






ಪುತ್ತೂರು: ಅಡಿಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿಬಂಧಕ ಗುಣಗಳನ್ನು ಹೊಂದಿದ್ದು ಕ್ಯಾನ್ಸರ್ ಕೋಶಗಳ ವೃದ್ಧಿ,ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ ಹಾಗೂ ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ ಎಂದು ಯೆನೆಪೋಯ ವಿಶ್ವವಿದ್ಯಾಲಯದ ಅಧ್ಯಯನ ವರದಿಯಲ್ಲಿ ಕಂಡುಕೊಳ್ಳಲಾಗಿದೆ.
ಮಂಗಳೂರು ಯೆನೆಪೋಯ ವಿಶ್ವವಿದ್ಯಾಲಯ ಅಡಿಕೆಯ ಮೇಲೆ ನಡೆಸಿರುವ ಸಂಶೋಧನಾಧಾರಿತ ಅಧ್ಯಯನದಲ್ಲಿ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ.ಈ ಸಂಶೋಧನಾ ವರದಿಯನ್ನು ಅಡಿಕೆ ಬೆಳೆಗಾರರ ಹಿತರಕ್ಷಕ ಬಹುರಾಜ್ಯಗಳ ಸಹಕಾರ ಸಂಸ್ಥೆ ಸ್ವಾಗತಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.


ಅಡಿಕೆ ಮೇಲಿನ ಸಂಶೋಧನಾಧಾರಿತ ಅಧ್ಯಯನದ ಈ ಮಹತ್ವದ ಫಲಿತಾಂಶವು, ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂಬ ಜನಸಾಮಾನ್ಯರ ನಂಬಿಕೆಗೆ ವೈಜ್ಞಾನಿಕ ಸಾಕ್ಷ್ಯಾಧಾರವನ್ನು ಒದಗಿಸಿದಂತಾಗಿದೆ.ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ, ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲ ಕಲ್ಪಿತ ಎಂಬ ಕ್ಯಾಂಪ್ರೋದ ಪ್ರತಿಪಾದನೆಗೆ ಈ ಅಧ್ಯಯನದ ಮೂಲಕ ಪ್ರಬಲವಾದ ಪುರಾವೆ ಲಭಿಸಿದಂತಾಗಿದೆ ಎಂದು ಕ್ಯಾಂಪ್ರೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



ಪ್ರತಿಷ್ಠಿತ ಸಂಸ್ಥೆಗಳ ಈ ರೀತಿಯ ಸಂಶೋಧನೆ ಆಧಾರಿತ ನಿರ್ಧಾರಗಳು ಅಡಿಕೆಯ ಕುರಿತು ಸಮತೋಲನದ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಪುಷ್ಟೀಕರಿಸಲು ಸಹಾಯ ಮಾಡುತ್ತವೆ. ಈ ಹಿಂದೆ ನಿಟ್ಟೆ ವಿಶ್ವವಿದ್ಯಾಲಯ ಮತ್ತು ಇತರ ಹಲವಾರು ಪ್ರತಿಷ್ಟಿತ ವೈಜ್ಞಾನಿಕ ಸಂಸ್ಥೆಗಳ ಅಧ್ಯಯನಗಳು ಕೂಡ, ಅಡಿಕೆಯು ಕ್ಯಾನ್ಸರ್ ಕಾರಕವಲ್ಲ ಬದಲಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂಬುದನ್ನು ಸಾಬೀತುಪಡಿಸಿವೆ.ಅಡಿಕೆ ಬೆಳೆಗೆ ಇರುವ ಸಾಂಸ್ಕೃತಿಕ ಮತ್ತು ಪರಂಪರಾತ್ಮಕ ಮಹತ್ವ ಇದರಿಂದ ರುಜುವಾತು ಆಗಿದೆ.ಈ ರೀತಿಯ ವೈಜ್ಞಾನಿಕ ದೃಢೀಕರಣಗಳು ಲಕ್ಷಾಂತರ ಅಡಿಕೆ ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಉತ್ಪನ್ನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಕಾಂಪ್ಕೋ ನಂಬಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂಬ ಜನಸಾಮಾನ್ಯರ ನಂಬಿಕೆಗೆ ಅಧ್ಯಯನ ವರದಿ ವೈಜ್ಞಾನಿಕ ಸಾಕ್ಷ್ಯಾಧಾರವನ್ನು ಒದಗಿಸಿದಂತಾಗಿದೆ.ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚೆಗೆ, ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿರುವುದು ಕಪೋಲ ಕಲ್ಪಿತ ಎಂಬ ಕ್ಯಾಂಪ್ಕೋದ ಪ್ರತಿಪಾದನೆಗೆ ಈ ಅಧ್ಯಯನದ ಮೂಲಕ ಪ್ರಬಲವಾದ ಪುರಾವೆ ಲಭಿಸಿದಂತಾಗಿದೆ
–ಎ.ಕಿಶೋರ್ ಕುಮಾರ್ ಕೊಡ್ಗಿ
ಅಧ್ಯಕ್ಷರು,ಕ್ಯಾಂಪ್ಕೋ










