ಕೆಯ್ಯೂರು ದೇವಸ್ಥಾನದಲ್ಲಿ ಶಶಿಧರ್ ರಾವ್ ಬೊಳಿಕ್ಕಳರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು; ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಕೆಯ್ಯೂರು ಇಲ್ಲಿ ಆಡಳಿತ ಮೊಕ್ತೇಸರರಾಗಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಕೆದಂಬಾಡಿ, ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿಧನರಾದ ಶಶಿಧರ ರಾವ್ ಬೊಳಿಕ್ಕಳ ಶ್ರೀ ಕ್ಷೇತ್ರ ಕೆಯ್ಯೂರು ಇದರ ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಗಳ ಜಂಟೀ ಆಶ್ರಯದಲ್ಲಿ ಶ್ರದ್ಧಾಂಜಲಿ ಸಭೆಯು ಅ.17ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.


ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕಿದ್ದ ಶಶಿಧರ ರಾವ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದವರು. ದೇವಸ್ಥಾನದಲ್ಲಿ ಮೂರು ಭಾರಿ ನಡೆದ ಬ್ರಹ್ಮಕಲಶದಲ್ಲಿಯೂ ಜೊತೆಗಿದ್ದ ಅವರಲ್ಲಿ ಸದಾ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಚಿಂತನೆಯಿತ್ತು. ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದಾಗ ಕ್ಷೇತ್ರದ ಜೀರ್ಣೋದ್ದಾರ ನಡೆಸಿ ಬ್ರಹ್ಮಕಲಶ ನಡೆಸುವ ಮಹದಾಸೆಯಿತ್ತು. ಬಳಿಕ ಬಂದ ಹೊಸ ಸಮಿತಿ ಅವರನ್ನು ಭೇಟಿ ಆದಾಗ ಎಲ್ಲರೂ ಒಟ್ಟು ಸೇರಿ ಬ್ರಹ್ಮಕಲಶ ನಡೆಸುವ ಭರವಸೆ ನೀಡಿದ್ದರು. ಇದಕ್ಕಾಗಿ ಸಮಿತಿ ನಡೆಸಿ ಮುಂದುವರಿಯಲಾಗಿತ್ತು. ಇದೀಗ ಅವರು ಆಕಸ್ಮಿಕವಾಗಿ ನಮ್ಮನ್ನು ಅಗಲಿದ್ದಾರೆ. ಇದರಿಂದ ಯಾರೂ ವಿಚಲಿತವಾಗದೆ ಕ್ಷೇತ್ರದ ಜೀರ್ಣೋದ್ದಾರ ನಡೆಸಿ ಬ್ರಹ್ಮಕಲಶ ನಡೆಸಿದಾಗ ಅವರ ಆತ್ಮಕ್ಕೆ ಶಾಂತಿ ದೊರೆಯಲು ಸಾಧ್ಯ. ಎಲ್ಲರೂ ಬದ್ದರಾಗಿ ಸಹಕರಿಸಬೇಕು ಎಂದರು.


ಸದ್ಗುಣವಿರುವ ವ್ಯಕ್ತಿಯನ್ನು ಕಳೆದುಕೊಂಡಿರುವುದು ಗ್ರಾಮಕ್ಕೆ ದೊಡ್ಡ ನಷ್ಟ
ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಮಾತನಾಡಿ, ಶಶಿಧರ್ ರಾವ್ ಅವರು ಗ್ರಾಮದಲ್ಲಿ ಸಜ್ಜನ ವ್ಯಕ್ತಿಯಾಗಿ ಬದುಕಿ ಗ್ರಾಮದಲ್ಲಿ ಹಲವು ಮಂದಿಗೆ ಮನೆ ಕಟ್ಟಲು ಸಹಕಾರ ನೀಡಿದವರು. ಜಾಗವಿಲ್ಲದವರಿಗೆ ಜಾಗ ನೀಡುವ ಮೂಲಕ ಎಲ್ಲರಿಗೂ ಬೆಳಕಾದ ಅಮೂಲ್ಯ ರತ್ನ. ನಾವೂ ಕೆಯ್ಯೂರಿಗೆ ಬರಲು ಅವರೇ ಕಾರಣ. ಜನ ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಅವರ ಅಂತಿಮ ಯಾತ್ರೆ ಜನಸ್ತೋಮದಿಂದ ತಿಳಿಯಬಹುದು. ಸದಾ ಸಮಾಜದ ಜೊತೆಗೆಗಿದ್ದ ಶಶಿಧರ್ ರಾವ್ ಅವರ ಜೊತೆಗೆ ಸಮಾಜ ಇರುವುದನ್ನು ತಿಳಿಸಲು ಅಭಿಮಾನಿಗಳಾಗಿ ಅವರ ಉತ್ತರಕ್ರಿಯೆಗೆ ಮುಂಚಿತವಾಗಿ ಅವರ ನಿವಾಸದಲ್ಲಿ ಒಂದು ದಿನ ಶ್ರಮದಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.


ಕೆಯ್ಯೂರು ಗ್ರಾ.ಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಮಾತನಾಡಿ, ಶಶಿಧರ್ ರಾವ್ ಅವರ ಬಗ್ಗೆ ಸಣ್ಣ ವಯಸ್ಸಿನಲ್ಲಯೇ ತಿಳಿದುಕೊಂಡಿದ್ದೇನೆ. ಯಾವುದೇ ಕೆಲಸ ಹೇಳಿದರು ಬೆನ್ನುತಟ್ಟಿ ಪ್ರೋತ್ಸಾಹಿಸಿದವರು. ಯಾವುದೇ ಸಂಘ ಸಂಸ್ಥೆಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದರು. ಜಾತಿ, ಮತ, ಧರ್ಮ ಬಿಟ್ಟು ಹಿರಿಯರಾಗಿ ಮಾರ್ಗದರ್ಶನ ನೀಡುತ್ತಿದ್ದವರು ಎಂದರು.


