





ಪುತ್ತೂರು: ಪಕ್ಷ ಸಂಘಟನೆ ಉದ್ದೇಶಕ್ಕಾಗಿ, ಈ ಹಿಂದೆ ವಿನಯ ಕುಮಾರ್ ಸೊರಕೆಯವರು ಶಾಸಕರಾಗಿದ್ದ ಅವಽಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ನಗರ ಕಾಂಗ್ರೆಸ್ ಘಟಕವನ್ನು ಇದೀಗ ರದ್ದುಪಡಿಸಿ 7 ವಲಯಗಳನ್ನು ರಚಿಸಲಾಗಿದೆ.


ಸೊರಕೆ ಪುತ್ತೂರಿನಲ್ಲಿ ಶಾಸಕರಾಗಿದ್ದಾಗ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ನಗರದ 40 ಬೂತ್ಗಳಿಗೆ ಸಂಬಂಽಸಿ ‘ಪುತ್ತೂರು ನಗರ ಕಾಂಗ್ರೆಸ್’ ಘಟಕ ಸ್ಥಾಪಿಸಲಾಗಿತ್ತು.ಬ್ಲಾಕ್ ಕಾಂಗ್ರೆಸ್ಗೆ ಗ್ರಾಮಾಂತರ ವ್ಯಾಪ್ತಿಯ ಹೊಣೆ ಇದ್ದರೆ,ನಗರದ ಜವಾಬ್ದಾರಿ ನಗರ ಘಟಕಕ್ಕಿತ್ತು.ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಮಾಜಿ ಮಂಡಲ ಪ್ರಧಾನ,ನಗರಸಭೆಯ ಮಾಜಿ ಸದಸ್ಯರೂ ಆಗಿರುವ ಎಚ್.ಮಹಮ್ಮದ್ ಆಲಿ ಅವರು ಕಳೆದ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಅದೊಂದು ಸ್ವತಂತ್ರ ಘಟಕ ಎಂಬಷ್ಟರ ಮಟ್ಟಿಗೆ ಕಾರ್ಯಚಟುವಟಿಕೆ ನಡೆಯುತ್ತಿತ್ತು.ನಗರಸಭೆ ವ್ಯಾಪ್ತಿಯಲ್ಲಿ ಪಕ್ಷದ ಎಲ್ಲ ಚಟುವಟಿಕೆಗಳನ್ನು ನಡೆಸುತ್ತಿತ್ತು.





ಪಕ್ಷದ ಸಂವಿಧಾನದಲ್ಲಿ ನಗರ ಕಾಂಗ್ರೆಸ್ ಎಂಬ ಪ್ರತ್ಯೇಕ ಘಟಕದ ಉಲ್ಲೇಖವಿಲ್ಲ ಎಂದು ಅನೇಕ ಬಾರಿ ಹಿರಿಯ ನಾಯಕರು ಹೇಳುತ್ತಾ ಬಂದಿದ್ದರೂ,ಜಿಲ್ಲೆಯ ಇತರ ಕೆಲವು ಬ್ಲಾಕ್ ವ್ಯಾಪ್ತಿಯಲ್ಲಿ ಇರುವಂತೆ ಪುತ್ತೂರಿನಲ್ಲೂ ನಗರ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿತ್ತು.ಇದೀಗ ನಗರ ಕಾಂಗ್ರೆಸ್ ಘಟಕವೇ ರದ್ದಾಗಿ, ಅದರ ಬದಲಾಗಿ 7 ವಲಯಗಳನ್ನು ಸೃಷ್ಟಿಸಿ ಪ್ರತೀ ವಲಯಕ್ಕೆ ಓರ್ವ ಉಸ್ತುವಾರಿಯನ್ನು ನೇಮಿಸಲಾಗಿದೆ.ಈ ವಲಯಗಳು ಬ್ಲಾಕ್ ಘಟಕದಡಿ ಬರುತ್ತವೆ.ನಾಲ್ಕು ತಿಂಗಳ ಹಿಂದೆ ನಗರ ಘಟಕವನ್ನು ದಿಢೀರ್ ರದ್ದುಗೊಳಿಸಿ 7 ವಲಯಗಳನ್ನು ರಚಿಸುವ ನಿರ್ಧಾರ ಕೈಗೊಂಡಿದ್ದಾಗ ಇದರ ವಿರುದ್ಧ ಕೆಲವರಿಂದ ಆಕ್ರೋಶ ವ್ಯಕ್ತವಾಗಿತ್ತು.