ಪುತ್ತೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ವಂಚಿಸಿದ ಪ್ರಕರಣ :ಬೆಳಂದೂರಿನ ಅಬ್ದುಲ್ ರಮೀಝ್ ನಿಂದ ಬೆಳ್ತಂಗಡಿಯ ಸಹಕಾರಿ ಸಂಘಕ್ಕೂ ವಂಚನೆ-ದೂರು ದಾಖಲು

0

ಬೆಳ್ತಂಗಡಿ: ಪ್ರತ್ತೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣಗಳನ್ನು ಆಸಲಿಯೆಂದು ನಂಬಿಸಿ ಅಡವಿಟ್ಟು ಸಾಪ ಪಡೆದು ವಂಚನೆ ಮಾಡಿರುವ ಪ್ರಕರಣದ ಆರೋಪಿಯಾಗಿರುವ ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಗುಂಡಿನಾರು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಅಬ್ದುಲ್ ರಮೀಝ್ ಎಂಬಾತ ಬೆಳ್ತಂಗಡಿ ಪಟ್ಟಣದ ಸಂತೆಕಟ್ಟೆ ಸಮೀಪ ಕಾರ್ಯಾಚರಿಸುತ್ತಿರುವ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ತಂಗಡಿ ಶಾಖೆಯಲ್ಲಿಯೂ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ.

ಘಟನೆಯ ವಿವರ:
ಬೆಳಂದೂರು ಗ್ರಾಮದ ಗುಂಡಿನಾರು ನಿವಾಸಿ ನಿವಾಸಿ ಅಬ್ದುಲ್ ರಮೀಝ್ ಎಂಬಾತ ಪ್ರತ್ತೂರಿನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣಗಳನ್ನು ಆಸಲಿಯೆಂದು ನಂಬಿಸಿ ಅಡವಿಟ್ಟು ಸಾಲ ಪಡೆದು ವಂಚನೆ ಮಾಡಿರುವ ಕುರಿತು ಸಂಘದ ಶಾಖಾ ಮ್ಯಾನೇಜರ್ ಪವಿತ್ರ ಎನ್. ಅವರು ನೀಡಿರುವ ದೂರಿನಂತೆ ಈಗಾಗಲೇ ಪ್ರಕರಣ ದಾಖಲಾಗಿದೆ. ಇದರ ಬೆನ್ನಿಗೇ ಆತ ಬೆಳ್ತಂಗಡಿಯ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘಕ್ಕೆ ವಂಚಿಸಿರುವ ಬಗ್ಗೆಯೂ ಅಲ್ಲಿ ದೂರು ದಾಖಲಾಗಿದೆ. 2025ರ ಸೆಪ್ಟೆಂಬರ್ ತಿಂಗಳ 9ರಂದು ಮತ್ತು ಅಕ್ಟೋಬರ್ ತಿಂಗಳ 8ರಂದು ಬೆಳ್ತಂಗಡಿಯ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಗೆ ಬಂದು ಕ್ರಮವಾಗಿ 22.900 ಗ್ರಾಂ ಮತ್ತು 33.910 ಗ್ರಾಂ ತೂಕದ ಚಿನ್ನಾಭರಣ ಎಂದು ನಂಬಿಸಿ ಚಿನ್ನಾಭರಣವನ್ನು ಅಡಮಾನ ಇಟ್ಟು ಕ್ರಮವಾಗಿ ರೂ. 1,91,೦೦೦ ರೂ ಮತ್ತು ರೂ. 2,84,750 ರೂ ಸಾಲ ಪಡೆದುಕೊಂಡಿದ್ದಾನೆ. ಅ.14ರಂದು ಸಾಮಾಜಿಕ ಜಾಲತಾಣದಲ್ಲಿ ಈತ ಇತರ ಹಣಕಾಸು ಸಂಸ್ಥೆಗಳಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಸಾಲ ಪಡೆದು ಮೋಸ ಮಾಡಿರುವ ವಿಚಾರ ತಿಳಿದು ಬಂದ ಹಿನ್ನೆಲೆಯಲ್ಲಿ ಸಂಶಯಗೊಂಡು ಬೆಳ್ತಂಗಡಿ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅಬ್ದುಲ್ ರಮೀಝ್ ಅಡಮಾನ ಇಟ್ಟಿರುವ ಚಿನ್ನಾಭರಣವನ್ನು ಮರು ಪರಿಶೀಲಿಸಿದಾಗ ಆತ ಶಾಖೆಯಲ್ಲಿ ಅಡಮಾನ ಇಟ್ಟಿರುವ ಚಿನ್ನಾಭರಣ ನಕಲಿ ಎಂಬುದು ಗೊತ್ತಾಗಿದೆ. ಒಟ್ಟು 56.810 ಗ್ರಾಂ ತೂಕದ ನಕಲಿ ಚಿನ್ನಾಭರಣ ಇಟ್ಟು ರೂ.4,75,750 ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ವ್ಯವಸ್ಥಾಪಕ ಪ್ರವೀಣ್ ಕ್ಲಿಪರ್ಡ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 117/2025ರಂತೆ ಕಲಂ 318(4), 316(2) ಬಿಎನ್‌ಎಸ್‌ರಂತೆ ಪ್ರಕರಣ ದಾಖಲಾಗಿದೆ.

ಬಾಡಿವಾರಂಟ್‌ನಲ್ಲಿ ವಶಕ್ಕೆ ಪಡೆಯಲು ಸಿದ್ಧತೆ:
ಪುತ್ತೂರಿನಲ್ಲಿರುವ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮತ್ತು ಬೆಳ್ತಂಗಡಿಯ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಅಬ್ದುಲ್ ರಮೀಜ್‌ನನ್ನು ಈಗಾಗಲೇ ಮಂಗಳೂರು ಕಾವೂರಿನಲ್ಲಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಅಸಲಿ ಚಿನ್ನಾಭರಣಗಳು ಎಂದು ನಂಬಿಸಿ ನಕಲಿ ಚಿನ್ನಾಭರಣ ಅಡವಿಟ್ಟು 6.24 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೆಳಂದೂರಿನ ಅಬ್ದುಲ್ ರಮೀಝ್, ಮಂಗಳೂರು ಆಕಾಶಭವನದ ಆನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39) ಮತ್ತು ನಂತೂರು ಬಿಕರ್ನಕಟ್ಟೆಯ ನಿವಾಸಿ ಮೊಹಮ್ಮದ್ ಆಶೀಣ್ ಕಟ್ಟಿತ್ತಾರ್ ಹುಸೈನ್ (34) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಬ್ದುಲ್ ರಮೀಝ್ ವಿರುದ್ಧ ಇದೀಗ ಪುತ್ತೂರು ನಗರ ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿಯೂ ವಂಚನೆ ಪ್ರಕರಣ ದಾಖಲಾಗಿದ್ದು ಆತನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here