ರಾಮಕುಂಜ: ಹಳೆನೇರೆಂಕಿ ಹಾಗೂ ರಾಮಕುಂಜ ಗ್ರಾಮದ ಗ್ರಾಮ ದೇವರಾದ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮದ ಭಕ್ತರ ಸಭೆ ಅ.12ರಂದು ಮಧ್ಯಾಹ್ನ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರು, ಲೋಕಕಲ್ಯಾಣಾರ್ಥವಾಗಿ ದೇವಸ್ಥಾನದಲ್ಲಿ ಎರಡು ದಿನ ನಡೆದ ಕೋಟಿ ಶಿವಪಂಚಾಕ್ಷರಿ ಜಪಯಜ್ಞ, ದುರ್ಗಾಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ದೇವರ ಅನುಗ್ರಹದಿಂದ ಪರಿಪೂರ್ಣವಾಗಿದೆ. ಅನ್ನಸಂತರ್ಪಣೆಗೆ ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರದಿಂದ ಸಹಕಾರ ದೊರೆತಿದೆ. ಎರಡೂ ಗ್ರಾಮದ ಭಕ್ತರು ಸಂಪೂರ್ಣವಾಗಿ ತೊಡಗಿಕೊಂಡಿರುವುದು ಖುಷಿ ತಂದಿದೆ ಎಂದರು. 2013-14ರಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದಿದೆ. 2026ಕ್ಕೆ ಬ್ರಹ್ಮಕಲಶೋತ್ಸವ ನಡೆದು 12 ವರ್ಷ ಪೂರ್ಣಗೊಳ್ಳಲಿದೆ. ಆದ್ದರಿಂದ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಆಗಬೇಕಾಗಿದೆ. ಇದಕ್ಕೆ ಗ್ರಾಮಸ್ಥರ ಅಭಿಪ್ರಾಯಬೇಕಾಗಿದೆ. ಶ್ರೀ ರಾಮಕುಂಜೇಶ್ವರ ದೇವಸ್ಥಾನವು ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮಕ್ಕೆ ಗ್ರಾಮ ದೇವಸ್ಥಾನವಾಗಿದೆ. ಮುಂದಿನ ಎಲ್ಲಾ ಕೆಲಸಗಳಿಗೆ ಈ ಎರಡೂ ಗ್ರಾಮಗಳ ಭಕ್ತರನ್ನು ಸೇರಿಸಿಕೊಳ್ಳಲಾಗುವುದು ಎಂದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ್ ತಂತ್ರಿಯವರು ಮಾತನಾಡಿ, ದೇವಸ್ಥಾನದಲ್ಲಿ ಎರಡು ದಿನ ನಡೆದ ಕೋಟಿ ಶಿವಪಂಚಾಕ್ಷರಿ ಜಪಯಜ್ಞ ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಮುಂದಿನ ಕಾರ್ಯಗಳಿಗೆ ಶುಭಸೂಚನೆಯೂ ಆಗಿದೆ. ಶ್ರೀ ರಾಮಕುಂಜೇಶ್ವರ ಕ್ಷೇತ್ರವು ರಾಮ ಹಾಗೂ ಶಿವ ಒಟ್ಟಿಗೆ ಇರುವ ಕ್ಷೇತ್ರವಾಗಿದೆ. ದೇವಸ್ಥಾನ ಜೀರ್ಣಾವಸ್ಥೆಗೆ ಬಂದಾಗ ಜೀರ್ಣೋದ್ದಾರ ಅನಿವಾರ್ಯವಾಗಿದೆ. ಇದೊಂದು ಭಕ್ತರಿಗೆ ಸಿಗುವ ಒಳ್ಳೆಯ ಅವಕಾಶವೂ ಆಗಿದೆ. ದೇವರ ಎಲ್ಲಾ ಕಾರ್ಯಗಳಿಗೆ ಭಕ್ತ ಜನರ ಸಹಕಾರವೂ ಬೇಕು ಎಂದರು. ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಎ.ಮಾಧವ ಆಚಾರ್ ಇಜ್ಜಾವು, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಪವಿತ್ರಪಾಣಿ ನರಹರಿ ಉಪಾಧ್ಯಾಯರವರು ಸಂದರ್ಭೋಚಿತವಾಗಿ ಮಾತನಾಡಿ ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವದ ಕುರಿತು ಮಾತನಾಡಿದರು.
ಗ್ರಾಮದ ಭಕ್ತರಾದ ರಾಮ ಭಟ್, ಲಕ್ಷ್ಮೀನಾರಾಯಣ ರಾವ್ ಆತೂರು, ಧರ್ಮಪಾಲ ರಾವ್ ಕಜೆ ಭಕ್ತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿದರು. ಕುಂತೂರು ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್, ದೇವಸ್ಥಾನದ ಪ್ರಧಾನ ಅರ್ಚಕ ಅನಂತ ಉಡುಪ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣಾಕರ ದೊಡ್ಡ ಉರ್ಕ, ಜಗದೀಶ್ ಶೆಟ್ಟಿ ಅಂಬಾಬೀಡು, ಜಗದೀಶ್ ಎ.ಅಜ್ಜಿಕುಮೇರು, ಗುರುವಪ್ಪ ಕುಂಡಾಜೆ, ಶೈಲಜಾ ಬಿ.ಆಳ್ವ ಗುತ್ತುಮನೆ, ಮಾಜಿ ಸದಸ್ಯ ತಿಮ್ಮಪ್ಪ ಗೌಡ ಆನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉತ್ಸವ ಸಮಿತಿ ಸದಸ್ಯರು, ಬೈಲುವಾರು ಸಮಿತಿ ಸಂಚಾಲಕರು, ಗ್ರಾಮಸ್ಥರು, ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಲೋಕನಾಥ ರೈ ಕೇಲ್ಕ ನಿರೂಪಿಸಿದರು.
ಶೀಘ್ರದಲ್ಲೇ ಪ್ರಶ್ನಾಚಿಂತನೆ
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಕುಡುಪು ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿಯವರನ್ನು ಕರೆಸಿ ಅಂದಾಜು ನೀಲ ನಕಾಶೆ ಮಾಡಲಾಗಿದೆ. ಈಗಿರುವ ದೇವಸ್ಥಾನದ ಮಣ್ಣಿನ ಗೋಡೆ, ಹಂಚಿನ ಮಾಡು ತೆರವುಗೊಳಿಸಿ ನವೀಕರಣ ಸಹಿತ ವಿವಿಧ ಅಭಿವೃದ್ಧಿ ಕೆಲಸಗಳಿಗೆ ೪.೫ ಕೋಟಿ ರೂ.ಅಂದಾಜಿಸಲಾಗಿದೆ. ಭಕ್ತರ ಅಭಿಪ್ರಾಯದಂತೆ ಶೀಘ್ರದಲ್ಲೇ ಪ್ರಶ್ನಾಚಿಂತನೆ ನಡೆಸಿ ಮುಂದುವರಿಯಲಾಗುವುದು. ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಜೀರ್ಣೋದ್ದಾರ ಸಮಿತಿ ರಚಿಸಿ ಸರಕಾರದಿಂದ ಅನುಮತಿಯೂ ಪಡೆದುಕೊಳ್ಳಬೇಕಾಗಿದೆ. ಈ ಎಲ್ಲಾ ಕೆಲಸಗಳಿಗೆ ಭಕ್ತರ ಸಹಕಾರ ಬೇಕಾಗಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಹೇಳಿದರು.