ರೂ.60 ಕೋಟಿಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ

0

ಪ್ರಥಮ ಸಭೆಯಲ್ಲೇ ರೂ.13.75 ಕೋಟಿ ದೇಣಿಗೆ ವಾಗ್ದಾನ


ಪುತ್ತೂರು:
ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಮಾಸ್ಟರ್ ಪ್ಲ್ಯಾನ್ ಬಗ್ಗೆ ಜೀರ್ಣೋದ್ದಾರ, ಅಭಿವೃದ್ಧಿ ಸಮಿತಿಯ ಮೊದಲ ಸಭೆಯಲ್ಲಿಯೇ ಚರ್ಚೆ ಮಾಡಲಾಯಿತು.ಈಗಾಗಲೇ ಉದ್ಯಮಿಗಳಿಂದ 13.75 ಕೋಟಿ ರೂ.ದೇಣಿಗೆಯ ವಾಗ್ದಾನವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ದೇವಳದ ಜೀರ್ಣೋದ್ಧಾರ ಮತ್ತು ಅಭಿವೃದ್ದಿಯ ಕುರಿತು 25 ಮಂದಿ ಪ್ರಮುಖರನ್ನೊಳಗೊಂಡ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿ ದೇವಳದ ಕಚೇರಿ ಸಭಾಂಗಣದಲ್ಲಿ ಅ.25ರಂದು ಸಂಜೆ ನಡೆದ ಪ್ರಥಮ ಸಭೆಯ ಕೊನೆಯಲ್ಲಿ ಅವರು ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡಿದರು.ಈಗಾಗಲೇ ವಾಗ್ದಾನ ಬಂದಿದೆ.ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ನಡೆಯಲಿದೆ.ಇದರಲ್ಲಿ ಸರಕಾರದಿಂದ ರೂ.11 ಕೋಟಿ ಪ್ರತ್ಯೇಕ ಬರಲಿದೆ.ಮುಂದಿನ ಎರಡು ವರ್ಷದಲ್ಲಿ ದೇವಸ್ಥಾನದ ಪೂರ್ಣ ಜೀರ್ಣೋದ್ಧಾರ ಆಗಲಿದೆ ಎಂದವರು ತಿಳಿಸಿದರು.


ಒಳ್ಳೆಯ ರೀತಿಯ ಮಾಸ್ಟರ್ ಪ್ಲ್ಯಾನ್ ಮೂಡಿ ಬಂದಿದೆ:
ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ಪ್ರಕಾಶ್ ಶೆಟ್ಟಿ ‘ಬಂಜಾರ’ ಅವರು ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಅವರ ಆಹ್ವಾನದ ಮೇರೆಗೆ ನಾನು ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷನಾಗಿ ಒಪ್ಪಿಕೊಂಡಿದ್ದೇನೆ.32 ಎಕ್ರೆಯ ದೇವಳದ ಜಾಗದಲ್ಲಿ ಉತ್ತಮ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದೆ.ಉದ್ಯಾನವನ, ಪುಷ್ಕರಣಿ, ದೇವಸ್ಥಾನಕ್ಕೆ ಬೇಕಾದ ಎಲ್ಲಾ ವಿಚಾರಗಳು ಮಾಸ್ಟರ್ ಪ್ಲ್ಯಾನ್‌ನಲ್ಲಿ ತುಂಬಾ ಚೆನ್ನಾಗಿ ಬಂದಿದೆ.ಸೇರಿದ ಹಿರಿಯರು ಯೋಜನೆಗೆ ಒಪ್ಪಿಗೆ ನೀಡಿದ್ದು, ಮುಂದಿನ ದಿನ ಎಲ್ಲರ ಆಕರ್ಷಣೆಯ ಕೇಂದ್ರವಾಗುವುದರಲ್ಲಿ ಅನುಮಾನವಿಲ್ಲ ಎಂದರು.