ಪಕ್ಷದ ಸಂವಿಧಾನದಲ್ಲಿಲ್ಲ ಎಂಬ ಕಾರಣಕ್ಕೆ ನಗರ ಘಟಕ ವಿಸರ್ಜಿಸುವುದು ಸರಿಯಲ್ಲ.ಇನ್ನೂ ಅನೇಕ ಹುದ್ದೆಗಳು ಪಕ್ಷದ ಸಂವಿಧಾನದಲ್ಲಿ ಇಲ್ಲದಿದ್ದರೂ ಚಾಲ್ತಿಯಲ್ಲಿದೆ ಎಂದು ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಾತ್ಕಾಲಿಕ ಮುಂದೂಡಿಕೆಯಾಗಿತ್ತು:
ಈ ಹಿಂದೆಯೇ ನಗರ ಕಾಂಗ್ರೆಸ್ ಘಟಕ ರದ್ದುಗೊಳಿಸಿ 7 ವಲಯಗಳನ್ನು ಸೃಷ್ಟಿಸುವ ನಿರ್ಧಾರ ಕೈಗೊಳ್ಳಲಾಗಿತ್ತಾದರೂ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.ಅಲ್ಪಸಂಖ್ಯಾತ ಸಮುದಾಯದ ಮುಖಂಡನಾಗಿರುವ ಎಚ್.ಮಹಮ್ಮದ್ ಆಲಿಯವರು ಅಧ್ಯಕ್ಷರಾಗಿರುವ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿ ಅವರ ಹುದ್ದೆ ಕಿತ್ತುಕೊಂಡರೆ ಆ ಸಮುದಾಯದಲ್ಲಿ ಬೇರೆ ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.ಇದೀಗ ಎಚ್.ಮಹಮ್ಮದ್ ಆಲಿ ಅವರನ್ನು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಳಿಸುವ ಮೂಲಕ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.ಕಳೆದ ಜುಲೈ ತಿಂಗಳಲ್ಲಿ ಕೈಗೊಂಡ ನಿರ್ಧಾರದಂತೆ, ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿ 7 ನಗರ ವಲಯ ಕಾಂಗ್ರೆಸ್ ಘಟಕಗಳನ್ನು ಮರು ಚಾಲನೆಗೊಳಿಸಿ ಅವುಗಳ ಮೂಲಕ ಸಂಘಟನಾ ಕಾರ್ಯ ಮಾಡಲು ನಿರ್ಧರಿಸಲಾಗಿದೆ.ಈ ವಲಯ ಘಟಕಗಳು ಬ್ಲಾಕ್ ಕಾಂಗ್ರೆಸ್ ಅಡಿಯಲ್ಲೇ ಕಾರ್ಯನಿರ್ವಹಿಸಲಿವೆ.
ಆಕ್ರೋಶ ವ್ಯಕ್ತವಾಗಿತ್ತು:
ಪುತ್ತೂರು ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿ 7 ವಲಯಗಳನ್ನು ರಚನೆ ಮಾಡಿರುವ ಪಕ್ಷದ ತೀರ್ಮಾನಕ್ಕೆ ಕೆಲವು ಮುಖಂಡರು ಹಾಗೂ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜು.22ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಬೇಕಾಗಿದ್ದ ವಲಯ ಕಾಂಗ್ರೆಸ್ ಪದಾಽಕಾರಿಗಳ ಸಭೆ ದಿಢೀರ್ ಮುಂದೂಡಿಕೆಯಾಗಿತ್ತು.
