





6 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿ


ಪುತ್ತೂರು:ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಒಟ್ಟು 19 ನಿರ್ದೇಶಕ ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಳಿದ 6 ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆಯಲಿದ್ದು ಸಹಕಾರ ಭಾರತಿಯ 6 ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.





ಕರ್ನಾಟಕ ರಾಜ್ಯದ 10 ಮತ್ತು ಕೇರಳದಿಂದ 9 ಸೇರಿದಂತೆ ಒಟ್ಟು 19 ಸ್ಥಾನಗಳಿಗೆ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಈ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.ಕೇರಳದಲ್ಲಿ 10 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ.ಕರ್ನಾಟಕದ 10 ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.ಉಳಿದ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
19 ಸ್ಥಾನಗಳ ಪೈಕಿ 16 ಸ್ಥಾನಗಳು ಸಾಮಾನ್ಯ ಮೀಸಲು ಮತ್ತು ಎರಡು ಸ್ಥಾನ ಮಹಿಳಾ ಮೀಸಲಾಗಿದ್ದು ಒಂದು ಸ್ಥಾನವನ್ನು ಪ.ಜಾತಿ ಯಾ ಪಂಗಡಕ್ಕೆ ಮೀಸಲಿರಿಸಲಾಗಿದೆ.ಸಾಮಾನ್ಯ 16 ಸ್ಥಾನಗಳಲ್ಲಿ ಎ ಮತ್ತು ಬಿ ದರ್ಜೆಗೆ 4 ಹಾಗೂ ಸಿ ದರ್ಜೆಗೆ 12 ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಅವಿರೋಧವಾಗಿ ಆಯ್ಕೆಯಾದವರು:
ಕರ್ನಾಟಕದಿಂದ ಎ ಮತ್ತು ಬಿ ತರಗತಿಯಿಂದ ರಾಘವೇಂದ್ರ ಹೆಚ್.ಎಂ.,ವಿಶ್ವನಾಥ ಈಶ್ವರ ಹೆಗ್ಡೆ, ಸಿ ಕ್ಲಾಸ್ ಮಹಿಳಾ ಮೀಸಲು ವಿಭಾಗದಿಂದ ಮಾಲಿನಿ ಪ್ರಸಾದ್ ಮತ್ತು ಎಸ್ಸಿ/ಎಸ್ಟಿ ಮೀಸಲು ವಿಭಾಗದಿಂದ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೇರಳ ರಾಜ್ಯದಿಂದ ಸಿ ಕ್ಲಾಸ್ ಸಾಮಾನ್ಯ ಮೀಸಲು ವಿಭಾಗದಿಂದ ಕೆ.ಸತೀಶ್ಚಂದ್ರ ಭಂಡಾರಿ,ಸದಾನಂದ ಶೆಟ್ಟಿ.,ವಿವೇಕಾನಂದ ಗೌಡ ಪಿ.,ಕೆ.ಸತ್ಯನಾರಾಯಣ ಪ್ರಸಾದ್.,ರಾಧಾಕೃಷ್ಣನ್ ಕೆ.,ಗಣೇಶ್ ಕುಮಾರ್ ಎ.,ಮಹಿಳಾ ಮೀಸಲು ವಿಭಾಗದಿಂದ ಸೌಮ್ಯ ಮತ್ತು ಎ ಮತ್ತು ಬಿ ತರಗತಿಯಿಂದ ವೆಂಕಟ್ರಮಣ ಭಟ್ ವೈ ಹಾಗೂ ಪದ್ಮರಾಜ್ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಂತಿಮ ಕಣದಲ್ಲಿರುವವರು:
ಕರ್ನಾಟಕದ 10 ಸ್ಥಾನಗಳ ಪೈಕಿ 6 ಸ್ಥಾನಗಳಿಗೆ 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಸಿ ಕ್ಲಾಸ್ ಸಾಮಾನ್ಯ ಮೀಸಲು ಸ್ಥಾನದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ದಯಾನಂದ ಹೆಗ್ಡೆ, ಎಸ್.ಆರ್.ಸತೀಶ್ಚಂದ್ರ,ಎಂ.ಮಹೇಶ್ ಚೌಟ,ಎ.ವಿ.ತೀರ್ಥರಾಮ, ಮುರಳಿಕೃಷ್ಣ ಕೆ.ಎನ್.ಮತ್ತು ಪುರುಷೋತ್ತಮ ಭಟ್ ಎಂ.ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ರಾಮಪ್ರತೀಕ್ ಕೆ.ಮತ್ತು ಎಂ.ಜಿ.ಸತ್ಯನಾರಾಯಣ ಅವರು ಅಂತಿಮ ಕಣದಲ್ಲಿದ್ದಾರೆ.
