ಪುತ್ತೂರು: ಅಪರಿಚಿತರು ವಾಟ್ಸಪ್ನಲ್ಲಿ ಸೆಂಟ್ರಮ್ ಸ್ಟಾಕ್ ಟ್ರೇಡಿಂಗ್ ಬ್ರೋಕರ್ಸ್ ಎಂದು ನಂಬಿಸಿ 3.44 ಲಕ್ಷ ರೂ.ವಂಚಿಸಿದ್ದಾರೆ ಎಂದು ಆರೋಪಿಸಿ ಕಡಬದ ಯುವಕ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯುವಕ ಸೆ.5ರಂದು ಬೆಳಿಗ್ಗೆ ಗೂಗಲ್ನಲ್ಲಿ ಟ್ರೇಡಿಂಗ್ ಬಗ್ಗೆ ಸರ್ಚ್ ಮಾಡುತ್ತಿದ್ದಾಗ ಅದರಲ್ಲಿದ್ದ ಟ್ರೇಡಿಂಗ್ ಆ್ಯಪ್ ಲಿಂಕ್ ಕ್ಲಿಕ್ ಮಾಡಿದಾಗ 802 ಸೆಂಟ್ರಮ್ ಸ್ಮಾರ್ಟ್ ಇನ್ವೆಸ್ಟರ್ ಕ್ಲಬ್ ಎಂಬ ವಾಟ್ಸಪ್ ಗ್ರೂಪ್ ತೆರೆದಿದ್ದು ಗ್ರೂಪ್ನಲ್ಲಿ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಸೆಂಟ್ರಮ್ ಹೆಚ್ಎನ್ಐ ಟ್ರೇಡಿಂಗ್ ಆ್ಯಪ್ ಲಿಂಕ್ ಕಳುಹಿಸಿದ್ದು, ಸದ್ರಿ ಲಿಂಕ್ ಮೂಲಕ ಸೆಂಟ್ರಮ್ ಹೆಚ್ಎನ್ಐ ಆಪ್ ಡೌನ್ಲೋಡ್ ಮಾಡಿದ್ದಾರೆ. ನಂತರ ವಾಟ್ಸಪ್ ಮೂಲಕ ಸಂಪರ್ಕಿಸಿ ಕಡಿಮೆ ದರದಲ್ಲಿ ಐಪಿಒ ಮತ್ತು ಸ್ಟಾಕ್ಗಳನ್ನು ತಮ್ಮ ಆ್ಯಪ್ ಮೂಲಕ ನೀಡುವುದಾಗಿ ತಿಳಿಸಿದ ಮೇರೆಗೆ ಯುವಕ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿದ್ದಾರೆ. ಸದ್ರಿ ಹಣವು ಲಾಭಾಂಶ ಸಮೇತವಾಗಿ ಆ್ಯಪ್ನಲ್ಲಿ ತೋರಿಸುತ್ತಿದ್ದರೂ ವಿದ್ಡ್ರಾ ಮಾಡಲು ಪ್ರಯತ್ನಿಸಿದಾಗ ವಿದ್ಡ್ರಾ ಆಗಿರುವುದಿಲ್ಲ. ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ವಾಟ್ಸಪ್ನಲ್ಲಿ ಸೆಂಟ್ರಮ್ ಸ್ಟಾಕ್ ಟ್ರೇಡಿಂಗ್ ಬ್ರೋಕರ್ಸ್ ಎಂದು ನಂಬಿಸಿ 3.44 ಲಕ್ಷ ರೂ. ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಯುವಕ ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.