ್ಸಾಹಿಸಬೇಕು.

ದೇಶ ವಿದೇಶಗಳಲ್ಲಿ ಕಲಾ ಸಾಧನೆಯನ್ನು ಮಾಡಿರುವ ಎರುಂಬು ಮೋಹನದಾಸ್ ರೈ ಯವರ ಕನಸಿನ ಕೂಸು ಶ್ರೀ ದಿವ್ಯ ಜ್ಯೋತಿ ಕಲಾವಿದರು ತಂಡ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮೀಣ ಪ್ರದೇಶದಲ್ಲಿ ತನ್ನೂರಿನ ಕಲಾವಿದರನ್ನು ಸೇರಿಸಿಕೊಂಡು ಇಂದು ಹಲವು ಪ್ರದರ್ಶನ ನೀಡಿ ಮನಗೆದ್ದ “ಮದಿಮೆದ ಇಲ್ಲಡ್ ” ನಾಟಕ ತಂಡ.


ತಂಡ ರಚನೆ ಮಾಡುವುದು ದೊಡ್ಡದಲ್ಲ, ಶಿಸ್ತು ಮತ್ತು ಉತ್ತಮ ಸಹಕಾರಿ ಮನೋಭಾವದಿಂದ ನಡೆಸುವ ಸವ್ಯಸಾಚಿತ್ವ ಬಲು ಮುಖ್ಯ.ಇದು ಈ ತಂಡದ ನಿರ್ದೇಶಕರಿಗೆ ಸಿದ್ದಿಸಿದೆ ಎನ್ನುವುದರಲ್ಲಿ ಸಂತೋಷ ಪಡೋಣ. ಈಗಿನ ತರಾತುರಿಯ ಜೀವನವು, ವಾಣಿಜ್ಯ ಕಳಕಳಿಯಿಂದ ಸಂಬಂಧ ಗಳನ್ನು ಕಸಿಯುವ ಈ ದಿನಗಳಲ್ಲಿ ಪ್ರೀತಿ ಎಂಬ ಬೇಸುಗೆಯಲ್ಲೆ ತಂಡದ ಪೂರ್ಣ ನಿರ್ವಹಣೆ ತಂಡದಲ್ಲಿರುವ ಅತ್ಯುನ್ನತ ನಾಟಕ ನಟರೇ ನಿಭಾಯಿಸುತ್ತಿರುವ ಮಾದರಿ ತಂಡ ಇದಾಗಿದೆ. ಇರುವ 14 ಜನರೇ ವೇದಿಕೆಯಲ್ಲೇ ಸೆಟ್ಟಿಂಗ್ ಏರಿಸುವವರು, ನಟನೆ ಮಾಡುವವರು ,ರಂಗ ಪ್ರಸಾದನ, ಸೆಟ್ಟಿಂಗ್ ಬಿಚ್ಚುವವರು, ಸಾಗಿಸುವವರು, ಚಾಲಕರು ಎಲ್ಲವೂ. ಇದನ್ನು ಕಂಡಾಗಲೇ ಹೆಮ್ಮೆ ಎನಿಸಿದ್ದು. ಪ್ರತೀ ದೃಶ್ಯ ಗಳಿಗೂ ತಮ್ಮದೇ ಆದ ಹಿನ್ನೆಲೆ ಸಂಗೀತ, ಬೆಳಕಿನ ವ್ಯವಸ್ಥೆಯೊಂದಿಗಿನ ಸಂಯೋಜನೆ, ಶಿಸ್ತಿನ ಜೋಡಣೆ ಸರಾಗವಾಗಿ ನಡೆಯುವುದರಲ್ಲಿ ಕಿಂಚಿತ್ತೂ ಲೋಪ ಬಾರದಂತೆ ನಡೆಯುವುದಕ್ಕೆ ನಿರ್ದೇಶಕರ ಪೂರ್ಣ ಮತ್ತು ಸ್ವಚ್ಛ ನಿರ್ದೇಶನದ ಹಿಡಿತದಲ್ಲಿರುವುದು ಅದ್ಭುತವೇ. ಯಾವ ಆಯೋಜಕರೇ ಇರಲಿ, ಅವರಿಗೆ ತೊಂದರೆಯಾಗದಂತೆ 3 ಗಂಟೆಯೊಳಗೆ ಸೆಟ್ಟಿಂಗ್ ಮಾಡಿ ನಾಟಕ ಪೂರ್ಣಗೊಳಿಸಿ ಹಾಗೆ ವೇದಿಕೆಯನ್ನು ತೆರವುಗೊಳಿಸಿದ್ದು ತಂಡದ ಸಮಯಪಾಲನೆಗೆ ಸಾಕ್ಷಿಯಾಗಿದೆ. ತಂಡದ ಯಾವ ಕಲಾವಿದರೂ ತನ್ನ ನಿತ್ಯ ಜೀವನದಲ್ಲೂ ಮಾದಕವ್ಯಸನದ ಸೋಂಕಿಗೆ ಸಿಲುಕದವರಾಗಿರುವರೆಂಬ ಬಲು ದೊಡ್ಡ ಹೆಮ್ಮೆಯ ಬಹುಮಾನ ಈ ತಂಡಕ್ಕೆ ಕೊಡಬೇಕು. ದೃಶ್ಯದ ಮದ್ಯೆ ಅವಕಾಶ ಸಿಕ್ಕಿದಾಗೆಲ್ಲ ಆ ಜಾಗೃತಿಯನ್ನು ಮೂಡಿಸುವ ಕೆಲಸ ಜವಾಬ್ದಾರಿಯಿಂದ ನಿಭಾಯಿಸುತ್ತದೆ. ತಂಡದ ಆರಂಭದ ಪ್ರಾರ್ಥನೆ, ಕಲಾವಿದರ ಮುಗ್ದ ಭಕ್ತಿಯನ್ನು ಸೂಚಿಸುತ್ತಾ ಆ ಬಳಿಕ ನಟರೆಲ್ಲರು ಶಕ್ತಿವಂತರಾಗುತ್ತಾರೆನ್ನುವ ತಂಡದ ಹಿರಿಯರ ಮಾತು ಶಾರದೆಯ ಕೃಪಾಶಕ್ತಿಯನ್ನು ತೋರಿಸುತ್ತದೆ. ಹಾಸ್ಯ ಕಲಾವಿದರ ಕ್ರಿಯಾಶೀಲ ಮತ್ತು ಸೃಜನಶೀಲ ನಟನೆಯಲ್ಲೂ ಶಿಸ್ತು ಮತ್ತು ತಾವೇ ಆನಂದ ಪಡುತ್ತಿರುವುದರಲ್ಲಿ ಪ್ರೇಕ್ಷಕರು ಲೀನವಾಗುವುದನ್ನು ಕಾಣಬಹುದಾಗಿದೆ.ಕ್ಷಿಪ್ರ ವಸ್ತ್ರಗಳ ಬದಲಾವಣೆ ಪರಿಕರಗಳ ಜೊತೆ ಪ್ರವೇಶ ಮುಗ್ದ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿ, ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕೇಳಿಬರುತ್ತದೆ. ವಿರಚಿತರ ಕಥಾ ಹಂದರಕ್ಕೆ ಚ್ಯುತಿಬಾರದಂತೆ ಯಜಮಾನರ, ಕಥಾನಾಯಕ, ಕಥಾನಾಯಕಿ, ಖಳನಾಯಕರ ಪಾತ್ರಗಳ ನಟನೆಗಳು ಅಳುವಲ್ಲಿ ಅಳಿಸಿ, ಕನಿಕರ ಮೂಡಿಸಿ, ಕ್ರೋಧ ತಂದು, ರಮಿಸಿ, ಪ್ರೇಕ್ಷಕರ ಮನ ಕಲಕುವಲ್ಲಿ ಯಶಸ್ವಿಯಾಗುತ್ತದೆ. ಈರ್ವರು ಮಹಿಳಾ ಮಣಿಗಳು ತಂಡದಲ್ಲಿ ಸಹೋದರಿ ಬ್ರಾತೃತ್ವದಿಂದ ಎಲ್ಲರಿಗೂ ಮಾತಾ ಸ್ವರೂಪಿಗಳಾಗಿ ಮುನ್ನಡೆಸುವುದು ಎಲ್ಲ ನಾಟಕ ತಂಡಗಳಿಗೆ ಮಾದರಿಯಾಗಬೇಕು. ಸಹಕಲಾವಿದರ ಒಮ್ಮಿಳಿತದ ಸಹಕಾರ ತೆರೆಯ ಹಿಂದೆ ನೀವು ಬಂದರೆ ತಿಳಿದೀತು. ಪ್ರೇಕ್ಷಕರ ಹೊಗಳಿಕೆಯ ಮಾತಿಗೆ ಕಿವಿಯಾಗದೆ “ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾ ಚನ” ಎಂಬಂತೆ ಕಲಾ ವೇದಿಕೆಯಲ್ಲಿ ದುಡಿ ಯುತ್ತಾರಲ್ಲ… ಅದು ಪ್ರಶಂಸನೀಯ.