ರಾಮಕೃಷ್ಣ ಭಟ್ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದ ಶಶಿಧರ ರಾವ್ ಅವರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ದೇವಸ್ಥಾನದ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದವರು ಎಂದರು.
ನಿವೃತ್ತ ಉಪ ತಹಶೀಲ್ದಾರ್ ವಿಶ್ವನಾಥ ಪೂಜಾರಿ ಕೆಂಗುಡೇಲು ಮಾತನಾಡಿ, ಎಲ್ಲರೊಂದಿಗೆ ಆತ್ಮೀಯರಾಗಿದ್ದ ಶಶಿಧರ್ ರಾವ್ ಅವರು ಪರೋಪಕಾರಿಯಾಗಿ, ಸಹಕಾರಿ ಒಡನಾಡಿಯಾಗಿದ್ದವರು ಎಂದರು.


ಹೇಮಾವತಿ ಮಾತನಾಡಿ, ಮಾಡಾವಿನಲ್ಲಿ ನಮಗೆ ಪ್ರೀತಿ, ನಂಬಿಕೆಯ ವ್ಯಕ್ತಿಯೆಂದರೆ ಅದು ಶಶಿಧರ್ ರಾವ್ ಅವರು. ಅವರನ್ನು ನಾವು ಜೀವ ಇರುವ ತನಕ ನಾವು ಮರೆಯುವಂತಿಲ್ಲ ಎಂದರು.
ರಮೇಶ್ ರೈ ಅಬ್ಬೆಜಾಲು ಮಾತನಾಡಿ, ಶಶಿಧರ್ ರಾವ್ ಅವರ ಅಂತಿಮ ಯಾತ್ರೆಯಲ್ಲಿ ಶರತ್ ಕುಮಾರ್ ಮತ್ತು ಯುವಕರ ತಂಡ ಸಲ್ಲಿಸದ ಸೇವೆಯನ್ನು ಕಂಡಾಗಲೇ ಅವರು ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂದರು.


ಆನಂದ ರೈ ಕೆಯ್ಯೂರು ಮಾತನಾಡಿ, ಮಗುವಿನಂತೆ ಮುಗ್ದ ಮನಸ್ಸಿನ ವ್ಯಕ್ತಿತ್ವದವರಾಗಿದ್ದ ಶಶಿಧರ್ ರಾವ್ ಅವರು ಮಕ್ಕಳೊಂದಿಗೆ ಅಚ್ಚುಮೆಚ್ಚಿನಿಂದ ಬೆರೆತು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವ ಪ್ರಯತ್ನ ಮಾಡುತ್ತಿದ್ದರು. ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾದಲ್ಲಿ ಸೇವೆ ಸಲ್ಲಿಸುತ್ತಿದ್ದವರು ಎಂದರು.
ಉಮಾಕಾಂತ ಬೈಲಾಡಿ ಮಾತನಾಡಿ, ತನ್ನ ದು:ಖವನ್ನು ತನ್ನೋಲಗೆ ಇಟ್ಟುಕೊಂಡು ಜೀವನದ ಕೊನೆ ತನಕ ಸಮಾಜದಲ್ಲಿ ಜನಾನುರಾಗಿದ್ದರು. ಧಾರ್ಮಿಕ ಶೈಕ್ಷಣಿಕ ಕ್ಷೇತ್ರದ ಜೊತೆಗೆ ಪ್ರಭಾವಿ ಸಹಕಾರಿಯಾಗಿ ಗ್ರಾಮದ ಮೇಲಿನ ವಿಶೇಷ ಕಾಳಜಿಯಲ್ಲಿ ಸೇವೆ ಸಲ್ಲಿಸಿದವರು ಮಾಡಿದವರು. ಅವರ ಅಗಲುವಿಕೆಯಿಂದ ಗ್ರಾಮದಿಂದ ವಿಶೇಷ ಶಕ್ತಿ ಕಳೆದುಕೊಂಡಿದ್ದೇವೆ ಎಂದರು.ಡಾ.ರಾಮಚಂದ್ರ ಭಟ್ ಮಾತನಾಡಿ, ಊರಿಗೆ ಆಪ್ತರಾಗಿದ್ದ ಶಶಿಧರ ರಾವ್ ಅವರು ಎಲ್ಲಿ ಯಾವುದೇ ಕೊರತೆ ಇದ್ದರೂ ಅಲ್ಲಿ ಅವರಿದ್ದರು. ತನ್ನ ಬಳಿ ಬಂದವರಿಗೆ ತನ್ನಲ್ಲಿ ಏನೂ ಉಳಿಸಿಕೊಳ್ಳದೇ ನೀಡುವಂತ ವ್ಯಕ್ತಿತ್ವದವರಗಿದ್ದರು ಎಂದರು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಇಳಂತಾಜೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಲಜಾಕ್ಷಿ ಎ. ರೈ ಸಾಗು, ಅಶೋಕ್ ರೈ ದೇರ್ಲ, ಸುಜಯ, ಹರಿನಾಥ ಇಳಂತಾಜೆ, ಚಂದ್ರಶೇಖರ ಪೂಜಾರಿ ಕಣಿಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ದಾಮೋದರ ಪೂಜಾರಿ ಕೆಂಗುಡೇಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಹಾಗೂ ಭಕ್ತಾಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here