





ವಿಮಾ ಅಧಿಕಾರಿಗಳ ಜೊತೆ ಮಾತನಾಡಿ ಖಚಿತಪಡಿಸಿದ ಶಾಸಕ ಅಶೋಕ್ ರೈ


ಪುತ್ತೂರು: 2024/25ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆಯು ಮುಂದಿನ 20 ದಿನದೊಳಗೆ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.





ಕಳೆದ ವರ್ಷ ನವೆಂಬರ್ 4 ರಂದು ಬೆಳೆ ವಿಮೆ ರೈತರ ಖಾತೆಗೆ ಜಮೆಗೊಂಡಿತ್ತು. ಈ ಬಾರಿ ನ.11ರವರೆಗೂ ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಅಶೋಕ್ ರೈ ಅವರು ವಿಮಾ ಕಂಪನಿ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಶಾಸಕರು ವಿಮಾ ಮೊತ್ತ ತಡವಾಗಿರುವ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ. ಕಳೆದ ಬಾರಿ ನವೆಂಬರ್ ಮೊದಲವಾರದಲ್ಲಿ ಜಮೆಯಾಗಿದ್ದು, ಈ ಬಾರಿ ತಡವಾಗಿದ್ದರಿಂದ ರೈತರಿಗೆ ಆತಂಕ ಉಂಟಾಗಿತ್ತು. ನೂರಾರು ಮಂದಿ ರೈತರು ಶಾಸಕರಲ್ಲಿ ಈ ವಿಚಾರದ ಬಗ್ಗೆ ದೂರು ಸಲ್ಲಿಸಿದ್ದರು. ರೈತರ ಪರವಾಗಿ ಮಂಗಳವಾರ ಬೆಳಿಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದಾಗ 20 ದಿನದೊಳಗೆ ಫಲಾನುಭವಿ ರೈತರ ಖಾತೆಗೆ ಬೆಳೆ ವಿಮೆ ಜಮೆಯಾಗಲಿದೆ ಎಂದು ತಿಳಿಸಿದ್ದಾಗಿ ಶಾಸಕರು ತಿಳಿಸಿದ್ದಾರೆ.
ಹವಾಮಾನ ಆಧಾರಿತ ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗಿಲ್ಲವೆಂದು ಯಾರೂ ಆತಂಕ ಪಡೆಬೇಕಾಗಿಲ್ಲ. ವಿಮಾ ಕಂಪೆನಿಯ ಜೊತೆ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಯಾವುದೋ ಕಾರಣಕ್ಕೆ ತಡವಾಗಿರಬಹುದು. ವಿಮಾ ಮೊತ್ತ ಎಲ್ಲ ರೈತರ ಖಾತೆಗೆ ಬಂದೇ ಬರುತ್ತದೆ. ಈ ಮೊತ್ತದಲ್ಲಿ ಕರ್ನಾಟಕ ರಾಜ್ಯ ಸರಕಾರದ ಶೇ.70 ಹಾಗೂ ಕೇಂದ್ರ ಸರಕಾರದ ಶೇ.30 ಪಾಲುದಾರಿಕೆ ಇದರಲ್ಲಿದ್ದು, ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ. ಕಳೆದ ವರ್ಷ ನವೆಂಬರ್ ಮೊದಲ ವಾರದಲ್ಲಿ ಜಮೆಯಾಗಿದ್ದು, ಈ ವರ್ಷ 20 ದಿನ ತಡವಾಗಿದೆ. ರೈತರು ಆತಂಕ ಪಡೆಬೇಕಿಲ್ಲ.
ಅಶೋಕ್ ರೈ, ಶಾಸಕರು, ಪುತ್ತೂರು