13 ಮಂದಿಯಿಂದ ನಾಮಪತ್ರ ಹಿಂತೆಗೆತ:
ಕ್ಯಾಂಪ್ಕೋದ 19 ಸ್ಥಾನಗಳಿಗೆ ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.ಈ ಪೈಕಿ ಸಿ ಕ್ಲಾಸ್ ಸಾಮಾನ್ಯ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ವೇಣುಗೋಪಾಲ್ ಎಂಬವರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿತ್ತು.34 ಮಂದಿಯ ನಾಮಪತ್ರ ಕ್ರಮಬದ್ಧವಾಗಿತ್ತು.ಸಿ ಕ್ಲಾಸ್ ಸಾಮಾನ್ಯ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಸಹಕಾರ ಭಾರತಿಯ ಕಮಲಪ್ರಭಾಕರ್ ಭಟ್, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ, ಹಿರಿಯ ಪತ್ರಕರ್ತರೂ ಆಗಿರುವ ಮಹೇಶ್ ಪುಚ್ಚಪ್ಪಾಡಿ ಹಾಗೂ ಎ ಮತ್ತು ಬಿ ತರಗತಿಯಿಂದ ನಾಮಪತ್ರ ಸಲ್ಲಿಸಿದ್ದ ಸಹಕಾರ ಭಾರತಿಯ ತೀರ್ಥಾನಂದ ದುಗ್ಗಳ ಸಹಿತ 13 ಮಂದಿ ಅಭ್ಯರ್ಥಿಗಳು ನ.11ರಂದು ನಾಮಪತ್ರ ಹಿಂಪಡೆದುಕೊಂಡಿದ್ದಾರೆ.ಇದರಿಂದಾಗಿ 13 ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ.6 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 8 ಮಂದಿ ಅಂತಿಮ ಕಣದಲ್ಲಿದ್ದಾರೆ.
5667 ಮತದಾರರು:
ಕ್ಯಾಂಪ್ಕೋ ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದರೂ ಒಟ್ಟು 5667 ಮಂದಿಗೆ ಮಾತ್ರ ಮತದಾನಕ್ಕೆ ಅವಕಾಶವಿದೆ.ಸಿ ಕ್ಲಾಸ್ನಿಂದ 5576 ಹಾಗೂ ಎ ಮತ್ತು ಬಿ ಕ್ಲಾಸ್ನಿಂದ 91 ಮಂದಿ ಮತದಾರರು ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದಾರೆ.ನ.23ರಂದು ಮಂಗಳೂರು ಶಾರದಾ ವಿದ್ಯಾಲಯದಲ್ಲಿ ಬೆಳಗ್ಗೆ ಗಂಟೆ 8ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ.ನ.25ರಂದು ಕ್ಯಾಂಪ್ಕೋ ದ ಮಂಗಳೂರು ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.ನ.28ರಂದು ನೂತನ ನಿರ್ದೇಶಕರ ಘೋಷಣೆ ನಡೆಯಲಿದೆ.
15 ವರ್ಷ ಬಳಿಕ ಚುನಾವಣೆ
15 ವರ್ಷದ ಬಳಿಕ ಇದೀಗ ಕ್ಯಾಂಪ್ಕೋಗೆ ಚುನಾವಣೆ ನಡೆಯುತ್ತಿದೆ.2010ರಲ್ಲಿ ಕಾಂಗ್ರೆಸ್ನ ವಿಶ್ವನಾಥ ಶೆಟ್ಟಿ ಕಳೆಂಜ ಇವರು ಕಣದಲ್ಲಿದ್ದುದರಿಂದಾಗಿ ಸಹಕಾರ ಭಾರತಿ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಸಾಧ್ಯವಾಗದೆ ಚುನಾವಣೆ ನಡೆದಿತ್ತು.ಆ ಬಳಿಕ 2015 ಮತ್ತು 2020ರಲ್ಲಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಚುನಾವಣೆ ನಡೆದಿರಲಿಲ್ಲ.15 ವರ್ಷಗಳ ನಂತರ ಇದೀಗ ಮತ್ತೆ ಕ್ಯಾಂಪ್ಕೋ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.2010ಕ್ಕೂ ಮೊದಲು ಚುನಾವಣೆ ನಡೆದಿತ್ತು.