ಕಲಾ ಪೋಷಕರೇ ಮತ್ತು ಸಂಘಟಕ ಮಿತ್ರರೇ ಇವರ ಶಿಸ್ತಿಗೆ ಮತ್ತು ಉತ್ಸಾಹಕ್ಕೆ ನಾವು ಅವಕಾಶ ನೀಡಬೇಕು. ಈ ತಂಡ ಖಂಡಿತವಾಗಲೂ ಅನ್ಯ ರಾಜ್ಯ ಮತ್ತು ಹೊರದೇಶಕ್ಕೆ ಪ್ರದರ್ಶನಕ್ಕೆ ಕರೆಯುವುದಕ್ಕೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಮತ್ತು ಇವರ ತಂಡ ಶಕ್ತಿ ಎಲ್ಲಾ ನಾಟಕ ತಂಡಗಳಿಗೆ ಪ್ರೇರಣೆ ಯಾಗಬೇಕು. ಬೇರೆ ದೇಶಗಳಲ್ಲಿ ನಾಟಕ ನಿರ್ದೇಶಕನಾಗಿದ್ದ, ಬಹರೈನ್ “ಅಮ್ಮ ಕಲಾವಿದರು” ತಂಡದ ಸ್ಥಾಪಕರಾದ ಈ ತಂಡದ ಅದ್ಭುತ ನಟ ಮೋಹನದಾಸ್ ರೈ (ದೂರವಾಣಿ – 96062 13449) ಯವರನ್ನು ಈ ಮೂಲಕವಾಗಿ ಅಭಿನಂದಿಸುತ್ತೇನೆ.ತಂಡಕ್ಕೆ ಉತ್ತಮ ಭವಿಷ್ಯವಿರಲೆಂದು ಹಾರೈಸುತ್ತೇನೆ.
ಈ ಬರಹ ಉತ್ಪ್ರೇಕ್ಷೆಯಲ್ಲ, 7 ಪ್ರದರ್ಶನ ನೋಡಿದ ಒಬ್ಬ ಸಾಮಾನ್ಯ ಪ್ರೇಕ್ಷಕನ ಆಂತರ್ಯದ ನುಡಿ ಅಷ್ಟೇ.

LEAVE A REPLY

Please enter your comment!
Please enter your name here