





ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ನೇತೃತ್ವದಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹದ ಪ್ರಚಾರಾರ್ಥವಾಗಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಅಳವಡಿಸಿದ್ದ ಎರಡು ಬ್ಯಾನರ್ಗಳಿಗೆ ಹಾನಿಯನ್ನುಂಟು ಮಾಡಿದ ಘಟನೆ ನ.22ರಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಘಟನೆ ಕುರಿತು ಪರಿವಾರ ಮತ್ತು ಕಲ್ಯಾಣೋತ್ಸವ ಸಮಿತಿಯಿಂದ ಬಲ್ನಾಡು ದೈವಸ್ಥಾನದ ಭಂಡಾರದ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.


ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಪುತ್ತಿಲ ಪರಿವಾರದ ಸ್ಥಳೀಯ ಕಾರ್ಯಕರ್ತರು ವಾರದ ಹಿಂದೆ ಬ್ಯಾನರ್ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹದ ಬ್ಯಾನರ್ ಅಳವಡಿಸಿದ್ದರು. ಈ ಎರಡೂ ಬ್ಯಾನರ್ಗಳನ್ನು ಕಿಡಿಗೇಡಿಗಳು ಹಾನಿ ಮಾಡಿರುವುದಾಗಿ ಆರೋಪಿಸಲಾಗಿದೆ.





