





ಶ್ರದ್ಧೆ, ಭಕ್ತಿಯಿಂದ ಶ್ರದ್ಧಾ ಕೇಂದ್ರಗಳನ್ನು ಬೆಳೆಸಿ-ಜಯಂತ್ ನಡುಬೈಲು


ಪುತ್ತೂರು:ದೇವಸ್ಥಾನಗಳು ಇರುವುದು ದೇವರಿಗಲ್ಲ, ಭಕ್ತರಿಗೆ. ಭಕ್ತರ ಜೀವನಕ್ಕೆ ಬೇಕಾಗುವ ನೆಮ್ಮದಿ ಮತ್ತು ಧೈರ್ಯ ದೇವಸ್ಥಾನದಲ್ಲಿ ಹೋಗಿ ಶ್ರದ್ಧೆಯಿಂದ ಪ್ರಾರ್ಥಿಸಿದಾಗ ನಮ್ಮ ಕೋರಿಕೆಗಳನ್ನು ದೇವರು ಈಡೇರಿಸುತ್ತಾನೆ ಎಂಬ ನಂಬಿಕೆ ನಮ್ಮದಾಗಿದೆ. ಆದ್ದರಿಂದ ಭಕ್ತರು ಶ್ರದ್ಧೆ ಮತ್ತು ಭಕ್ತಿಯಿಂದ ಶ್ರದ್ಧಾ ಕೇಂದ್ರಗಳನ್ನು ಬೆಳೆಸುವಂತಾಗಬೇಕು ಎಂದು ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ್ ನಡುಬೈಲುರವರು ಹೇಳಿದರು.





ಅವರು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುವ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವದ ಕಾರ್ಯಕ್ರಮದ ಪ್ರಯುಕ್ತ ನ.25 ರಂದು ಶ್ರೀ ದೇವಳದಲ್ಲಿ ನಡೆದ ಪಂಚಮಿ ಉತ್ಸವದಲ್ಲಿ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಭಕ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನಗಳು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಗೊಂಡಾಗ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಕಳೆದ ನಾಲ್ಕು ವರ್ಷದ ಹಿಂದೆ ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪೂಜಾರಿಯವರ ನೇತೃತ್ವದಲ್ಲಿ ಭಕ್ತರ ಸಹಕಾರದಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದ ಅವರು ನಮ್ಮ ಪರಿಸರದಲ್ಲಿನ ಶ್ರದ್ಧಾಕೇಂದ್ರಗಳನ್ನು ಬೆಳೆಸುವಲ್ಲಿ ನಮ್ಮ ಹೆಜ್ಜೆ ಸಾಗಬೇಕು. ಸನಾತನ ಹಿಂದೂ ಧರ್ಮ ಉಳಿಯಬೇಕಾದರೆ ನಾವು ದೇವಸ್ಥಾನಗಳಿಗೆ ಹೋಗುವ ರೂಢಿಯನ್ನು ಹೊಂದಬೇಕಾಗಿದೆ. ದೇವಸ್ಥಾನದ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಬೇಡ. ತನ್ನ ಹತ್ತಿರದ ದೇವಸ್ಥಾನ ಅದು ನನ್ನ ದೇವಸ್ಥಾನ, ದೇವಸ್ಥಾನದ ಅಭಿವೃದ್ಧಿಗೆ ನಾವೆಲ್ಲರೂ ಸೇರಿ ಭದ್ರ ಬುನಾದಿ ಹಾಕೋಣ ಎಂದು ಹೇಳಿದರು.

ಶ್ರೀ ಕ್ಷೇತ್ರದಲ್ಲಿ ಹರಕೆ ಸಲ್ಲಿಸಿದರೆ ಭಕ್ತರ ಇಷ್ಟಾರ್ಥ ನೆರವೇರುತ್ತದೆ-ಮಮತಾ ರಂಜನ್:
ಪುತ್ತೂರು ನಗರಸಭಾ ಸದಸ್ಯೆ ಶ್ರೀಮತಿ ಮಮತಾ ರಂಜನ್ ಮಾತನಾಡಿ, ಕೆಮ್ಮಿಂಜೆ ದೇವಸ್ಥಾನದ ಷಷ್ಠಿ ಜಾತ್ರೆ ನೋಡಿದಾಗ ನಮಗೆ ಬಹಳ ಖುಶಿಯಾಗುತ್ತದೆ. ದೇವಸ್ಥಾನದ ಸಾನಿಧ್ಯ ವೃದ್ಧಿಯಾಗಬೇಕಾದರೆ ಅಲ್ಲಿ ಭಕ್ತರ ಸಮೂಹ ಬೇಕಾಗುತ್ತದೆ. ಷಷ್ಠಿ ಮಹೋತ್ಸವದ ಸಂದರ್ಭ ಈ ಕ್ಷೇತ್ರದಲ್ಲಿ ಅನೇಕ ಭಜನಾ ಮಂಡಳಿಗಳು ಭಜನೆಯನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುತ್ತಾ ಬಂದಿದೆ. ಕೆಮ್ಮಿಂಜೆ ಶ್ರೀ ಕ್ಷೇತ್ರದಲ್ಲಿ ಹರಕೆ ಸಲ್ಲಿಸಿದರೆ ಭಕ್ತರ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಭಕ್ತರದ್ದು ಎಂದರು.
ದೇವಸ್ಥಾನದ ಅಭಿವೃದ್ಧಿಯಲ್ಲಿ ದೇವರ ಅನುಗ್ರಹ, ಭಕ್ತರ ಕಾಣಿಕೆಯಾಗಿದೆ-ಕೇಶವ ಬೆದ್ರಾಳ:
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಯಲ್ಲಿ ದೇವರ ಅನುಗ್ರಹ ಹಾಗೂ ಭಕ್ತರ ಕಾಣಿಕೆ ಪ್ರಮುಖವಾಗಿರುತ್ತದೆ. ಹಿಂದಿನ ಅವಧಿಯ ಮೂರು ವರ್ಷ ದೇವರು ನಮಗೆ ಅವಕಾಶ ಕೊಟ್ಟಿದ್ದು ಮಾತ್ರವಲ್ಲ ಶ್ರೀ ಕ್ಷೇತ್ರವನ್ನು ಸರ್ವರ ಸಹಕಾರದೊಂದಿಗೆ ಅಭಿವೃದ್ಧಿಯತ್ತ ಮುನ್ನೆಡೆಸಿರುತ್ತೇವೆ. ಪ್ರಸ್ತುತ ಶ್ರೀ ಕ್ಷೇತ್ರವು 13 ನೇ ವರ್ಷದತ್ತ ಸಾಗುತ್ತಿದ್ದು ಶ್ರೀ ಕ್ಷೇತ್ರದ ಬ್ರಹ್ಮಕಲಶ, ಜೀರ್ಣೋದ್ಧಾರವಾಗಬೇಕಿದ್ದು ಇದಕ್ಕೆ ಹೃದಯವಂತ ಭಕ್ತರ ಸಹಕಾರ ನಿರೀಕ್ಷಿಸುತ್ತಿದ್ದೇವೆ ಎಂದರು.