ಪ್ರಸ್ತುತ ಎಚ್.ಮಹಮ್ಮದ್ ಆಲಿಯವರು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿಂದೆ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷತೆ ಹುದ್ದೆಯ ಆಕಾಂಕ್ಷಿಯಾಗಿದ್ದ ಆಲಿಯವರಿಗೆ ಅವಕಾಶ ನೀಡಲಾಗಿಲ್ಲ.ಇದರಿಂದ ಶಾಸಕರ ಸಹಿತ ಪಕ್ಷದ ಕೆಲವರ ವಿರುದ್ಧ ಅಸಮಾಧಾನಿತರಾಗಿರುವ ಮಹಮ್ಮದ್ ಆಲಿಯವರಿಗೆ ಪಕ್ಷದ ಜವಾಬ್ದಾರಿಯನ್ನೂ ತಪ್ಪಿಸುವ ದುರುದ್ದೇಶದಿಂದ ಇದೀಗ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಪಕ್ಷದ ಕೆಲವು ಕಾರ್ಯಕರ್ತರು, ಈ ನಿರ್ಧಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಆಕ್ಷೇಪ ವ್ಯಕ್ತಪಡಿಸಿ, ಆಕ್ರೋಶ ಹೊರ ಹಾಕಿದ್ದರು.ವಿಚಾರ ಶಾಸಕರ ಗಮನಕ್ಕೂ ಬಂದ ಹಿನ್ನೆಲೆಯಲ್ಲಿ ಅವರ ಸೂಚನೆಯಂತೆ ಉದ್ದೇಶಿತ ಸಭೆ ಮುಂದೂಡಿಕೆಯಾಗಿತ್ತು ಎಂದು ಹೇಳಲಾಗಿತ್ತು.
ಈ ಹಿಂದೆ ಪುತ್ತೂರು ನಗರ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದ್ದು ಅದರ ಅಡಿಯಲ್ಲಿ 40 ಬೂತ್ಗಳು ಕಾರ್ಯನಿರ್ವಹಿಸುತ್ತಿದ್ದವು.ಆದರೆ ಇದೀಗ, ಪಕ್ಷದ ಸಂವಿಧಾನದಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಿ,ನಗರ ವ್ಯಾಪ್ತಿಯಲ್ಲಿ 7 ವಲಯಗಳ ರಚನೆ ಮಾಡಲು ಪಕ್ಷದ ಕೋರ್ ಕಮಿಟಿಯಲ್ಲಿ ತೀರ್ಮಾನವಾಗಿತ್ತು.ನಗರದಲ್ಲಿ ಪಕ್ಷವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಸಂಘಟಿಸಿ ಬಲ ಪಡಿಸುವ ನಿಟ್ಟಿನಲ್ಲಿ ಶಾಸಕರ ಚಿಂತನೆ ಹಾಗೂ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ನಲ್ಲಿ ಈ ಕುರಿತು ತೀರ್ಮಾನಿಸಲಾಗಿದ್ದು ನಗರ ಕಾಂಗ್ರೆಸ್ನ ಬದಲಾಗಿ ನಗರದ 40 ಬೂತ್ಗಳ ಪೈಕಿ 6 ಬೂತ್ಗಳಿಗೆ ಒಂದು ವಲಯದಂತೆ ಒಟ್ಟು 7 ವಲಯಗಳನ್ನು ರಚಿಸಲಾಗಿದೆ.
7 ವಲಯಗಳು:
ನಗರಸಭಾ ವ್ಯಾಪ್ತಿಯಲ್ಲಿ ನೆಹರೂನಗರ,ಬನ್ನೂರು,ಚಿಕ್ಕಮುಡ್ನೂರು,ಪುತ್ತೂರು ಸೆಂಟರ್,ಪರ್ಲಡ್ಕ(ತಲಾ 5 ವಾರ್ಡ್),ಸಾಮೆತ್ತಡ್ಕ,ಕೆಮ್ಮಿಂಜೆ(ತಲಾ 3 ಬೂತ್).
ಎಲ್ಲಾ 7 ವಲಯಗಳಿಗೂ ಈಗಾಗಲೇ ಅಧ್ಯಕ್ಷರನ್ನು ನೇಮಿಸಲಾಗಿದೆ.ನಗರದ 7 ವಲಯಗಳಿಗೆ ಸಂಬಂಽಸಿದಂತೆ ಮಹಮ್ಮದ್ ಆಲಿ, ದುರ್ಗಾಪ್ರಸಾದ್ ರೈ ಕುಂಬ್ರ ಹಾಗೂ ಅಮಳ ರಾಮಚಂದ್ರ ಅವರನ್ನು ಉಸ್ತುವಾರಿಗಳನ್ನಾಗಿ ಪಕ್ಷದಿಂದ ನೇಮಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಈ ಹಿಂದೆ ತಿಳಿಸಿದ್ದರು.
