





ಪಠ್ಯ, ಪಠ್ಯೇತರದಲ್ಲಿ ಸಮಾನವಾಗಿ ಭಾಗವಹಿಸಿದಾಗ ಸರ್ವಾಂಗೀಣ ಅಭಿವೃದ್ಧಿ-ರಾಜೇಶ್ವರಿ ಹೆಚ್.ಹೆಚ್.
ಓದು ಮಾತ್ರವಲ್ಲದೆ ಶಕ್ತಿ, ಪ್ರತಿಭೆಯಿಂದ ಬದುಕು ಕಟ್ಟಬಹುದು-ಸೋಮಶೇಖರ್ ನಾಯಕ್
ಸೋಲು ಗೆಲುವು ಮುಖ್ಯ ಅಲ್ಲ ಪ್ರಯತ್ನ ಮುಖ್ಯ-ವಂ| ಲಾರೆನ್ಸ್ ಮಸ್ಕರೇನಸ್
ನಮ್ಮ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗೂ ಅವಕಾಶವಿದೆ-ವಂ|ಅಶೋಕ್ ರಾಯನ್ ಕ್ರಾಸ್ತಾ
ನಿಮ್ಮ ಕೆಲಸ ಉತ್ತಮವಾಗಿದ್ದರೆ ಜೀವನದಲ್ಲಿ ಎತ್ತರಕ್ಕೇರಬಹುದು-ದೇವಿಚರಣ್ ರೈ
ದ.ಕ.ಜಿಲ್ಲೆಯ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕೃತಿ ಉಳ್ಳವರಾಗಿದ್ದಾರೆ-ಡಾ|ಆಂಟನಿ ಪ್ರಕಾಶ್ ಮೊಂತೆರೊ



ಪುತ್ತೂರು : ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಮಾನಾಗಿ ತೆಗೆದುಕೊಂಡು ಹೋದಾಗ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಇಂತಹ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿದಾಗ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ದ.ಕ, ಇದರ ಉಪನಿರ್ದೇಶಕರಾದ ರಾಜೇಶ್ವರಿ ಹೆಚ್.ಹೆಚ್.ರವರು ಹೇಳಿದರು.





ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ ಜಿಲ್ಲೆ ಸಹಯೋಗದಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಆಯೋಜನೆಯಲ್ಲಿ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪಾಶ್ಚಾತ್ಯ ಸಂಸ್ಕೃತಿಯ ಹಾವಳಿ ಹೆಚ್ಚಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ನಮ್ಮ ಸಾಂಪ್ರದಾಯಿಕವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಇದು ಸಾಧ್ಯ. ದ.ಕ.ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂದು ಆಯೋಜಿಸಲಾಗಿದೆ. ನೀವು ಅಭ್ಯಾಸ ಮಾಡಿದಾಗ ಸ್ಪರ್ಧೆಯಲ್ಲಿ ವಿಜೇತರಾಗಲು ಸಾಧ್ಯ. ನಿಮ್ಮಲ್ಲಿರುವ ಪ್ರತಿಭೆ ಹೊರತರಲು ಇದು ಸಹಕಾರಿಯಾಗುತ್ತದೆ. ಕಲೆ, ಸಂಸ್ಕೃತಿಗಳ ಪ್ರೋತ್ಸಾಹ ಆಗಬೇಕು. ದ.ಕ.ಜಿಲ್ಲೆ ಓದು, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮುಂದೆ ಬರಬೇಕು ಎಂದು ಹೇಳಿ ಶುಭಹಾರೈಸಿದರು.
