





ನೇಸರ ಟೀ ಶರ್ಟ್ ಅನಾವರಣ : ದಶಪ್ರಣತಿ ಯಶೋಗಾಥೆ, ಅದೃಷ್ಟ ಚೀಟಿ ಲೋಕಾರ್ಪಣೆ
ಸಮಾಜಮುಖಿ ಚಿಂತನೆಗೆ ನೇಸರ ಯುವಕ ಮಂಡಲ ಮಾದರಿ : ಸುಬ್ರಾಯ ಭಟ್ ನೀರ್ಕಜೆ



ಮುಕ್ಕೂರು : ಕಳೆದ ಒಂಭತ್ತು ವರ್ಷಗಳಲ್ಲಿ ನೇಸರ ಯುವಕ ಮಂಡಲ ತನ್ನ ಸಾಮಾಜಿಕ ಕಾರ್ಯದಲ್ಲಿ ತೋರಿರುವ ಬದ್ಧತೆ, ಪ್ರಾಮಾಣಿಕತೆ, ಸೇವಾ ಮನೋಭಾವ ಮಾದರಿಯಾದದು. ಈ ಸಂಘಟನೆ ನಮ್ಮೂರಿನ ಹೆಮ್ಮೆ ಎಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸುಬ್ರಾಯ ಭಟ್ ನೀರ್ಕಜೆ ಹೇಳಿದರು.





ನೇಸರ ಯುವಕ ಮಂಡಲ ಇದರ ದಶಪ್ರಣತಿ ಪ್ರಯುಕ್ತ ನ.9 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ಪುರುಷರ ವಿಭಾಗದ ಲೆವೆಲ್, ಸಿಂಗಲ್ ಗ್ರಿಪ್ ಮಾದರಿ, ಮಹಿಳಾ ವಿಭಾಗದ ಲೆವೆಲ್ ಮಾದರಿ ಹಗ್ಗಜಗ್ಗಾಟ ಹಾಗೂ ಗ್ರಾಮ ಗ್ರಾಮಗಳ ನಡುವಿನ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಗಳನ್ನು ಕಟ್ಟುವುದು ಸುಲಭ. ಅದು ಜನ ಮಾನಸದಲ್ಲಿ ಉಳಿಯುವುದು ತನ್ನ ಕೆಲಸ ಮೂಲಕ ಮಾತ್ರ. ನೇಸರ ಸಂಘಟನೆ ಅದನ್ನು ಮಾಡಿ ತೋರಿಸಿದೆ. ಹತ್ತೂರಿಗೆ ನೇಸರ ಸಂಘಟನೆಯ ಪ್ರಭೆ ಪಸರಿಸಲಿ ಎಂದು ಅವರು ಹೇಳಿದರು.
ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯಲ್ಗ ಮಾತನಾಡಿ, 55 ಕ್ಕೂ ಅಧಿಕ ಸಮಾಜಪರ ಕಾರ್ಯಕ್ರಮ ಹಮ್ಮಿಕೊಂಡ ನೇಸರ ಸಂಘಟನೆಯ ಇತಿಹಾಸವನ್ನುಕಂಡಾಗ ಇದೊಂದು ಸಮಾಜಮುಖಿ ಚಿಂತನೆಯ ಸಂಘ ಅನ್ನುವುದು ಸ್ಪಷ್ಟವಾಗುತ್ತದೆ. ಬೆಳ್ಳಿಹಬ್ಬ, ಸುವರ್ಣ ಸಂಭ್ರಮದ ಜತೆಗೆ ಶತ ವರ್ಷದ ತನಕವೂ ಸಂಘಟನೆ ಬೆಳೆಯಲಿ. ಈ ಮೂಲಕ ಜನರಿಗೆ ಅನುಕೂಲ ಆಗಲಿ ಎಂದರು.