ಸೊರಕೆ ಅವಧಿಯಿಂದ ನಗರ ಕಾಂಗ್ರೆಸ್ ಕಾರ್ಯನಿರ್ವಹಣೆ:
ಈ ಹಿಂದೆ ವಿನಯ ಕುಮಾರ್ ಸೊರಕೆ ಅವರು ಪುತ್ತೂರಿನಲ್ಲಿ ಶಾಸಕರಾಗಿದ್ದ ಅವಧಿಯಿಂದ ಪುತ್ತೂರು ನಗರ ಕಾಂಗ್ರೆಸ್ ಘಟಕ ಕಾರ್ಯನಿರ್ವಹಿಸುತ್ತಿದೆ.ಡಾಲಿ ಎ.ರೇಗೋ,ಸತೀಶ್ ನಾಕ್,ಸೂತ್ರಬೆಟ್ಟು ಜಗನ್ನಾಥ ರೈ, ಲ್ಯಾನ್ಸಿ ಮಸ್ಕರೇನ್ಹಸ್ ಅವರು ಈ ಹಿಂದೆ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.ಪ್ರಸ್ತುತ ಮಹಮ್ಮದಾಲಿಯವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆಲಿ ಅಧ್ಯಕ್ಷರಾಗಿದ್ದರು:
ಶಕುಂತಲಾ ಟಿ.ಶೆಟ್ಟಿ ಶಾಸಕರಾಗಿದ್ದಾಗ ಪಕ್ಷದ ಮುಖಂಡ ಕಾವು ಹೇಮನಾಥ ಶೆಟ್ಟಿ ಅವರ ಬಣದಲ್ಲಿ ಎಚ್.ಮಹಮ್ಮದ್ ಆಲಿ ಗುರುತಿಸಿಕೊಂಡಿದ್ದರು.ಕೆಲ ವರ್ಷಗಳ ಹಿಂದೆ ಹೇಮನಾಥ ಶೆಟ್ಟಿ-ಆಲಿ ನಡುವೆ ಮನಸ್ತಾಪ ಉಂಟಾಗಿ ಆಲಿ ಹೊರಬಂದಿದ್ದರು.ಬಳಿಕ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಅವರೊಂದಿಗೆ ಗುರುತಿಸಿಕೊಂಡಿದ್ದ ಆಲಿಯವರಿಗೆ, ನಗರ ಕಾಂಗ್ರೆಸ್ ಅಧ್ಯಕ್ಷನ ಹೊಣೆ ಸಿಕ್ಕಿತು.ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅಶೋಕ್ ಕುಮಾರ್ ರೈ ಅವರ ಪರವಾಗಿ ಆಲಿಯವರು ಕೆಲಸ ಮಾಡಿದ್ದರು.ಆದರೂ ಆಲಿ ಮತ್ತು ಹೇಮನಾಥ ಶೆಟ್ಟಿ ಗುಂಪಿನ ನಡುವಿನ ಶೀತಲ ಸಮರ ಮುಂದುವರಿದಿತ್ತು.ಕೆಲ ತಿಂಗಳ ಹಿಂದೆ ಪುಡಾ ಅಧ್ಯಕ್ಷತೆಗೆ ಭಾಸ್ಕರ ಗೌಡ ಕೋಡಿಂಬಾಳ ರಾಜೀನಾಮೆ ನೀಡಿದಾಗ ಆ ಸ್ಥಾನಕ್ಕೆ ಮಹಮ್ಮದ್ ಆಲಿ ಪ್ರಬಲ ಆಕಾಂಕ್ಷಿಯಾಗಿದ್ದರು.ಆದರೆ ಅದಕ್ಕೆ ಹೇಮನಾಥ ಶೆಟ್ಟಿ ಬಣ ಆಕ್ಷೇಪ ವ್ಯಕ್ತಪಡಿಸಿತ್ತು ಎನ್ನಲಾಗಿದೆ.ಕೊನೆಗೆ ಆ ಹುದ್ದೆ ಅಮಲ ರಾಮಚಂದ್ರ ಅವರಿಗೆ ದಕ್ಕಿತ್ತು.ಈ ಎಲ್ಲಾ ಬೆಳವಣಿಗೆಯಿಂದ ಆಕ್ರೋಶಗೊಂಡಿದ್ದ ಆಲಿಯವರು ಪಕ್ಷದ ಚಟುವಟಿಕೆಯಿಂದ ಸ್ವಲ್ಪ ದೂರವೇ ಉಳಿದರು.ಶಾಸಕರ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಗೆ ಹಾಜರಾತಿ ಕಡ್ಡಾಯವಿದ್ದರೂ ಅದರಲ್ಲಿ ಆಲಿಯವರು ಭಾಗವಹಿಸಿರಲಿಲ್ಲ.ಇದೀಗ ಎಚ್.ಮಹಮ್ಮದ್ ಆಲಿ ಅವರನ್ನು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ನೇಮಕಗೊಳಿಸಿದ್ದು ಇದರ ಬೆನ್ನಲ್ಲೇ ನಗರ ಕಾಂಗ್ರೆಸ್ ಘಟಕವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂದಿನ ಗುರಿ ನಗರಸಭೆ ಚುನಾವಣೆ-ಕೃಷ್ಣಪ್ರಸಾದ್ ಆಳ್ವ