ಸಾಮೂಹಿಕ ಪ್ರಾರ್ಥನೆ
ಘಟನೆ ಬೆಳಿಗ್ಗೆ ಬೆಳಕಿಗೆ ಬಂದಂತೆ ಪುತ್ತಿಲ ಪರಿವಾರದ ಕಾರ್ಯಕರ್ತರು ಆಕ್ರೋಶಗೊಂಡು ಮುಕ್ರಂಪಾಡಿ ಪುತ್ತಿಲ ಪರಿವಾರದ ಕಾರ್ಯಾಲಯದಲ್ಲಿ ಸೇರಿ ಅಲ್ಲಿಂದ ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸಹಿತವಾಗಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಭಂಡಾರದ ಮನೆಯಲ್ಲಿ ದೈವಸ್ಥಾನದ ಪ್ರಧಾನ ಅರ್ಚಕ ರವಿ ನೆಲ್ಲಿತ್ತಾಯ ಅವರ ನೇತೃತ್ವದಲ್ಲಿ ಸೀಯಾಳ ಮತ್ತು ಮಲ್ಲಿಗೆ ಸಮರ್ಪಣೆ ಮಾಡಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಎಲ್ಲರ ಶ್ರೇಯೋಭಿವೃದ್ಧಿಗಾಗಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಬ್ಯಾನರ್ ಅನ್ನು ಯಾರೊ ನಮಗೆ ಗೊತ್ತಿಲ್ಲದವರು ಹಾನಿಯುಂಟು ಮಾಡಿದ್ದಾರೆ. ಅವರನ್ನು ಆದಷ್ಟು ಬೇಗ ಸಮಾಜಕ್ಕೆ ತೋರಿಸುವ ಮತ್ತು ಅವರಿಗೆ ಸದ್ಭುದ್ದಿಯನ್ನು ನೀಡುವಂತೆ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭ ಪುತ್ರಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ರೂಪೇಶ್ ನಾೖಕ್, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ವೈದಿಕ ಸಮಿತಿ ಸಂಚಾಲಕ ಗುರುತಂತ್ರಿ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಸಂಚಾಲಕ ಅನಿಲ್ ತೆಂಕಿಲ, ಪ್ರಜ್ವಲ್ ಘಾಟೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಧಾರ್ಮಿಕ ಆಚರಣೆಗೂ ವಿರೋಧ ದೊಡ್ಡ ದುರಂತ
ಕಳೆದ ಎರಡು ವರ್ಷದಿಂದ ಧಾರ್ಮಿಕ ಶ್ರದ್ಧೆಯ ಜೊತೆಗೆ ಹಿಂದು ಸಮಾಜಕ್ಕೆ ಶಕ್ತಿಯನ್ನು ಕೊಡುವ ಕಾರ್ಯಕ್ರಮವನ್ನು ಸಾರ್ವಜನಿಕರ ಸಹಯೋಗದೊಂದಿಗೆ ಮಾಡುತ್ತಿದ್ದೇವೆ. ಆದರೆ ಇವತ್ತು ನಮಗೆ ಅತ್ಯಂತ ನೋವನ್ನು ತಂದಿದೆ. ಧಾರ್ಮಿಕ ಕಾರ್ಯಕ್ರಮ ಆಚರಣೆಗೂ ವಿರೋಧ ಮಾಡುವ ಬೆಳವಣಿಗೆ ಮುಂದಿನ ದಿವಸ ಹಿಂದು ಸಮಾಜಕ್ಕೆ ದೊಡ್ಡ ದುರಂತ ಸನ್ನಿವೇಶ ತಂದುಕೊಡಲಿದೆ. ಯಾರು ದುಷ್ಕರ್ಮಿಗಳು ಬ್ಯಾನರ್ಗೆ ಹಾನಿ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಬ್ಯಾನರ್ಗೆ ಹಾನಿ ಮಾಡಿದ ತಪ್ಪಿಗೆ ಅವರಿಗೆ ತಾಯಿ ತಕ್ಕಶಾಸ್ತಿಯನ್ನು ಕರುಣಿಸಲಿ. ಮುಂದಿನ ದಿನ ಇಂತಹ ಕೃತ್ಯ ಮಾಡಲು ಉಳ್ಳಾಲ್ತಿ ಅಮ್ಮ ಮತ್ತು ಮಹಾಲಿಂಗೇಶ್ವರ ದೇವರು ಆಸ್ಪದವನ್ನು ಕೊಡಬಾರದು ಎಂದು ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ. ದುಷ್ಕರ್ಮಿಗಳಿಗೆ ಭಗವಂತ ಒಳ್ಳೆಯ ಬುದ್ದಿಯನ್ನು ಕೊಡಲಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲ್ಪಣೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮ. ಕಾರ್ಯಕ್ರಮದ ಯಶಸ್ವಿಗೆ ಭಗವಂತನು ಶಕ್ತಿಯನ್ನು ಕೊಡಬೇಕು
ಅರುಣ್ ಕುಮಾರ್ ಪುತ್ತಿಲ
ಯಾರ ಮೇಲೂ ಅನುಮಾನವಿಲ್ಲ
ಯಾರು ಈ ಕೃತ್ಯ ಮಾಡಿದ್ದಾರೆಂಬುದು ಆ ತಾಯಿ ಮತ್ತು ಭಗವಂತನಿಗೆ ಗೊತ್ತು. ಅದಕ್ಕೆ ಅವರೆ ಉತ್ತರ ಕೊಡಲಿದ್ದಾರೆಂಬ ವಿಶ್ವಾಸ ನಮಗಿದೆ. ಇದು ಯಾರ ಮನೆಯ ಕಾರ್ಯಕ್ರಮವಲ್ಲ. ಹಿಂದು ಸಮಾಜದ ಕಾರ್ಯಕ್ರಮ. ಪವಿತ್ರವಾದ ಮಣ್ಣಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಯಾರ ಮೇಲೆ ಆರೋಪ ಮಾಡುವುದಿಲ್ಲ. ಇದು ಹಿಂದು ಸಮಾಜಕ್ಕೆ ಅತ್ಯಂತ ನೋವನ್ನು ತಂದಿದೆ. ನಾವೆಲ್ಲ ಸ್ವಯಂಸೇವಕಾಗಿ ಕೆಲಸ ಮಾಡುವವರು. ಒಂದಷ್ಟು ಸಣ್ಣ ಭಿನ್ನಾಭಿಪ್ರಾಯ ಎಲ್ಲಾ ವಿಚಾರದಲ್ಲೂ ಇರುತ್ತದೆ. ಆದರೆ ಅಟಲ್ ವಿರಾಸತ್ ಕಾರ್ಯಕ್ರಮವನ್ನು ಇದಕ್ಕೆ ತುಳನೆ ಮಾಡುವ ಅವಶ್ಯಕತೆ ಇದಲ್ಲ. ಬಿಜೆಪಿಯವರ ಮೇಲೆ ಆರೋಪ ಮಾಡುವುದಿಲ್ಲ.
ರಾತ್ರಿ 1 ಗಂಟೆಯ ತನಕ ಬಲ್ನಾಡಿನಲ್ಲೇ ಇದ್ದೆವು
ನಿನ್ನೆ ರಾತ್ರಿ 1 ಗಂಟೆಯ ತನಕವೂ ಬಲ್ನಾಡಿನಲ್ಲಿ ತಿರುಗುವ ಕಡೆ ವಾಹನ ಅಪಾಘತವಾಗಿ ಎರಡು ಹಸುಗಳಿಗೆ ಗಾಯವಾಗಿತ್ತು. ಹಾಗಾಗಿ ನಾವು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿ ವಾಪಾಸು ಹೋಗುವಾಗ ಸುಮಾರು 1 ಗಂಟೆ ಆಗಿತ್ತು. ಆ ಸಮಯ ಬ್ಯಾನರ್ಗೆ ಯಾವುದೆ ಹಾನಿ ಆಗಿಲ್ಲ.