ನಿವೃತ್ತ ಎಸ್ ಐ ದೇವದಾಸ ಶೆಟ್ಟಿ ಪೆರುವಾಜೆ ಮಾತನಾಡಿ, ಒಂದು ಉತ್ತಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂತೃಪ್ತಿ ದೊರೆತಿದೆ. ಇದೊಂದು ಸಂಘಟಿತ ಕಾರ್ಯ. ನೇಸರ ಯುವಕ ಮಂಡಲದ ಯಶಸ್ಸಿನ ಪ್ರಯಾಣ ಇನ್ನಷ್ಟು ದೂರ ಸಾಗಲಿ ಎಂದರು.
ಎಂಜಿನಿಯರ್ ನರಸಿಂಹ ತೇಜಸ್ವಿಕಾನಾವು ಮಾತನಾಡಿ, 2016 ರಲ್ಲಿ ನನ್ನ ತಂದೆ ದಿ. ತಿರುಮಲೇಶ್ವರ ಭಟ್ ಅವರು ಉದ್ಘಾಟಿಸಿದ ನೇಸರ ಯುವಕ ಮಂಡಲ ಹತ್ತು ವರ್ಷದಲ್ಲಿ ಸಾಧಿಸಿದ ಪ್ರಗತಿಯನ್ನು ಕಂಡು ಸಂತಸವಾಗಿದೆ. ಪ್ರತಿ ಕಾರ್ಯಕ್ರಮದ ಆರ್ಥಿಕ ಲೆಕ್ಕಚಾರವನ್ನು ಮಂಡಿಸಬೇಕು ಅನ್ನುವ ನನ್ನ ತಂದೆಯವರ ಆಶಯವನ್ನು ಪರಿಪಾಲಿಸುತ್ತಿರುವ, ತನ್ನ ಸಂಸ್ಥೆಯ ಎಲ್ಲ ಆರ್ಥಿಕ ಲೆಕ್ಕಚಾರದ ವಿವರಗಳನ್ನು ಪ್ರತಿ ಮನೆ ಮನೆಗೂ ಮುಟ್ಟಿಸುತ್ತಿರುವ ನೇಸರ ಯುವಕ ಮಂಡಲ ತಾಲೂಕಿನ ಅತ್ಯುತ್ತಮ ಸಂಘಟನೆಗಳಲ್ಲಿ ಒಂದಾಗಿದೆ ಎಂದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ನೇಸರ ಯುವಕ ಮಂಡಲ ಜವಬ್ದಾರಿ ತೆಗೆದುಕೊಂಡ ಎಲ್ಲ ಕಾರ್ಯಕ್ರಮಗಳು ಯಶಸ್ಸು ಕಂಡಿದೆ. ಇದು ಅದರ ಸಂಘಟನೆಯ ಸಾಮರ್ಥ್ಯಕ್ಕೆ ಇರುವ ಉದಾಹರಣೆ. ಸಮಾಜದಲ್ಲಿ ಜಾತಿ, ಮತ, ಧರ್ಮ ಮೀರಿ ಸರ್ವರ ಒಳಿತಿಗಾಗಿ ಶ್ರಮಿಸುತ್ತಿರುವ ನೇಸರ ಸಂಘಟನೆ ನಮ್ಮೆಲ್ಲರ ಸಂಘಟನೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ, ನೆಟ್ಟಾರು ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಭಾಸ್ಕರ ನೆಟ್ಟಾರು, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಜೈನುದ್ದೀನ್ ತೋಟದಮೂಲೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು, ಪ್ರಗತಿಪರ ಕೃಷಿಕ ಸುಬ್ರಹ್ಮಣ್ಯ ಗೌಡ ಒರುಂಕು, ಯುವ ಮುಂದಾಳು ನವೀನ್ ರೈ ಬರಮೇಲು, ಯುವ ಉದ್ಯಮಿ ಕಾರ್ತಿಕ್ ರೈ ಕನ್ನೆಜಾಲು, ಅಂಗನವಾಡಿ ಶಿಕ್ಷಕಿ ರೂಪಾ, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಅನವುಗುಂಡಿ ಮೊದಲಾದವರು ಉಪಸ್ಥಿತರಿದ್ದರು. ನೇಸರ ಯುವಕ ಮಂಡಲದ ಸದಸ್ಯ ಜಯಂತ ಕುಂಡಡ್ಕ ಸ್ವಾಗತಿಸಿ, ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ವಂದಿಸಿದರು.

ಯುವಕ ಮಂಡಲದ ಟೀ ಶರ್ಟ್ ಬಿಡುಗಡೆ
ಪೆರುವಾಜೆ ಗ್ರಾಮದ ಉದ್ಯಮಿಯೋರ್ವರು ನೇಸರ ಯುವಕ ಮಂಡಲದ ಸದಸ್ಯರಿಗೆ ಉಚಿತವಾಗಿ ನೀಡಿದ ಟೀ ಶರ್ಟ್ ಅನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ನೇಸರ ದಶ ವರ್ಷದ ಯಶೋಗಾಥೆ, ಅದೃಷ್ಟ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು.