ಮುಖ್ಯ ಅತಿಥಿ, ಸುಬ್ರಹ್ಮಣ್ಯ ಎಸ್.ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ಕಲೆಯ ಮಹತ್ವವನ್ನು ತಿಳಿಯಬೇಕು. ಇಂದು ವಿದ್ಯಾರ್ಥಿಗಳು ಓದಿನಿಂದಲೇ ಎಲ್ಲವನ್ನು ಪಡೆಯಲು ಸಾಧ್ಯವಿಲ್ಲ. ಓದು ಬೇಕು. ಆದರೆ ಅದುವೇ ಮುಖ್ಯ ಅಲ್ಲ. ಎಷ್ಟು ಸಾಧ್ಯವೋ ಅಷ್ಟು ಅಂಕ ಪಡೆಯಲು ಪ್ರಯತ್ನ ಮಾಡಬೇಕು. ಅದರಿಂದ ಹೆಚ್ಚು ಗಳಿಸಲು ಸಾಧ್ಯವಿಲ್ಲ. ಆದರೆ ಭಗವಂತ ಎಲ್ಲರಿಗೂ ಒಂದೊಂದು ರೀತಿಯ ಶಕ್ತಿ, ಪ್ರತಿಭೆಯನ್ನು ನೀಡಿದ್ದಾನೆ. ಅದನ್ನು ಉಪಯೋಗಿಸಿಕೊಂಡು ಬದುಕನ್ನು ಕಟ್ಟುವ ಪ್ರಯತ್ನ ಮಾಡಬೇಕು ಎಂದರು. ಇಂದು ಸಾಕಷ್ಟು ದುಡಿಯುವ ಕ್ಷೇತ್ರಗಳು ಇದೆ. ಆದರೆ ಅದನ್ನು ನಾವು ಅನ್ವೇಷಣೆ ಮಾಡಿಲ್ಲ. ದುಡಿಯಲು ಎಷ್ಟೋ ಅವಕಾಶಗಳಿವೆ. ಇದರಿಂದ ಹಣ ಸಂಪಾದನೆ ಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಖಂಡಿತಾ ಯಶಸ್ಸು ಸಿಗುತ್ತದೆ. ಎಲ್ಲವನ್ನೂ ಒಂದೇ ದೃಷ್ಟಿಕೋನದಿಂದ ನೋಡಬಾರದು. ನಿಮ್ಮ ಶಕ್ತಿಯನ್ನು ಗುರುತು ಮಾಡಿಕೊಂಡು ಬದುಕಿ ಎಂದು ಹೇಳಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ ಮಾಡಿರುವುದು ಸಂತೋಷ ತಂದಿದೆ. ನೀವು ನಿಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಿದ್ಧರಾಗಿದ್ದೀರಿ. ಸುಮಾರು 30 ಕಾಲೇಜಿನ 400ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗಿಯಾಗುತ್ತಿರುವುದು ವಿಶೇಷವಾಗಿದೆ ಎಂದರು. ಸ್ಪರ್ಧೆಯಲ್ಲಿ ಒಳ್ಳೆಯ ರೀತಿಯಲ್ಲಿ ಮಾಡಿ. ಸೋಲು ಗೆಲುವು ಇದ್ದದ್ದೇ. ಆದರೆ ನಮ್ಮ ಪ್ರಯತ್ನ ಮಾಡುವುದೇ ದೊಡ್ಡ ಸಾಧನೆಯಾಗಿದೆ. ಗೆಲುವು ಇವತ್ತು ಅಥವಾ ನಾಳೆ ಬರಬಹುದು. ನಮ್ಮಲ್ಲಿ ಪ್ರತಿಭೆ, ವಿವಿಧ ರೀತಿಯ ಶಕ್ತಿ ಇದೆ. ಅದನ್ನು ಹೊರತರಬೇಕು ಎಂದ ಅವರು ಜೀವನದಲ್ಲಿ ಎಲ್ಲದರಲ್ಲಿಯೂ ಅಭಿರುಚಿ ಇರಬೇಕು. ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಅಭಿರುಚಿ ಇರಬೇಕು. ಓದಿನ ಜತೆಗೆ ಪಠ್ಯೇತರಕ್ಕೂ ಆದ್ಯತೆ ಕೊಡಬೇಕು. ಲವಲವಿಕೆಯಿಂದ, ವಿವಿಧ ಅಭಿರುಚಿ ಮೈಗೂಡಿಸಿಕೊಂಡರೆ ಜೀವನದಲ್ಲಿ ಆನಂದ ಸಿಗುತ್ತದೆ ಎಂದು ಹೇಳಿ ಶುಭಹಾರೈಸಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಅವಕಾಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಪ್ರತಿಯೊಂದು ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದೇವೆ. ದ.ಕ. ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ನಮ್ಮ ಕಾಲೇಜಿಗೆ ಇವತ್ತು ಹೊಸ ರೂಪ ಬಂದಿದೆ. ಈ ವೇದಿಕೆ ಸಾವಿರಾರು ಮಂದಿಯ ಪ್ರತಿಭೆಗಳನ್ನು ತೋರ್ಪಡಿಸಲು ಅವಕಾಶ ಮಾಡಿಕೊಟ್ಟಿದೆ. ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿ ಸ್ವಾಗತಿಸಿದರು.
ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ, ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ದಿವ್ಯಾ ಅನಿಲ್ ರೈ, ಮಂಗಳೂರು ಕಿಟೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಠಲ್, ಬೊಕ್ಕಪಟ್ಟಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿನ್ಸೆಂಟ್ ಮಸ್ಕರೇನಸ್, ನಾಲ್ಯಪದವು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯಾನಂದ ಎನ್.ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿ ಅಭ್ಯಾಗತರನ್ನು ಬ್ಯಾಂಡ್ ವಾದ್ಯ ಘೋಷದೊಂದಿಗೆ ವೇದಿಕೆಗೆ ಕರೆತರಾಲಯಿತು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾಥನ ಗೀತೆ ಹಾಡಿದರು. ಪ್ರದರ್ಶನ ಕಲಾ ಸಂಘದ ಸಂಚಾಲಕಿ ಹಾಗೂ ಉಪನ್ಯಾಸಕಿ ಸುಮನಾ ರಾವ್ ವಂದಿಸಿ ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಮಾತನಾಡಿ ಕೆಲಸ ಸಾಂಸ್ಕೃತಿಕ ಕಲಿಕೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಕೂಡ ಪಠ್ಯೇತರ ಚಟುವಟಿಕೆಯಲ್ಲಿ ಮುಂದೆ ಇರುತ್ತಾರೆ. ಇಂದಿನ ಸ್ಪರ್ಧೆಗಳು ವೈಯುಕ್ತಿಕವಾಗಿದ್ದರೂ ಅದು ತಂಡದ ಸಾಧನೆಯೂ ಆಗಿರುತ್ತದೆ. ನಿಮ್ಮ ಕೆಲಸವೂ ಕೂಡ ಒಳ್ಳೆಯದಾಗಿದ್ದರೆ ಜೀವನದಲ್ಲಿ ಎತ್ತರಕ್ಕೇರಬಹುದು ಎಂದು ಹೇಳಿ ಶುಭಹಾರೈಸಿದರು.
ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ಡಾ|ಆಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ ದ.ಕ.ಜಿಲ್ಲೆಯ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕೃತಿ ಉಳ್ಳವರಾಗಿದ್ದಾರೆ. ಇದನ್ನು ನಾನು ಇವತ್ತು ನಿಮ್ಮಲ್ಲಿ ಕಂಡಿದ್ದೇನೆ. ಇದು ತುಂಬಾ ಸಂತೊಷ. ಆದುದುರಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಮ್ಮ ಕಾಲೇಜಿಗೆ ಬನ್ನಿ ಎಂದರು. ನಮ್ಮ ಕಾಲೇಜಿನಲ್ಲಿ ಉತ್ತಮ ಕ್ಯಾಂಪಸ್ ಇದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗೆ ಪ್ರೋತ್ಸಾಹ ದೊರೆಯಲಿದೆ. ಅಲ್ಲದೆ ವಿವಿಧ ಕೋರ್ಸುಗಳು ಲಭ್ಯವಿದೆ. ಅಲ್ಲದೆ ನಮ್ಮ ಕಾಲೇಜು ಹಲವು ರಾಜಕೀಯ ನಾಯಕರನ್ನು ಕೊಟ್ಟಿದೆ. ಹೈಕೋಟ, ಸುಪ್ರೀಂಕೋರ್ಟ್ನ ನ್ಯಾಯಾಧೀಶರನ್ನು ಕೊಟ್ಟಿದೆ. ಇಲ್ಲಿ ಕಲಿತವರು ಎಲ್ಲಾ ಕ್ಷೇತಗಳಲ್ಲಿಯೂ ಉನ್ನತ ಸ್ಥಾನಮಾನ ಹೊಂದಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಸ್ಪರ್ಧಾ ಕಾರ್ಯಕ್ರಮ ಆಯೋಜನೆ ಮಾಡಿದ ಕಾಲೇಜಿನ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರದರ್ಶನ ಕಲಾ ಸಂಘದ ಸಂಚಾಲಕಿ ಹಾಗೂ ಉಪನ್ಯಾಸಕಿ ಸುಮನಾ ರಾವ್, ಉಪನ್ಯಾಸಕರಾದ ಗೋವಿಂದ ಪ್ರಕಾಶ್, ಉಪನ್ಯಾಸಕರಾದ ಯಶವಂತ ಎಂ.ಡಿ. ಸ್ವಾಗತಿಸಿ ಭರತ್ ಕುಮಾರ್ ವಂದಿಸಿದರು. ಉಪನ್ಯಾಸಕಿ ಡಾ|ಆಶಾ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.
30 ಕಾಲೇಜಿನ 450 ವಿದ್ಯಾರ್ಥಿಗಳು ಭಾಗಿ
ದ.ಕ.ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ದ.ಕ.ಜಿಲ್ಲೆಯ ಸುಮಾರು 30 ಕಾಲೇಜಿನ 450 ವಿದ್ಯಾರ್ಥಿಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ರಸಪ್ರಶ್ನೆ, ಪ್ರಬಂಧ ಕನ್ನಡ, ಪ್ರಬಂಧ ಇಂಗ್ಲಿಷ್, ಚರ್ಚಾ ಸ್ಪರ್ಧೆ ಕನ್ನಡ, ಚರ್ಚಾ ಸ್ಪರ್ಧೆ ಇಂಗ್ಲಿಷ್, ಏಕಪಾತ್ರಾಭಿನಯ, ಭಾವಗೀತೆ, ಜಾನಪದ ಗೀತೆ, ಚಿತ್ರಕಲೆ ಲೈಬ್ರೆರಿ, ವಿಜ್ಞಾನ ಮಾದರಿ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳು ನಡೆದವು. ಸ್ಪರ್ಧಾ ವಿಜೇತರಿಗೆ ಬಹುಮಾನ, ಪ್ರಶಸ್ತಿಪತ್ರ ವಿತರಿಸಲಾಯಿತು. ಪ್ರದರ್ಶನ ಕಲಾ ಸಂಘದ ಸಂಚಾಲಕಿ ಹಾಗೂ ಉಪನ್ಯಾಸಕಿ ಸುಮನಾ ರಾವ್ ಕಾರ್ಯಕ್ರಮ ಸಂಯೋಜಿಸಿದ್ದರು.

ಸನ್ಮಾನ
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ದ.ಕ, ಇದರ ಉಪನಿರ್ದೇಶಕರಾದ ರಾಜೇಶ್ವರಿ ಹೆಚ್.ಹೆಚ್.ರವರನ್ನು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ, ಸಮಾರೋಪ ಸಮಾರಂಭದ ಮುಖ್ಯ ಅತಿಥಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈರವರನ್ನು ಕಾಲೇಜು ವತಿಯಿಂದ ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.