ಶಿವಪರಿವಾರದ ಅನುಗ್ರಹದಿಂದ ಯೋಜನೆ ಯಶಸ್ವಿಯಾಗಲಿದೆ:
ಜೀರ್ಣೋದ್ಧಾರ ಸಮಿತಿಯ ಇನ್ನೋರ್ವ ಗೌರವಾಧ್ಯಕ್ಷ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಮೊದಲಿನಿಂದಲೇ ನಾನು ದೇವಸ್ಥಾನ, ದೈವಸ್ಥಾನದ ಕೆಲಸ ಕಾರ್ಯದಲ್ಲಿ ತೊಡಗಿಕೊಂಡು ಬಂದಿರುವ ವ್ಯಕ್ತಿ.ತುಳುನಾಡಿನ ಎಲ್ಲಾ ದೈವದೇವಸ್ಥಾನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನಿಂದಾದ ಸಹಕಾರ ಮಾಡಿದವನು.ಈಗ ವಿಶೇಷವಾಗಿ ಪುತ್ತೂರಿನ ವಲಯದಲ್ಲಿ ಅತಿ ಪ್ರಾಚೀನ ಮತ್ತು ಅತ್ಯಂತ ಭಕ್ತಿ ಶ್ರದ್ಧೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರೇ ಜೀರ್ಣೋದ್ಧಾರ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.ಮಧೂರು ಕ್ಷೇತ್ರದಲ್ಲಿ ಕೆಲ ಸಮಯದ ಹಿಂದೆ ಜೀರ್ಣೋದ್ದಾರ, ಬ್ರಹ್ಮಕಲಶದ ಭಾಗ್ಯ ಸಿಕ್ಕಿತ್ತು.ಇದೀಗ ಹೊಸದಾಗಿ ಅದೇ ಸಾನಿಧ್ಯ ಇರುವ ಕ್ಷೇತ್ರದಲ್ಲೂ ಸೇವೆ ಮಾಡುವ ಭಾಗ್ಯ ದೊರಕಿದೆ.ಅಶೋಕ್ ಕುಮಾರ್ ರೈ ಅವರ ಡೈನಮಿಕ್ ಲೀಡರ್‌ಶಿಪ್‌ನಲ್ಲಿ ನಾನು, ಪ್ರಕಾಶ್ ಶೆಟ್ಟಿಯವರು ಮತ್ತು ಸಮಿತಿಯ ಎಲ್ಲರೂ ಸೇರಿ ಯೋಜನೆಯನ್ನು ಯಶಸ್ಸಿಗೊಳಿಸುವ.ಈಗಾಗಲೇ ಇಲ್ಲೊಂದು ಒಳ್ಳೆಯ ತಂಡವಿದೆ.ಶಿವಪರಿವಾರದ ಅನುಗ್ರಹದಿಂದ ಮಾಡಿದ ಕೆಲಸ ಯಶಸ್ವಿಯಾಗಲಿದೆ ಎಂದು ಹೇಳಿದರು.


ಮುಂದಿನ 5 ಶತಮಾನಕ್ಕೆ ಪೂರಕವಾಗಿ ಕೆಲಸಕಾರ್ಯ:
ಜೀರ್ಣೋದ್ಧಾರ ಸಮಿತಿಯ ಇನ್ನೋರ್ವ ಗೌರವಾಧ್ಯಕ್ಷ ಬಿಂದು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸತ್ಯಶಂಕರ ಭಟ್ ಮಾತನಾಡಿ, ದೇವಾಲಯದ ನೀಲ ನಕ್ಷೆಯಲ್ಲಿ ಸುಂದರವಾಗಿ ಕಾಣುತ್ತಿದೆ.ಅಭಿವೃದ್ಧಿ ಕಾರ್ಯ ಎರಡು ವರ್ಷದಲ್ಲಿ ನಡೆಯಲಿದೆ.ಮುಂದಿನ ಐದು ಶತಮಾನದವರೆಗೆ ಈ ವ್ಯವಸ್ಥೆ ಉಳಿಯುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.ಊರಿನ ಪರವೂರಿನ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.


ಸಮಿತಿಗೆ ಆನೆಬಲ ಬಂದಂತಾಗಿದೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಸಮಿತಿ ರಚನೆಯಾಗಿ ನಾವು ಗ್ರಹಿಸಿದಂತಹ ಎಲ್ಲಾ ಗಣ್ಯ ವ್ಯಕ್ತಿಗಳು ಸಭೆಗೆ ಆಗಮಿಸಿದ್ದಾರೆ.ನಮಗೆ 13.75 ಕೋಟಿ ರೂಪಾಯಿ ಪ್ರಥಮ ಸಭೆಯಲ್ಲೇ ವಾಗ್ದಾನ ನೀಡಿದ್ದಾರೆ.ಇದು ನಮ್ಮ ಸಮಿತಿಗೆ ಆನೆಬಲ ಬಂದಂತಾಗಿದೆ.ಆದಷ್ಟು ಬೇಗ ಅಭಿವೃದ್ದಿ ಕೆಲಸಗಳನ್ನು ಮಾಡಿಯೇ ಮಾಡುತ್ತೇವೆ. ಅದೇ ರೀತಿ ಎಲ್ಲಾ ಭಕ್ತರ ಸಹಕಾರವನ್ನೂ ಯಾಚಿಸುತ್ತೇವೆ ಎಂದರು.


