ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ : ಸಹಕಾರ ಭಾರತಿಯ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವಿರೋಧ ಆಯ್ಕೆ – ಬಿಜೆಪಿಯಿಂದ ಅಭಿನಂದನೆ

0

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿ. ಉಪ್ಪಿನಂಗಡಿ ಇದರ ಆಡಳಿತ ಮಂಡಳಿಯಲ್ಲಿ ತೆರವಾದ ಕೃಷಿ ಕ್ಷೇತ್ರದ ಒಂದು ಸಾಮಾನ್ಯ ನಿರ್ದೇಶಕ ಸ್ಥಾನಕ್ಕೆ ಬಿಜೆಪಿ ಮತ್ತು ಸಹಕಾರ ಭಾರತಿಯ ಬೆಂಬಲಿತ ಅಭ್ಯರ್ಥಿ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಈ ಸ್ಥಾನಕ್ಕೆ ಬಿಜೆಪಿ ಮತ್ತು ಸಹಕಾರ ಭಾರತಿಯ ಬೆಂಬಲಿತರಾಗಿ ಪ್ರಕಾಶ್ ರೈ ಬೆಳ್ಳಿಪ್ಪಾಡಿ, ಸದಾನಂದ ಶೆಟ್ಟಿ, ಪುತ್ತಿಲ ಪರಿವಾರದಿಂದ ಹರಿಪ್ರಸಾದ್ ಶೆಟ್ಟಿ, ಧರ್ನಪ್ಪ ನಾಯ್ಕ ಹಾಗೂ ಪಕ್ಷೇತರವಾಗಿ ಬಾಲಚಂದ್ರ ಜಿ. ನಾಮಪತ್ರ ಸಲ್ಲಿಸಿದರು. ನಾಮಪತ್ರ ಹಿಂಪಡೆಯುವ ದಿನವಾದ ಅ.13ರಂದು ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವರನ್ನು ಬಿಟ್ಟು ಉಳಿದೆಲ್ಲಾ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡಿದ್ದು, ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವಿರೋಧವಾಗಿ ಆಯ್ಕೆಯಾದರು. ಕೃಷಿ ಕ್ಷೇತ್ರದ ಸಾಮಾನ್ಯ ಸ್ಥಾನದಿಂದ ಚುನಾಯಿತರಾಗಿದ್ದ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿ ಸದಾನಂದ ಶೆಟ್ಟಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಆಯ್ಕೆ ನಡೆಯಿತು.


ಪ್ರಕಾಶ್ ರೈ ಬೆಳ್ಳಿಪ್ಪಾಡಿ:
ದಿ. ನರಸಿಂಗ ರೈಯವರ ಪುತ್ರನಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿಯವರು ಉಪ್ಪಿನಂಗಡಿಯ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದು, 10 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಸತತ ಏಳು ಬಾರಿ ಹಿರೇಬಂಡಾಡಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದ ಇವರು, ಮೊದಲ ಬಾರಿ ಪಕ್ಷೇತರರಾಗಿ ಚುನಾವಣೆ ನಿಂತು ಜಯ ಗಳಿಸಿದ್ದರು. ಆ ಬಳಿಕ ರಾಮಕೃಷ್ಣ ಹೆಗ್ಡೆಯವರ ಜನತಾದಳವನ್ನು ಸೇರಿದ ಇವರು ಒಂದು ಬಾರಿ ಜನತಾದಳದಿಂದ ಸ್ಪರ್ಧಿಸಿ ಗ್ರಾ.ಪಂ. ಸದಸ್ಯರಾಗಿದ್ದರು. ಬಳಿಕ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿ ಗ್ರಾ.ಪಂ. ಸದಸ್ಯರಾಗಿದ್ದರು. ಅಲ್ಲದೇ, ಕಾಂಗ್ರೆಸ್‌ನಿಂದಲೂ ಮೂರು ಬಾರಿ ಸ್ಪರ್ಧಿಸಿ ಹಿರೇಬಂಡಾಡಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಕೃಷ್ಣ ಹೆಗ್ಡೆಯವರ ಕಾಲಘಟ್ಟದಲ್ಲಿ ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು ಹೀಗೆ ಮೂರು ಗ್ರಾಮಗಳನ್ನೊಳಗೊಂಡ ಜನತಾದಳದ ಉಪ್ಪಿನಂಗಡಿ ಮಂಡಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಹಕಾರಿ ವ್ಯವಸಾಯಿಕ ಸಂಘ ಉಪ್ಪಿನಂಗಡಿ ಇದರ ನಿರ್ದೇಶಕ ಸ್ಥಾನಕ್ಕೆ ಇವರು ಈ ಮೊದಲು ಮೂರು ಬಾರಿ ಚುನಾಯಿತರಾಗಿದ್ದು, ಎರಡು ಬಾರಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿಯೂ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದರು. ಹಿರೇಬಂಡಾಡಿ ಗ್ರಾಮ ದೈವವಾದ ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ, ಅಡೆಕ್ಕಲ್ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.


ಬಿಜೆಪಿಯಿಂದ ಅಭಿನಂದನೆ:
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಅವರನ್ನು ಬಿಜೆಪಿ ಪಕ್ಷದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪಾಧ್ಯಕ್ಷ ದಯಾನಂದ ಸರೋಳಿ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ವಿದ್ಯಾಧರ ಜೈನ್, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಎನ್., ಬಿಜೆಪಿ ಪ್ರಮುಖರಾದ ಜಯಂತ ಪೊರೋಳಿ, ಸುರೇಶ್ ಅತ್ರೆಮಜಲು, ಹರಿರಾಮಚಂದ್ರ, ಸಂತೋಷ್ ಕುಮಾರ್ ಪಂರ್ದಾಜೆ, ಹಮ್ಮಬ್ಬ ಶೌಕತ್ ಅಲಿ, ಆದೇಶ್ ಶೆಟ್ಟಿ, ಲಕ್ಷ್ಮಣ ಗೌಡ ನೆಡ್ಚಿಲು, ಪ್ರಸಾದ್ ಬಂಡಾರಿ, ಸದಾನಂದ ನೆಕ್ಕಿಲಾಡಿ, ಸಿಎ ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶಾಂತಿನಗರ, ವಸಂತ ಪಿ., ಉಷಾ ಮುಳಿಯ, ಗೀತಾ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here