ನಗರಸಭೆ ಚುನಾವಣೆ ನಮ್ಮ ಮುಂದಿನ ಗುರಿ.ಈ ಹಿನ್ನೆಲೆಯಲ್ಲಿ ಗ್ರಾಮಾಂತರದಲ್ಲಿರುವಂತೆ ನಗರದಲ್ಲೂ 7 ವಲಯ ಮಾಡುವಲ್ಲಿ ಶಾಸಕರ ಸೂಚನೆಯಂತೆ ಕಾರ್ಯಪ್ರವೃತ್ತರಾಗಿದ್ದೇವೆ. ಮುಂದಿನ ದಿನಗಳಲ್ಲಿ ವಲಯ ಘಟಕಗಳ ಅಡಿಯಲ್ಲಿ ನಗರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಮಾಡಿ ಮುಂದಿನ ನಗರಸಭೆ ಚುನಾವಣೆಗೆ ಮುನ್ನ ಪಕ್ಷವನ್ನು ಸದೃಢಗೊಳಿಸಲಾಗುವುದು.ಇಲ್ಲಿನ ತನಕ ಮಹಮ್ಮದ್ ಆಲಿಯವರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ
-ಕೃಷ್ಣಪ್ರಸಾದ್ ಆಳ್ವ, ಅಧ್ಯಕ್ಷರು, ಪುತ್ತೂರು ಬ್ಲಾಕ್ ಕಾಂಗ್ರೆಸ್
ಯಾವುದೇ ಮಾಹಿತಿ ಇಲ್ಲ
ಪುತ್ತೂರು ನಗರ ಕಾಂಗ್ರೆಸ್ ಘಟಕ ರದ್ದುಗೊಳಿಸಿರುವ ಕುರಿತು ನನಗೆ ಯಾವುದೇ ಇನಾರ್ಮೇಶನ್ ಇಲ್ಲ.ಅಷ್ಟಕ್ಕೂ ನಗರ ಕಾಂಗ್ರೆಸ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ.ಅದು ಬ್ಲಾಕ್ನವರೇ ಮಾಡಿಕೊಳ್ಳುವುದು-
ಕೆ.ಹರೀಶ್ ಕುಮಾರ್, ಅಧ್ಯಕ್ಷರು,ದ.ಕ.ಜಿಲ್ಲಾ ಕಾಂಗ್ರೆಸ್
ನಗರ ಕಾಂಗ್ರೆಸ್ ಸಮಿತಿಯ ಅಸ್ತಿತ್ವ ಉಳಿಸಿದರೆ ಒಳ್ಳೆಯದು-ಹೆಚ್.ಮಹಮ್ಮದ್ ಆಲಿ
ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಹಿತದೃಷ್ಟಿಯ ಕಾರಣಕ್ಕಾಗಿ 1985ರ ಕಾಲಘಟ್ಟದಲ್ಲಿ ಶಾಸಕರಾಗಿದ್ದ ವಿನಯಕುಮಾರ್ ಸೊರಕೆಯವರು ನಗರ ಕಾಂಗ್ರೆಸ್ ಸಮಿತಿಯನ್ನು ಅಸ್ತಿತ್ವಕ್ಕೆ ತಂದಿದ್ದರು.ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ಕೆಲಸ ಕಾರ್ಯಕ್ಕೆ ಅನುಕೂಲವಾಗಿತ್ತು.ಡೋಲಿ ಎ.ರೇಗೋ, ಸತೀಶ್ ನಾಯ್ಕ್ ಸೇರಿದಂತೆ ಹಲವರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿರುತ್ತಾರೆ.