ಮಹಾಲಿಂಗೇಶ್ವರನ ಸಂಕಲ್ಪದಂತೆ ಕಾರ್ಯಕ್ರಮ ನಡೆಯಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ದಿಗ್ದರ್ಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, 12 ವರ್ಷಗಳ ನಂತರ ಜೀರ್ಣೋದ್ಧಾರ, ಅಭಿವೃದ್ದಿ ಪ್ರಾರಂಭ ಆಗುತ್ತದೆ.ಸುತ್ತಮುತ್ತಲಿನ ದೇವಸ್ಥಾನದ ಪ್ರಾಂಗಣ ಏನಿದೆಯೋ ಅದರ ಅಭಿವೃದ್ಧಿ ಈಗ ಮಾಡಬೇಕಾಗಿದೆ.ಶ್ರೀ ದೇವರ ಪ್ರೇರಣೆಯಂತೆ ಈ ಕಾರ್ಯ ನಡೆಯುತ್ತಿದೆ.ಸುಮಾರು 3 ವರ್ಷಗಳಿಂದ ಹಿಂದಿನ ಸಮಿತಿ ಅವಧಿಯಲ್ಲಿ ಮಾಸ್ಟರ್ ಪ್ಲ್ಯಾನ್ ಪ್ರಾರಂಭಗೊಂಡು ಅದನ್ನು ಈಗಿನ ಸಮಿತಿ ಮುಂದುವರಿಸಿಕೊಂಡು ವಿಶೇಷವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.ಹಿಂದೆ ಶಾಸಕರಾಗಿದ್ದ ಸಂಜೀವ ಮಠಂದೂರು ಪೂರ್ಣ ಸಹಕಾರ ಕೊಟ್ಟು ಮಾಸ್ಟರ್ ಪ್ಲ್ಯಾನ್ ಮಾಡಲು ಕಾರಣಕರ್ತರಾಗಿದ್ದರು.ಇವತ್ತು ನಡೆದ ಸಭೆಯು ಅತ್ಯಂತ ಯಶಸ್ವಿಯಾಗಿ ನಡೆದಿದೆ.ಪುತ್ತೂರಿನ ಕ್ಷೇತ್ರಕ್ಕೆ 900 ವರ್ಷಗಳ ಇತಿಹಾಸ ಇದೆ.ನಾವೆಲ್ಲ ಇಲ್ಲಿ ತೃಣಸಮಾನರು.ಮಹಾಲಿಂಗೇಶ್ವರನ ಸಂಕಲ್ಪ ಏನಿದೆಯೋ ಅದನ್ನು ನಾವು ಮುಂದಿಟ್ಟು ಕಾರ್ಯಕ್ರಮ ನಡೆಸಬೇಕಾಗಿದೆ.ಸಾರ್ವಜನಿಕರು ಮುಕ್ತವಾಗಿ ಸಲಹೆ ನೀಡಿ ಅದರ ಕುರಿತು ಚರ್ಚಿಸುವ ಕೆಲಸ ಆಗಲಿದೆ ಎಂದರು.


ಅಭಿವೃದ್ದಿ ಯೋಜನೆಯಲ್ಲಿ ಅವಕಾಶ ಸುಯೋಗ:
ಸಮಿತಿ ಸದಸ್ಯ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಮಾತನಾಡಿ, ದೇವಸ್ಥಾನದ ಪರಿಸರದ ಅಭಿವೃದ್ಧಿ, ಪ್ರಗತಿ ಯೋಜನೆ ನಮಗೆ, ಅದರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸುಯೋಗ ಎಂದರು.

