ಎಲ್ಲೆಂದರಲ್ಲಿ ಕಸ ಬೆಂಗಳೂರು ಸೂತ್ರಕ್ಕೆ ಮುಂದಾದ ಕೆಯ್ಯೂರು

0


ಕೆಯ್ಯೂರು ಗ್ರಾಪಂ ಅಧ್ಯಕ್ಷರ ಕಾರ್ಯಾಚರಣೆ : ರಸ್ತೆ ಬದಿಗೆ ಕಸ ಬಿಸಾಡುತ್ತಿದ್ದವರು ಬಲೆಗೆ-ಗ್ರಾಪಂನಿಂದ ದಂಡನೆ

ಪುತ್ತೂರು: ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಬೆಂಗಳೂರು ಜಿಬಿಎ ಕಸ ರಿಟರ್ನ್ಸ್ ಅಭಿಯಾನ ಶುರು ಮಾಡಿದ್ದು ಈಗಾಗಲೇ ರಸ್ತೆ ಬದಿಯಲ್ಲಿ ಕಸ ಹಾಕಿದವರ ವಿರುದ್ಧ ಕಠಿಣ ಕಾನೂನು ಕ್ರಮದ ಸೂತ್ರ ಕೈಗೊಂಡಿದ್ದು ಇದೇ ಮಾದರಿಯ ಸೂತ್ರಕ್ಕೆ ಈಗ ಕೆಯ್ಯೂರು ಗ್ರಾಮ ಪಂಚಾಯತ್ ಮುಂದಾಗಿರುವುದು ಶ್ಲಾಘನೀಯ. ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಗೆ ಕಸ ಬಿಸಾಡುತ್ತಿದ್ದವರು ಗ್ರಾಪಂ ಅಧ್ಯಕ್ಷರ ಕೈಗೆ ರೆಡ್‌ಹ್ಯಾಡ್ ಆಗಿ ಸಿಕ್ಕಿಬಿದ್ದ ಘಟನೆ ನ.7 ರಂದು ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಬೊಳಿಕ್ಕಲ ಎಂಬಲ್ಲಿ ನಡೆದಿದೆ.

ಕೆಯ್ಯೂರು ಗ್ರಾಪಂ ಅಧ್ಯಕ್ಷರಾದ ಶರತ್ ಕುಮಾರ್ ಮಾಡಾವುರವರು ತನ್ನ ಮನೆಯಿಂದ ಕಾರಲ್ಲಿ ಬರುವ ಸಂದರ್ಭದಲ್ಲಿ ಬೊಳಿಕ್ಕಲ ಶಾಲಾ ಬಳಿಯಲ್ಲಿ ರಸ್ತೆ ಬದಿಯಲ್ಲಿ ಒಂದು ಸ್ಕೂಟರ್ ನಿಂತುಕೊಂಡಿದ್ದು ಓರ್ವ ವ್ಯಕ್ತಿ ಅನುಮಾನಾಸ್ಪದವಾಗಿ ಏನನ್ನೋ ರಸ್ತೆ ಬದಿಗೆ ಬಿಸಾಡಿದಂತೆ ಕಂಡಿದ್ದು ಇದನ್ನು ಗಮನಿಸಿದ ಶರತ್ ಕುಮಾರ್‌ರವರು ತನ್ನ ಕಾರನ್ನು ನಿಲ್ಲಿಸಿ ವ್ಯಕ್ತಿಯನ್ನು ವಿಚಾರಿಸಿದಾಗ ಅವರು 2 ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮಕ್ಕಳ ಡೈಪರ್ ಅನ್ನು ತುಂಬಿಸಿ ರಸ್ತೆ ಬದಿಗೆ ಎಸೆದಿದ್ದರು. ಕೂಡಲೇ ಶರತ್ ಕುಮಾರ್‌ರವರು ವ್ಯಕ್ತಿಯನ್ನು ತಡೆದು ನಿಲ್ಲಿಸಿ ಅವರ ಕೈಯಿಂದಲೇ ಅದನ್ನು ಹೆಕ್ಕಿಸಿ ಕೊಂಡೋಗುವಂತೆ ಮಾಡಿದರು. ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯವರಿಗೆ ಮಾಹಿತಿ ನೀಡಿ ದಂಡನೆ ವಿಧಿಸುವಂತೆ ತಿಳಿಸಿದರು.


ಗ್ರಾಪಂನಿಂದ ದಂಡನೆ
ರಸ್ತೆ ಬದಿಗೆ ಡೈಪರ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆದಿದ್ದ ವ್ಯಕ್ತಿಗೆ ಗ್ರಾಪಂನಿಂದ ರೂ.5 ಸಾವಿರ ದಂಡನೆ ವಿಧಿಸಲಾಗಿದೆ. ಈಗಾಗಲೇ ಕೆಯ್ಯೂರು ಗ್ರಾಮ ಪಂಚಾಯತ್ ಸ್ವಚ್ಛತಾ ಅಭಿಯಾನದ ಮೂಲಕ ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯುವುದರ ವಿರುದ್ಧ ಜಾಗೃತಿ ಮೂಡಿಸುತ್ತಲೇ ಬಂದಿದ್ದು ಈಗಾಗಲೇ ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿದವರ ವಿರುದ್ಧ ದಂಡನೆ ಕೂಡ ವಸೂಲು ಮಾಡಿದೆ. ಈಗಾಗಲೇ ರಸ್ತೆ ಬದಿಗೆ ಕಸ ಎಸೆದ ಹಲವು ಪ್ರಕರಣಗಳಲ್ಲಿ ಗ್ರಾಪಂ ದಂಡನೆ ವಿಧಿಸಿದೆ.


