






ಆಲಂಕಾರು: ಉಪ್ಪಿನಂಗಡಿ-ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳ ಸಂಖ್ಯೆ ಹೆಚ್ಚುತ್ತಿದ್ದು, ಪೆರಿಯಡ್ಕ ಎಂಬಲ್ಲಿ ಯಾರೋ ಸಾರ್ವಜನಿಕರು ರಾಜ್ಯ ಹೆದ್ದಾರಿಯ ಹೊಂಡದಲ್ಲಿ ಬೆಳ್ಳಂಬೆಳಿಗ್ಗೆ ಬಾಳೆಗಿಡ ನೆಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.



ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಇತ್ತಿಚ್ಚಿಗೆ ಅಲ್ಲಲ್ಲಿ ಹೊಂಡಗಳು ಕಾಣುತ್ತಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಈ ಹೊಂಡದಲ್ಲಿ ಮಳೆ ನೀರು ತುಂಬಿರುವುದರಿಂದ ಹೊಂಡದ ಆಳ ಗೊತ್ತಾಗದೇ ಕೆಲವು ವಾಹನ ಸವಾರರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆಗಳು ನಡೆದಿದೆ. ಇನ್ನೂ ಕೆಲವು ವಾಹನ ಸವಾರರು ಹೊಂಡವನ್ನು ತಪ್ಪಿಸುವ ಭರದಲ್ಲಿ ಬಂದು ಎದುರುಗಡೆಯ ವಾಹನಕ್ಕೆ ಡಿಕ್ಕಿಯಾಗಿರುವ ಘಟನೆಗಳು ಸಂಭವಿಸಿದೆ. ಆಲಂಕಾರು ಕುದ್ಮಾರು ರಸ್ತೆಯಲ್ಲಿ ಕಲ್ಲೇರಿ ಎಂಬಲ್ಲಿ ಹೊಂಡಕ್ಕೆ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದು, ಇನ್ನೆಷ್ಟು ಅವಘಡಗಳು ಈ ಹೊಂಡದಿಂದಾಗಿ ಸಂಭವಿಸಬಹುದು ಎಂಬ ಆತಂಕ ಸಾರ್ವಜನಿಕರದ್ದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿ ವಾಹನ ಸವಾರರ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂಬುದೇ ಸಾರ್ವಜನಿಕರ ಅಭಿಪ್ರಾಯ.