ಮಹಾಲಿಂಗೇಶ್ವರನ ಇಚ್ಛೆಯಂತೆ ಕೆಲಸ
ಮಹಾಲಿಂಗೇಶ್ವರನಿಗೆ ಸೇರಿದ ಜಾಗ ಯಾವುದೆಲ್ಲ ಇದೆಯೋ ಅದೆಲ್ಲವೂ ಮಹಾಲಿಂಗೇಶ್ವರನಿಗೆ ಸೇರಬೇಕೆಂಬುದು ನಮ್ಮ ಆಶಯವಾಗಿತ್ತು.ಸುಮಾರು ಶೇ.60ರಷ್ಟು ಈ ಕೆಲಸ ಆಗಿದೆ.ಕುಟುಂಬ ಸಮೇತ ಸ್ಥಳದಲ್ಲಿ ವಾಸ್ತವ್ಯ ಇರುವವರಿಗೆ ಸಮಯಾವಕಾಶ ನೀಡಲಾಗಿದೆ.ಮುಂದಿನ ದಿನ ಅವರನ್ನು ತೆರವು ಮಾಡಲಾಗುವುದು.ದೇವಳದ ಮಾಸ್ಟರ್ ಪ್ಲ್ಯಾನ್‌ನಂತೆ ಕೆಲಸ ಕಾರ್ಯ ಆಗಬೇಕು. ಎಲ್ಲಾ ಪಕ್ಷದವರನ್ನು, ಎಲ್ಲಾ ಉದ್ಯಮಿಗಳನ್ನು ಸೇರಿಸಿಕೊಂಡು ಒಂದು ವ್ಯವಸ್ಥಿತವಾಗಿ ಜೀರ್ಣೋದ್ದಾರ ಸಮಿತಿ ರಚನೆ ಮಾಡಿ ಒಂದು ಸಭೆಯನ್ನು ಮಾಡಿದ್ದೇವೆ.ಸಭೆಯಲ್ಲಿ ನಾವು 10 ಕೋಟಿ ರೂಪಾಯಿ ವಾಗ್ದಾನದ ನಿರೀಕ್ಷೆಯಲ್ಲಿದ್ದೆವು.ಆದರೆ ಊರಿನ ಉದ್ಯಮಿಗಳಿಂದ 13.75 ಕೋಟಿ ರೂಪಾಯಿಗಳ ವಾಗ್ದಾನ ಲಭಿಸಿದೆ.ಇದರಿಂದ ಮಹಾಲಿಂಗೇಶ್ವರ ದೇವರ ಆಶೀರ್ವಾದ ಇದೆ ಎಂಬುದು ತಿಳಿಯಬಹುದು.ಸರಕಾರದಿಂದ ಸುಮಾರು 11 ಕೋಟಿ ರೂಪಾಯಿ ಮಂಜೂರಾಗಿದೆ.ಅದರಲ್ಲಿ ಕೆರೆಗೆ 3.25 ಕೋಟಿ, ಕೆರೆಯ ಸುತ್ತಮುತ್ತಕ್ಕೆ 2.75 ಕೋಟಿ, ರಸ್ತೆಗೆ 3 ಕೋಟಿ, ತಡೆಗೋಡೆಗೆ 2 ಕೋಟಿ ಎಲ್ಲಾ ಸೇರಿ 11 ಕೋಟಿ ರೂಪಾಯಿ ಆಗಿದೆ.24.57 ಕೋಟಿ ರೂಪಾಯಿ ಅನುದಾನಕ್ಕೆ ವಾಗ್ದಾನ ಆಗಿದೆ.ಒಟ್ಟು ರೂ.60 ಕೋಟಿ ರೂಪಾಯಿಯಲ್ಲಿ ಜೀರ್ಣೋದ್ದಾರದ ಆಲೋಚನೆ ಇದೆ.ಇನ್ನು 30 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು.ನೆಲ್ಲಿಕಟ್ಟೆಯ 1 ಎಕ್ರೆ ಜಾಗದಲ್ಲಿ ರೂ.25 ಕೋಟಿ ರೂಪಾಯಿಯಲ್ಲಿ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಿ ದೇವಸ್ಥಾನಕ್ಕೆ ತಿಂಗಳಿಗೆ ಕನಿಷ್ಠ ರೂ.25 ಲಕ್ಷ ಬಾಡಿಗೆ ಬರಬೇಕು.ಆ ರೀತಿಯಲ್ಲಿ ಕೆಲಸ ನಡೆಯಲಿದೆ.ಟೂರಿಸಂ ಆಗಿ ಈ ಕ್ಷೇತ್ರ ಬೆಳಗಲಿದೆ.ಹಿಂದೂ ಧರ್ಮದ ಅಭಿವೃದ್ಧಿಗಾಗಿ ಏನು ಕೊಡುಗೆ ಕೊಡಬೇಕೋ ಅದನ್ನು ಅಶೋಕ್ ಕುಮಾರ್ ರೈ ಕೊಡಿಸುವ ಕೆಲಸ ಮಾಡುತ್ತೇನೆ.ಮುಂದಿನ 15 ದಿವಸದೊಳಗೆ ಶಿಲಾನ್ಯಾಸ ಕೆಲಸ ಮಾಡಿ ಕಾಮಗಾರಿ ಆರಂಭಿಸಲಾಗುವುದು.ದೇವಳದ ಎದುರಿನ ನಾಗ ಗುಡಿ, ಅಯ್ಯಪ್ಪನ ಗುಡಿ ಸ್ಥಳಾಂತರ ಆಗಲಿದೆ.ಅದಕ್ಕೆ ಪ್ರತ್ಯೇಕವಾಗಿ ಭಕ್ತರ ಸಭೆ ಕರೆಯಲಾಗುವುದು.ಅದರಲ್ಲೂ ಎಲ್ಲಾ ಅಭಿವೃದ್ಧಿ ಆಗಬೇಕಾದರೆ ಎದುರಿನ ಸಭಾಭವನ ಕಟ್ಟಡ ತೆರವು ಮಾಡಬೇಕಾಗಿದೆ.ಹಾಲ್ ತೆರವು ಮಾಡುವಲ್ಲಿ ನಮಗೆ ನೋವಿದೆ.ಆದರೆ ಮಹಾಲಿಂಗೇಶ್ವರನ ಇಚ್ಚೆ ಏನಿದೆ ಅದನ್ನು ಮಾಡುವ ಕೆಲಸ ಮಾಡುತ್ತೇವೆ.ಹೊಸ ಮಾಸ್ಟರ್ ಪ್ಲ್ಯಾನ್‌ನಂತೆ ಕೆಲಸ ಕಾರ್ಯ ನಡೆಯಲಿದೆ
-ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