ಕಳೆದ 40 ವರ್ಷಗಳಿಂದ ನಗರ ಕಾಂಗ್ರೆಸ್ ಸಮಿತಿಯು ಪಕ್ಷ ಸಂಘಟನೆಯ ಕೆಲಸ ಕಾರ್ಯ ಮಾಡುತ್ತಾ ಬಂದಿರುತ್ತದೆ.2018ರಲ್ಲಿ ನಡೆದ ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾದ ಸಂಗತಿಯ ಬಳಿಕ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ಸಲುವಾಗಿ ಯು.ಟಿ.ಖಾದರ್, ಶಕುಂತಲಾ ಟಿ ಶೆಟ್ಟಿ ಸಹಿತ ಕಾಂಗ್ರೆಸ್ನ ಜಿಲ್ಲಾ ನಾಯಕರ ಒತ್ತಾಸೆಗೆ ನಾನು ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜವಾಬ್ದಾರಿಯನ್ನು ಒಪ್ಪಿಕೊಂಡು ನಗರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಕೆಲಸ ಕಾರ್ಯವನ್ನು ಮಾಡುತ್ತಾ ಬಂದಿರುತ್ತೇನೆ.ನಗರ ಕಾಂಗ್ರೆಸ್ ಸಮಿತಿ ಎಂಬುದು ನನ್ನ ಹಿರಿತನಕ್ಕೆ ಸಣ್ಣ ಹುದ್ದೆಯಾದರೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈ ಕಮಾಂಡ್ನ ತೀರ್ಮಾನಕ್ಕೆ ಬದ್ದನಾಗಿ ನಗರ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ವಹಿಸಿಕೊಂಡಿದ್ದೆ.2023ರಲ್ಲಿ ಅಶೋಕ್ ಕುಮಾರ್ ರೈಯವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಚುನಾವಣೆಯಲ್ಲಿ ನಗರ ಕಾಂಗ್ರೆಸ್ ವ್ಯಾಪ್ತಿಯ 40 ಬೂತ್ಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಶ್ರಮದಿಂದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಬರುವಂತಾಯಿತು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷ ಸಂಘಟನೆಯ ಕಾರ್ಯ ಶೈಲಿ ಬೇರೆ ಬೇರೆ ರೀತಿ ಇರುವುದರಿಂದ ನಗರ ಕಾಂಗ್ರೆಸ್ ಸಮಿತಿಯ ಅಸ್ತಿತ್ವವನ್ನು ಉಳಿಸಿ ಒಬ್ಬ ಕ್ರಿಯಾಶೀಲ ಕಾರ್ಯಕರ್ತನನ್ನು ಅಧ್ಯಕ್ಷನಾಗಿ ನೇಮಕಗೊಳಿಸಿದರೆ ಒಳ್ಳೆಯದು.ಇದರಿಂದಾಗಿ ಬ್ಲಾಕ್ ಅಧ್ಯಕ್ಷರ ಹೊರೆ ಕಮ್ಮಿಯಾಗುತ್ತದೆ ಮತ್ತು ಪಕ್ಷ ಸಂಘಟಣೆಗೂ ಅನುಕೂಲವಾಗುತ್ತದೆ.
ಹೆಚ್.ಮಹಮ್ಮದ್ ಆಲಿ,ಅಧ್ಯಕ್ಷರು
ಪುತ್ತೂರು ನಗರ ಕಾಂಗ್ರೆಸ್,
ದ.ಕ.ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ







