ನ.8: ಪುತ್ತೂರಿನಲ್ಲಿ ನೃತ್ಯೋಪಾಸನಾ ಕಲಾ ಅಕಾಡೆಮಿಯ ‘ವರ್ಷ ಸಂಭ್ರಮ-21’

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಇದರ ವರ್ಷ ಸಂಭ್ರಮ-21 ಕಾರ್ಯಕ್ರಮ ನ.8ರಂದು ಇಲ್ಲಿನ ಬೈಪಾಸ್‌ ಬಳಿಯ ಜೈನ ಭವನದಲ್ಲಿ ಸಂಜೆ 4 ರಿಂದ ನಡೆಯಲಿದೆ.


ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು, ನಾಟ್ಯ ನಿಕೇತನ ಕೊಲ್ಯದ ಉಳ್ಳಾಲ ಮೋಹನ ಕುಮಾರ್‌ ಉದ್ಘಾಟಿಸುವರು. ಬಳಿಕ ಪುತ್ತೂರು, ಉಪ್ಪಿನಂಗಡಿ ಶಾಖೆಗಳ ವಿದ್ಯಾರ್ಥಿಗಳಿಂದ ನೃತ್ಯೋಪಾಸನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅಧ್ಯಕ್ಷತೆ ವಹಿಸುವರು. ಪುತ್ತೂರಿನ ಎಸ್‌ಡಿಪಿ ರೆಮಿಡೀಸ್‌ ಮತ್ತು ರಿಸರ್ಚ್‌ ಸೆಂಟರ್‌ನ ಡಾ.ಹರಿಕೃಷ್ಣ ಪಾಣಾಜೆ ಮುಖ್ಯ ಅತಿಥಿಯಾಗಿ ಆಗಮಿಸುವರು. ಈ ಬಾರಿ ಮೃದಂಗ ಮತ್ತು ಮೋರ್ಸಿಂಗ್‌ ಕಲಾವಿದ ವಿದ್ವಾನ್‌ ಬಾಲಕೃಷ್ಣ ಹೊಸಮನೆ ಅವರಿಗೆ ನೃತ್ಯೋಪಾಸನಾ ಗೌರವ ಪ್ರದಾನ ನಡೆಯಲಿದೆ.

ಈ ಸಂದರ್ಭ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉಚಿತವಾಗಿ ನೃತ್ಯ ಕಲಿಸುವ ನೃತ್ಯ ಪೋಷಣವೂ ಏರ್ಪಡಲಿದೆ. ಅಲ್ಲದೆ ಮೈಸೂರಿನ ಕರ್ನಾಟಕ ಗಂಗೂಬಾಯಿ ಹಾನಗಲ್‌ ಸಂಗೀತ, ನೃತ್ಯ, ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್‌, ಸೀನಿಯರ್‌, ವಿದ್ವತ್‌ ಪೂರ್ವ ಮತ್ತು ವಿದ್ವತ್‌ ಅಂತಿಮ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯಕ್ರಮವೂ ನಡೆಯಲಿದೆ.


ನೃತ್ಯೋಪಾಸನಾ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್‌, ಹಾಡುಗಾರಿಕೆ ವಿದ್ವಾನ್‌ ಕೃಷ್ಣಾಚಾರ್‌ ಪಾಣೆಮಂಗಳೂರು, ವಿದುಷಿ ಡಾ.ನಿಶಿತಾ ಪುತ್ತೂರು, ಮೃದಂಗ ವಿದ್ವಾನ್‌ ಬಾಲಕೃಷ್ಣ ಹೊಸಮನೆ, ವಿದ್ವಾನ್‌ ಗೀತೇಶ್‌ ನೀಲೇಶ್ವರ, ಕೊಳಲಿನಲ್ಲಿ ವಿದ್ವಾನ್‌ ರಾಜ್‌ಗೋಪಾಲ್‌ ಕಾಞಂಗಾಡ್‌ ಸಹಕರಿಸಲಿದ್ದಾರೆ ನೀಡಲಿದ್ದಾರೆ ಎಂದು ನೃತ್ಯೋಪಾಸನಾ ಕಲಾ ಅಕಾಡೆಮಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here