ಸಭೆಯಲ್ಲಿ ಆರ್ಕಿಟೆಕ್ಟ್ ಅನೂಪ್ ನಾಯಕ್ ಅವರು ಜೀಣೋದ್ಧಾರದ ಮಾಸ್ಟರ್ ಪ್ಲ್ಯಾನ್ ಕುರಿತು ಎಲ್‌ಇಡಿ ಪರದೆಯಲ್ಲಿ ಪ್ರದರ್ಶನ ಮೂಲಕ ವಿಚಾರ ಮಂಡಿಸಿದರು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಮುಂಬೈ ಅಲ್ ಕಾರ್ಗೋದ ಶಶಿಕುಮಾರ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಮಾಲಕ ಬಲರಾಮ ಆಚಾರ್ಯ, ಮಾಸ್ಟರ್ ಪ್ಲ್ಯಾನರಿಯ ಎಸ್.ಕೆ.ಆನಂದ್, ಸಂಜೀವ ಶೆಟ್ಟಿ ಆಂಡ್ ಸನ್ಸ್‌ನ ಮುರಳೀಧರ ಶೆಟ್ಟಿ, ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಪೋಪ್ಯುಲರ್ ಸ್ವೀಟ್ಸ್‌ನ ಮಾಲಕ ಮಾನೂರು ನರಸಿಂಹ ಕಮತ್,ರಾಧಾಸ್ ಡ್ರೆಸಸ್‌ನ ಪ್ರಕಾಶ್ ಕಾಮತ್, ಗಣೇಶ್ ಕಾಮತ್, ದ್ವಾರಕಾ ಸಂಸ್ಥೆಯ ಗೋಪಾಲಕೃಷ್ಣ ಭಟ್,ಎನ್.ಶಿವಪ್ರಸಾದ್ ಶೆಟ್ಟಿ ಕಿನಾರ,ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ,ಶಿವರಾಮ ಆಳ್ವ,ಪ್ರಸಾದ್‌ಕೌಶಲ್ ಶೆಟ್ಟಿ,ಅಮರನಾಥ ಗೌಡ ಬಪ್ಪಳಿಗೆ, ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿವೃತ್ತ ಎಸ್ಪಿ ರಾಮದಾಸ ಗೌಡ,ರವೀಂದ್ರನಾಥ ರೈ ಬಳ್ಳಮಜಲು ಉಪಸ್ಥಿತರಿದ್ದರು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸ್ವಾಗತಿಸಿದರು.ಸದಸ್ಯೆ ಕೃಷ್ಣವೇಣಿ ವಂದಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪಿ.ವಿ, ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ ಶೆಟ್ಟಿ, ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ,ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಸೌಪರ್ಣಿಕ ಬೆಡೇಕರ್ ಪ್ರಾರ್ಥಿಸಿದರು.

