





ಪುತ್ತೂರು: ಆರ್ಯಾಪು ಗ್ರಾಮದ ಉದ್ಯಂಗಳಪದವು ಎಂಬಲ್ಲಿರುವ ಸರಕಾರಿ ಜಾಗದಲ್ಲಿರುವ ಅಕೇಶಿಯಾ ಮರಗಳನ್ನು ತೆರವು ಮಾಡುವಂತೆ ಶಾಸಕ ಅಶೋಕ್ ರೈ ಅವರು ಅರಣ್ಯ ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ.


ಉದ್ಯಂಗಳ ಪದವು ಎಂಬಲ್ಲಿ ಸುಮಾರು 30 ಎಕ್ರೆ ಜಾಗದಲ್ಲಿ ಅಕೇಶಿಯಾ ಗಿಡಗಳಿವೆ. ಈ ಕಾಡಿನ ಸುತ್ತ ಪರಿಸರದಲ್ಲಿ ಮನೆಗಳಿದ್ದು ಅಕೇಶಿಯಾ ಮರ ಹೂ ಬಿಡುವ ಸಮಯದಲ್ಲಿ ಸ್ಥಳೀಯ ಮನೆಗಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಆರ್ಯಾಪು ಗ್ರಾ.ಪಂ ಸದಸ್ಯ ಪವಿತ್ರ ರೈ ರವರು ಗ್ರಾ.ಪಂಗೆ ದೂರು ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರಿಂ ಆದೇಶವನ್ನು ಮುಂದಿಟ್ಟು ಆರ್ಯಾಪು ಗ್ರಾಪಂ ಸಭೆಯಲ್ಲಿ ಮರಗಳನ್ನು ಕಡಿಯುವುದು ಎಂದು ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಆದರೆ ಅರಣ್ಯ ಇಲಾಖೆ ಮರ ಕಡಿಯಲು ಮುಂದಾಗಿರಲಿಲ್ಲ. ಸೋಮವಾರ ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಪವಿತ್ರ ರೈ ಅವರ ಮನವಿಗೆ ಸ್ಪಂದಿಸಿದ ಶಾಸಕರು ಅಲ್ಲಿರುವ ಅಕೇಶಿಯಾ ಮರಗಳನ್ನು ಕೂಡಲೇ ಕಟಾವು ಮಾಡುವಂತೆಯೂ ಬಳಿಕ ಆ ಜಾಗದಲ್ಲಿ ಕಾಡು ಹಣ್ಣಿನ ಗಿಡಗಳನ್ನು ನೆಡುವಂತೆ ಸೂಚನೆಯನ್ನು ನೀಡಿದ್ದಾರೆ.















