ಮಠ ನಿವಾಸಿ ಮುಸ್ತಾಫ ಅಪಹರಣ: ಅಕ್ರಮವಾಗಿ ಕೂಡಿಟ್ಟು ಹಲ್ಲೆ-ದೇವನಹಳ್ಳಿ ಪೊಲೀಸರಿಂದ ಮೂವರ ಬಂಧನ

0

ಉಪ್ಪಿನಂಗಡಿ: ಇಲ್ಲಿನ ಮಠ ನಿವಾಸಿಯಾಗಿರುವ ಯುವಕನೋರ್ವನನ್ನು ಮೂರು ತಿಂಗಳ ಕಾಲ ಅಕ್ರಮವಾಗಿ ಕೂಡಿಟ್ಟು ಹಲ್ಲೆಗೈದ ಬಗ್ಗೆ ಬೆಂಗಳೂರಿನ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಅಪಹರಣಕ್ಕೊಳಗಾದ ಮೊಹಮ್ಮದ್ ಮುಸ್ತಫಾ ಎಂಬವರು ನೀಡಿದ ದೂರಿನನ್ವಯ ಬಿಎನ್‌ಎಸ್ ಸೆಕ್ಷನ್ 118(1), 127(4), 140(2), 351(2),352,3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಠಾಣಾ ಪೊಲೀಸರು, ಅಜಯ್, ಕಾರ್ತಿಕ್, ಜೀವನ್ ಎಂಬುವರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ಲಕ್ಷಣ್ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದ ಮೊಹಮ್ಮದ್‌ ಮುಸ್ತಾಫ


ಅಪಹರಣ ಮತ್ತು ಹಲ್ಲೆ ಪ್ರಕರಣದ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಠದ ಸಫಾ ನಗರ ನಿವಾಸಿ ಮೊಹಮ್ಮದ್ ಮುಸ್ತಾಫ (27) ಅವರು, ತಾನು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಚೀಫ್ ಫೈನಾಸ್ಸಿಂಗ್ ಆಫೀಸರ್ ಆಗಿ ಕೆಲಸಕ್ಕಿದ್ದು, ನನ್ನ ಸ್ನೇಹಿತ ಮೊಹಮ್ಮದ್ ರಾಜೀ ಎಂಬಾತನ ಜೊತೆ ವಾಸವಿದ್ದೆ. ಜೂನ್ 25ರಿಂದ ಇಂದಿರಾನಗರದ ಬಳಿಯಿರುವ ಲಾಡ್ಜೊಂದರಲಿ ವಾಸವಿದ್ದೆವು. ಆಗ ಅಲ್ಲಿಗೆ ಬಂದ ಕಾರ್ತಿಕ್ ಎಂಬವರು ರಾಜೀ ಜೊತೆ ಮಾತುಕತೆಯನ್ನು ಮಾಡುತ್ತಿದ್ದರು. ಆ ದಿನ ಮೊಹಮ್ಮದ್ ರಾಜೀಯು ತನಗೇನೋ ಕೆಲಸವಿದೆಯೆಂದು ಕಾರ್ತಿಕ್ ಜೊತೆ ಹೇಳಿ ಹೊರಟು ಹೋಗಿದ್ದ. ಮರುದಿನವಾದರೂ ಮೊಹಮ್ಮದ್ ರಾಜೀ ಬಂದಿರಲಿಲ್ಲ. ಮರುದಿನ ಅವ ಯಾಕೆ ಬರಲಿಲ್ಲವೆಂದು ವಿಚಾರಿಸಲು ಬಂದ ಕಾರ್ತಿಕ್ ಮತ್ತು ಲಕ್ಷ್ಮಣ್ ನೀನು ನನ್ನ ಜೊತೆ ಬಾ ಎಂದು ನನ್ನ ಕರೆದೊಯ್ದಿದ್ದ. ಅಲ್ಲಿಂದ ಕಾರಿನಲ್ಲಿ ದೇವನಹಳ್ಳಿಗೆ ನನ್ನನ್ನು ಕರೆದುಕೊಂಡು ಬಂದಿದ್ದು, ಅಲ್ಲಿ ಫೈನಾನ್ಸ್‌ವೊಂದರಲ್ಲಿ ನನ್ನ ಕೂಡಿ ಹಾಕಿದ್ದರು. ಅಲ್ಲಿಗೆ ಅಜಯ್ ಎಂಬಾತ ಬಂದು ನಿನ್ನ ಗೆಳೆಯ ಮೊಹಮ್ಮದ್ ರಾಜೀ ಎಂಬಾತ ನನ್ನಿಂದ ಆರು ಲಕ್ಷವನ್ನು ಸಾಲ ಪಡೆದಿದ್ದಾನೆ. ಅದನ್ನು ಹಿಂದುರಿಗಿಸದೇ ನಿನ್ನನ್ನು ಬಿಡುವುದಿಲ್ಲ ಎಂದು ದೈಹಿಕವಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡುತ್ತಿದ್ದನು. ಅವ ಹಣ ಪಡೆದಿರುವುದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದರೂ ನನ್ನನ್ನು ಅಲ್ಲಿಯೇ ಕೊಠಡಿಯಲ್ಲಿ ಕೂಡಿ ಹಾಕಿ ದಿನ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದರು. ಇದರಲ್ಲಿ ಇವರೊಂದಿಗೆ ಜೀವನ್ ಎಂಬಾತನೂ ಸೇರಿಕೊಂಡಿದ್ದಾನೆ. ಅ.೫ರಂದು ರಾತ್ರಿ ೮ ಗಂಟೆಗೆ ನನಗೆ ಡೆಡ್‌ಲೈನ್ ನೀಡಿದ ಅವರು ದುಡ್ಡು ಬಂದಿಲ್ಲ ಅಂದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದರು. ಬಳಿಕ ಈ ವಿಷಯ ಮನೆಯವರಿಗೆ ಗೊತ್ತಾಗಿದ್ದು, ಅವರು ಪೊಲೀಸರ ಮೂಲಕ ನನ್ನನ್ನು ರಕ್ಷಿಸಿ ಠಾಣೆಗೆ ಕರೆತಂದರು. ಜೂ.25ರಿಂದ ಅ.5ರವರೆಗೆ ನಾನು ಅವರ ವಶದಲ್ಲಿದ್ದೆ ಎಂದು ವಿವರಿಸಿದ್ದಾರೆ.


ಈ ಅಪಹರಣ ಪ್ರಕರಣದ ಬಗ್ಗೆ ಮುಸ್ತಾಫ ಅವರ ಸಂಬಂಧಿ ಅಶ್ರಫ್ ಕೊಕ್ಕಡರವರು ಬೆಳ್ತಂಗಡಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡರವರ ಗಮನಕ್ಕೆ ತಂದಿದ್ದು, ತಕ್ಷಣವೇ ಕಾರ್ಯಪ್ರವೃತರಾದ ಹಕೀಂ ಕೊಕ್ಕಡರವರು ವಿಧಾನಸಭಾಧ್ಯಕ್ಷರನ್ನು ಸಂಪರ್ಕಿಸಿ ಮುಸ್ತಾಫ ಅವರ ಬಿಡುಗಡೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here