ಮರದ ಚಯರ್, ನೆಲಕ್ಕೆ ಕಾರ್ಪೆಟ್, ಲೈವ್ ದೋಸೆ
ಜೀರ್ಣೋದ್ಧಾರ ಸಮಿತಿ ಪ್ರಥಮ ಸಭೆಯು ದೇವಳದ ಕಚೇರಿ ಸಭಾಂಗಣದಲ್ಲಿ ನಡೆದಿದ್ದು,ಸಮಿತಿ ಸದಸ್ಯರು ಬರಲು ದೇವಳದ ಕಚೇರಿಯ ಹಾಸುಗಲ್ಲುವಿನಿಂದಲೇ ಒಳಪ್ರವೇಶಕ್ಕೆ ರೆಡ್ ಕಾರ್ಪೆಟ್ ಹಾಸಲಾಗಿತ್ತು.ಒಳಾಂಗಣ ಸಭೆಗೆ ಪೂರ್ಣ ನೆಲ ಹಾಸು ಕಾರ್ಪೆಟ್ ಅಳವಡಿಸಲಾಗಿತ್ತು.ಸುತ್ತ ಯು ಆಕಾರದಲ್ಲಿ ಟೇಬಲ್ ಅಳವಡಿಸಿ, ಪ್ರತಿ ಟೇಬಲ್‌ನ ಎದುರು ಸಮಿತಿ ಸದಸ್ಯರ ನೇಮ್‌ಬೋರ್ಡ್ ಹಾಕಲಾಗಿತ್ತು.ಪಕ್ಕದಲ್ಲಿ ಎಲ್‌ಇಡಿ ಪರದೆ ಮೇಲೆ ದೇವಳದ ಮಾಸ್ಟರ್ ಪ್ಲ್ಯಾನ್ ನೀಲನಕಾಶೆ ಪ್ರದರ್ಶಿಸಲಾಗಿತ್ತು.ಎಲ್ಲಾ ಸದಸ್ಯರಿಗೂ ಮರದ ಚಯರ್ ವ್ಯವಸ್ಥೆ ಮಾಡಲಾಗಿತ್ತು.ಸಭೆಯ ಕೊನೆಯಲ್ಲಿ ದೇವಳದ ಅನ್ನಛತ್ರದಲ್ಲಿ ಲೈವ್ ದೋಸೆ, ಡ್ರೈ ಫ್ರೂಟ್ಸ್,ಕೆ.ಟಿ.ಚಹಾ ವಿತರಿಸಲಾಯಿತು.ಬಂದವರೆಲ್ಲರಿಗೂ ಚಹಾದ ವ್ಯವಸ್ಥೆ ನೀಡಲಾಯಿತು.

ಮೂವರು ಗೌರವಾಧ್ಯಕ್ಷರು
ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಖ್ಯಾತ ಉದ್ಯಮಿಗಳಾದ ‘ಬಂಜಾರ’ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ‘ಬಿಂದು’ ಸಂಸ್ಥೆಯ ಅಧ್ಯಕ್ಷ ಸತ್ಯಶಂಕರ್, ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಆರ್ಥಿಕ ಸಮಿತಿಯ ಹೊರರಾಜ್ಯದ ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ,ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ರೈ ನಳೀಲು, ಕಾರ್ಯಾಧ್ಯಕ್ಷರಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ದಿಗ್ದರ್ಶಕರಾಗಿ ಕೇಶವಪ್ರಸಾದ್ ಮುಳಿಯ ಸೇರಿದಂತೆ ಒಂದಷ್ಟು ಸಮಿತಿಗಳನ್ನು ರಚನೆ ಮಾಡಲಾಗಿದೆ.ಇನ್ನು ಉಪಸಮಿತಿಗಳನ್ನು ರಚನೆ ಮಾಡಲಿಕ್ಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.‌

LEAVE A REPLY

Please enter your comment!
Please enter your name here