





2027ರಲ್ಲಿ ಸ್ಥಳಾಂತರಿಸಿದ ನೂತನ ಕರೆಯಲ್ಲಿ ಕಂಬಳ-ಚಂದ್ರಹಾಸ ಶೆಟ್ಟಿ


ಪುತ್ತೂರು: ಕರ್ನಾಟಕ ಸರ್ಕಾರದ ಧಾರ್ಮಿಕ ಧತ್ತಿ ಇಲಾಖೆಗೆ ಒಳಪಟ್ಟ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ನೆಲೆಯಲ್ಲಿ ಸಾಗುತ್ತಿದ್ದು, ದೇವಸ್ಥಾನದ ಅಭಿವೃದ್ಧಿ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈರವರ ಮಾರ್ಗದರ್ಶನದ ಮೇರೆಗೆ ದೇವಸ್ಥಾನದ ಮುಖ್ಯರಸ್ತೆ ಬಳಿಯ ಕಂಬಳದ ಒಂದು ಕರೆಯನ್ನು ಎಡಬದಿಗೆ ಸ್ಥಳಾಂತರಿಸುವ ಕುರಿತು ಕಂಬಳ ಕರೆಯ ವೀಕ್ಷಣೆ ಅ.26 ರಂದು ನಡೆಸಿದರು.





2027ರಲ್ಲಿ ಸ್ಥಳಾಂತರಿಸಿದ ನೂತನ ಕರೆಯಲ್ಲಿ ಕಂಬಳ-ಚಂದ್ರಹಾಸ ಶೆಟ್ಟಿ:
ಈ ಕುರಿತು ಮಾತನಾಡಿದ ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಇದೀಗ ಪ್ರಗತಿಪಥದಲ್ಲಿ ಸಾಗುತ್ತಿದ್ದು ದೇವಸ್ಥಾನದ ಅಭಿವೃದ್ಧಿಪೂರಕ ನಿಟ್ಟಿನಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈರವರು ಕಂಬಳದ ಒಂದು ಕರೆಯನ್ನು ಸ್ಥಳಾಂತರಿಸುವಂತೆ ಮಾರ್ಗದರ್ಶನ ಮಾಡಿರುತ್ತಾರೆ. ಅದರಂತೆ ಕಂಬಳದ ಕರೆಯ ಮಣ್ಣು, ಮರಳು ಹೀಗೆ ಸಾಧಕ-ಬಾಧಕಗಳನ್ನು ನೋಡಿ ಹೇಗೆ ವ್ಯವಸ್ಥೆ ಮಾಡಬಹುದು ಎಂದು ಕಂಬಳ ತಜ್ಞರೊಂದಿಗೆ ವೀಕ್ಷಣೆ ಮಾಡುತ್ತಿದ್ದೇವೆ. ಪ್ರಸ್ತುತ ವರ್ಷ ನಡೆಯುವ ಕಂಬಳ ಫೆಬ್ರವರಿಯಲ್ಲಿ ಎಂದಿನಂತೆ ಈಗ ಇರುವ ಕರೆಯಲ್ಲಿಯೇ ನಡೆಸುತ್ತೇವೆ. ಸ್ಥಳಾಂತರಗೊಳಿಸುವ ಕರೆಯನ್ನು ಸಿದ್ಧಪಡಿಸಲು ಕನಿಷ್ಟ ಆರು ತಿಂಗಳು ಆದರೂ ಬೇಕಾಗಬಹುದು. 2027ರಲ್ಲಿ ಸಿದ್ಧಪಡಿಸಿದ ನೂತನ ಕರೆಯಲ್ಲಿ ಕಂಬಳವನ್ನು ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಕೋಟಿ-ಚೆನ್ನಯ ಕಂಬಳ ಸಮಿತಿ ಕೋಶಾಧಿಕಾರಿ ಈಶ್ವರ್ ಭಟ್ ಪಂಜಿಗುಡ್ಡೆ, ಸದಸ್ಯ ವಿನಯ ಕುಮಾರ್ ಸುವರ್ಣ, ದೇವಸ್ಥಾನದ ಮ್ಯಾನೇಜರ್ ಹರೀಶ್, ಕಂಬಳದ ಪ್ರಧಾನ ತೀರ್ಪುಗಾರರಾದ ಎಡ್ತೂರು ರಾಜೀವ ಶೆಟ್ಟಿ, ಕಂಬಳ ಕರೆಯ ನಿರ್ಮಾಣ ಪರಿಣತರಾದ ಅಪ್ಪು ಯಾನೆ ಜೋನ್ ಸಿರಿಲ್ ಡಿ’ಸೋಜ, ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಸದಸ್ಯರಾದ ವಿಕ್ರಂ ಶೆಟ್ಟಿ ಅಂತರ ಕೋಡಿಂಬಾಡಿ, ಜತಿನ್ ನಾಯ್ಕ್ ಕಂಪ ಉಪಸ್ಥಿತರಿದ್ದರು.
ವರ್ಷಂಪ್ರತಿ ನಡೆಯುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರ ಸಮೂಹ ಮೊದಲನೇ ಸ್ಥಾನದಲ್ಲಿದ್ದರೆ ಬಳಿಕ ಜನಸಮೂಹ ಸೇರುವುದು ಕೋಟಿ-ಚೆನ್ನಯ ಕಂಬಳಕ್ಕಾಗಿ. ಕಳೆದ ಹಲವಾರು ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ಕೋಟಿ-ಚೆನ್ನಯ ಕಂಬಳ ಸಮಿತಿಯಿಂದ ಜರಗುತ್ತಿರುವ ಕಂಬಳದ ಕರೆಯು ಇದೀಗ ದೇವಸ್ಥಾನದ ಅಭಿವೃದ್ಧಿ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈರವರ ಮಾರ್ಗದರ್ಶನದ ಮೇರೆಗೆ ಕಂಬಳದ ಒಂದು ಕರೆಯನ್ನು ಎಡಬದಿಗೆ ಸ್ಥಳಾಂತರಿಸಲಾಗುತ್ತಿದೆ.