ಒಳ ರಸ್ತೆ ಬದಿಗೆ ಕಸ,ತ್ಯಾಜ್ಯ…!
ಸ್ವಚ್ಛತಾ ಅಭಿಯಾನದ ಮೂಲಕ ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯದಂತೆ ಜಾಗೃತಿ ಮೂಡಿಸಿದ ಪರಿಣಾಮ ಮುಖ್ಯ ರಸ್ತೆ ಬದಿಗಳಲ್ಲಿ ಕಸ ಹಾಕುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಆದರೆ ಇದೀಗ ಒಳ ರಸ್ತೆಗಳಲ್ಲಿ ನಿರ್ಜನ ಪ್ರದೇಶಗಳಲ್ಲಿ ಕಸ ಹಾಕುತ್ತಿರುವುದು ಕಂಡು ಬರುತ್ತಿದೆ. ಈಗಾಗಲೇ ಒಳ ರಸ್ತೆಗಳಲ್ಲಿ ಕಸ ಸುರಿದವರ ವಿರುದ್ಧವೂ ಕ್ರಮ ಕೈಗೊಂಡು ದಂಡನೆ ವಿಧಿಸುವ ಕೆಲಸ ಆಗಿದೆ. ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯುವುದು ಕಂಡು ಬಂದರೆ ತಕ್ಷಣವೇ ಪಂಚಾಯತ್ ಗಮನಕ್ಕೆ ತರುವಂತೆ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಪರಿಸರ ಮಾಲಿನ್ಯದಿಂದ ತೊಂದರೆ-ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದರು.
ಬೊಳಿಕ್ಕಲ ವ್ಯಾಪ್ತಿಯಲ್ಲಿ ಅದರಲ್ಲೂ ಶಾಲಾ ಮಕ್ಕಳು ಸಂಚರಿಸುವ ರಸ್ತೆಯ ಬದಿಗಳಲ್ಲಿ ಮಕ್ಕಳಿಗೆ ಉಪಯೋಗಿಸುವ ಪ್ಯಾಂಪರ್‍ಸ್‌ಗಳನ್ನು ಹಾಕಲಾಗುತ್ತಿದ್ದು ಇದನ್ನು ನಾಯಿಗಳು ಕಚ್ಚಿಕೊಂಡು ಬಂದು ಎಲ್ಲೆಂದರಲ್ಲಿ ಹಾಕುತ್ತಿವೆ ಇದರಿಂದ ಪರಿಸರ ಮಾಲಿನ್ಯಗೊಂಡು ಕೆಟ್ಟ ವಾಸನೆ ಬರುತ್ತಿದೆ ಇದರಿಂದ ನಮಗೆ ನಡೆದುಕೊಂಡು ಹೋಗಲು ಕೂಡ ಕಷ್ಟವಾಗುತ್ತಿದೆ. ಮಕ್ಕಳ ರಕ್ಷಣೆ ಹಾಗೂ ಆರೋಗ್ಯ ಕಾಪಾಡುವ ಜವಬ್ದಾರಿ ಪಂಚಾಯತ್ ಮೇಲಿರುವುದರಿಂದ ನಮಗೆ ಹಾಗೂ ಪರಿಸರದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪಂಚಾಯತ್ ನೋಡಿಕೊಳ್ಳಬೇಕಾಗಿದೆ. ರಸ್ತೆ ಬದಿಗೆ ಕಸ, ಪ್ಯಾಂಪರ್‍ಸ್ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೊಳಿಕ್ಕಲ ಶಾಲೆಯ ವಿದ್ಯಾರ್ಥಿಗಳು ಸಹಿ ಮಾಡಿ ಪಂಚಾಯತ್‌ಗೆ ಅರ್ಜಿಯೊಂದನ್ನು ನೀಡಿದ್ದರು.

ಬೊಳಿಕ್ಕಲ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಇದಾಗಿದ್ದು ಈ ರಸ್ತೆಯ ಬದಿಗೆ ವ್ಕಕ್ತಿಯೊಬ್ಬರು ಮಕ್ಕಳ ಡೈಪರ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಡುತ್ತಿರುವುದು ಗಮನಕ್ಕೆ ಬಂದು ಅದನ್ನು ಅವರ ಕೈಯಿಂದಲೇ ಹೆಕ್ಕಿಸುವ ಕೆಲಸ ಹಾಗೇ ವ್ಯಕ್ತಿಗೆ ಗ್ರಾಪಂನಿಂದ ದಂಡನೆ ವಿಧಿಸುವ ಕೆಲಸ ಆಗಿದೆ. ಸಾರ್ವಜನಿಕರು ಯಾರೂ ಕೂಡ ರಸ್ತೆ ಬದಿಗೆ ಕಸ, ತ್ಯಾಜ್ಯ ಹಾಕಬಾರದು ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
‘ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here