ಕಾಣಿಯೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಊರಿನ ಜನರೆಲ್ಲ ಸಂಘಟಿತರಾಗಿ ಒಟ್ಟಾಗಿ ಆಚರಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಪೂರಕ ಕಾರ್ಯಕ್ರಮಗಳನ್ನು ನಡೆಸಬೇಕು. ಅ ನಿಟ್ಟಿನಲ್ಲಿ ಗೆಳೆಯರ ಬಳಗದ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರ ಜನೇಶ್ ಭಟ್ ಬರೆಪ್ಪಾಡಿ ಹೇಳಿದರು.
ಅವರು ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ವತಿಯಿಂದ ಕೊಡಿಮಾರಿನಲ್ಲಿ ನಡೆದ 16ನೇ ವರ್ಷದ ದೀಪಾವಳಿ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಗ್ರಾಮ ವಿಕಾಸ ಜಿಲ್ಲಾ ಮಹಿಳಾ ಕಾರ್ಯದ ಸದಸ್ಯೆ ಇಂದಿರಾ ಬಿ.ಕೆ ಮಾತನಾಡಿ ದೀಪಾವಳಿ ಹಬ್ಬ ದೀಪಗಳ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವ ಹಬ್ಬ ಇಂತಹ ದೀಪಾವಳಿ ಹಬ್ಬದಲ್ಲಿ ಹಿಂದುಗಳಾದ ನಾವೆಲ್ಲ ಒಂದಾಗಿ ಭಾಗವಹಿಸುವುದರ ಮೂಲಕ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಕಟ್ಟುಪಾಡುಗಳು, ರೀತಿ ನೀತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡಬೇಕು. ನಮ್ಮಲ್ಲಿ ಯಾವುದೇ ರೀತಿಯ ಅಭಿಪ್ರಾಯ ಭೇದಗಳು ಬಂದರೂ ಹಿಂದೂಗಳಾದ ನಾವೆಲ್ಲ ಒಂದಾಗಿ ಇರಬೇಕು. ಹಾಗದಾಗ ಮಾತ್ರ ನಮ್ಮ ಹಿಂದೂ ಸಮಾಜ ಮತ್ತಷ್ಟು ಬೆಳಗಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಕಾರ್ಯದರ್ಶಿ ಶ್ರೀನಿತ್ ಮಿಪಾಲು ವಹಿಸಿದ್ದರು. ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯ ರೈ ಮಾದೋಡಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ನಾರಾಯಣ ಭಟ್, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ, ಗೆಳೆಯರ ಬಳಗದ ಗೌರವಾಧ್ಯಕ್ಷ ಅಶ್ಲೇಷ್ ಮಿಪಾಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾರ್ಥಿ ಶ್ರೀವಿದ್ಯಾ ಎನ್ ಮತ್ತು ಕಾಣಿಯೂರು ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ರೋಹಿಣಿ ಅಬೀರ ಇವರುಗಳನ್ನು ಸನ್ಮಾನಿಸಲಾಯಿತು. ಜಯಂತ ಅಬೀರ ಸ್ವಾಗತಿಸಿ, ಗೆಳೆಯರ ಬಳಗದ ಗೌರವ ಸಲಹೆಗಾರ ಶೇಷಪ್ಪ ಅಬೀರ ವಂದಿಸಿದರು. ಗೆಳೆಯರ ಬಳಗದ ಗೌರವ ಸಲಹೆಗಾರ ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭ
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಕೂಟದ ಉದ್ಘಾಟನೆಯನ್ನು ಶೇಷಪ್ಪ ಗೌಡ ಮಾದೋಡಿ ನೇರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ತಿಮ್ಮಪ್ಪ ಗೌಡ ಕಾಯೆರ್ತಡಿ ಅಧ್ಯಕ್ಷ ಉದಯ ರೈ ಮಾದೋಡಿ, ಕೊಡಿಮಾರು ದೈವಸ್ಥಾನದ ಸೇವಾಕರ್ತರಾದ ವಿಷ್ಣು ಗೌಡ ಅಬೀರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಂದೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಕಳುವಾಜೆ , ಗೆಳೆಯರ ಬಳಗದ ಅಧ್ಯಕ್ಷ ಬಾಲಚಂದ್ರ ಅಬೀರ, ಕಾರ್ಯದರ್ಶಿ ಶ್ರೀನಿತ್ ಮಿಪಾಲು ಉಪಸ್ಥಿತರಿದ್ದರು. ರಂಜಿತ್ ಹೊಸೊಕ್ಲು ವಂದಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. .