ಗೌರವ:
ಶ್ರೀ ಕ್ಷೇತ್ರಕ್ಕೆ ಹಿಂದೆ 19 ಸೆಂಟ್ಸ್ ಜಾಗವನ್ನು ಕೊಡುಗೆಯಾಗಿ ನೀಡಿದ ಜಗದೀಶ್ ಶೆಣೈ, ದೇವಸ್ಥಾನದ ಆರಂಭದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಸುಬ್ರಾಯ ಅಂಗಿತ್ತಾಯ ಹಾಗೂ ಶಿಲ್ಪಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸುದೇವ ಆಚಾರ್ಯರವರುಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಭಜನಾ ಕಾರ್ಯಕ್ರಮ:
ಮುಂಡೂರು ಉದಯಗಿರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಶಾಂತಿಗೋಡು ಪಜಿರೋಡಿ ಅಯ್ಯಪ್ಪ ಭಜನಾ ಮಂಡಳಿ, ಕಲ್ಲಾರೆ ರಾಘವೇಂದ್ರ ಸ್ವಾಮಿ ಭಜನಾ ಮಂಡಳಿ, ನೆಟ್ಟಾರು ಬ್ರಾಹ್ಮರಿ ಭಜನಾ ಮಂಡಳಿ, ಚಾರ್ವಾಕ ಸಾಕ್ಷಾತ್ ಶಿವ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಪುತ್ತೂರು ನಗರಸಭಾ ಸದಸ್ಯೆ ಶ್ರೀಮತಿ ಶೈಲಾ ಪೈ, ಉದ್ಯಮಿ ನಾಗೇಶ್ ರಾವ್ ಅತ್ತಾಳ ಬೆಂಗಳೂರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ಕೆ.ವೆಂಕಟೇಶ್ ಭಟ್, ಸೂರಪ್ಪ ಗೌಡ ಸಂಜಯನಗರ, ಮಹೇಶ್ ಬಿ.ಕಾವೇರಿಕಟ್ಟೆ, ರಕ್ಷಿತ್ ನಾಕ್ ದರ್ಬೆ, ಲಲಿತಾ ಕೆ.ಕೆಮ್ಮಿಂಜೆ, ರೇಖಾ ಯಶೋಧರ ಮರೀಲು, ಚಂದ್ರಶೇಖರ ಕೆ.ಕಲ್ಲಗುಡ್ಡೆ, ವಸಂತ ನಾಯ್ಕ ಬೆದ್ರಾಳ, ಗುಮಾಸ್ತ ಭರತ್, ಸಿಬ್ಬಂದಿ ರಘುನಾಥ್ ಪೂಜಾರಿ ಸೇರಿದಂತೆ ಭಕ್ತಾಧಿಗಳು ಸಹಕರಿಸಿದರು. ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ನ.26 ಷಷ್ಠಿ ಮಹೋತ್ಸವ
ನ.26 ಷಷ್ಠಿ ದಿನದಂದು ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಪಂಚಮಿ ಉತ್ಸವ..
ಬೆಳಿಗ್ಗೆ ಶ್ರೀ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಮತ್ತು ನಾಗತಂಬಿಲ ಸೇವೆಗಳು, ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಂಚಮಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆಗಳು, ಶಿರಾಡಿ ದೈವದ ಕಿರುವಾಳು ಬರುವುದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ..
ಮಧ್ಯಾಹ್ನ ಶ್ರೀಮತಿ ಸುಮನಾ ರಾವ್ ಪುತ್ತೂರು ಹಾಗೂ ಶಿಷ್ಯ ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಣಿಮಾಲಿನಿ ರೈ ಬಳಗದವರಿಂದ ಭಕ್ತಿ ರಸಮಂಜರಿ, ಅಪರಾಹ್ನ ಶ್ರೀದೇವಿ ಮಹಿಳಾ ಯಕ್ಷತಂಡ ಬಾಲವನ ಪುತ್ತೂರು ಇವರಿಂದ ಯಕ್ಷಗಾನ-ಮಹಿಷವಧೆ, ಸಂಜೆ ಕೆಮ್ಮಿಂಜೆ ಧಾರ್ಮಿಕ ಶಿಕ್ಷಣ ಮಕ್ಕಳಿಂದ ಕಾರ್ಯಕ್ರಮ ಜರಗಿತು.








