ಆವರಣ ಗೋಡೆ ಕುಸಿತ : ಅಡುಗೆ ಕೋಣೆ ಧ್ವಂಸ

0

ಅಡುಗೆ ತಯಾರಿಯಲ್ಲಿದ್ದವರು ಅಪಾಯದಿಂದ ಪಾರು

ಉಪ್ಪಿನಂಗಡಿ: ಮನೆ ಮಂದಿ ಹೊಸ ಬಾಡಿಗೆ ಮನೆ ಪ್ರವೇಶಿಸಿದ ಸಂಭ್ರಮದಲ್ಲಿರುವ ಸಮಯದಲ್ಲೇ ಮನೆಯ ಹಿಂಬದಿಯ ಮನೆಯೊಂದರ ಆವರಣಗೋಡೆ ಧರೆ ಸಹಿತ ಬಾಡಿಗೆ ಮನೆಗೆ ಕುಸಿದು ಬಿದ್ದು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡ ಘಟನೆ 34 ನೆಕ್ಕಿಲಾಡಿಯ ಸುಭಾಶ್‌ನಗರದ ಜನತಾ ಕಾಲನಿಯಲ್ಲಿ ನ.24ರಂದು ಸಂಜೆ ನಡೆದಿದೆ.

ಘಟನೆಯಿಂದ ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಇಲ್ಲಿನ ಜಬ್ಬಾರ್ ಎಂಬವರು ತನ್ನ ಮನೆಯನ್ನು ನಂದಾವರದ ಇಲ್ಯಾಸ್ ಎಂಬವರಿಗೆ ಬಾಡಿಗೆಗೆ ನೀಡಿದ್ದರು. ನ.24ರಂದು ಇಲ್ಯಾಸ್ ಅವರ ಕುಟುಂಬ ಈ ಮನೆಗೆ ಬಂದಿದ್ದು, ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನಗಳು ನಡೆದಿತ್ತು. ಇವರ ಕುಟುಂಬ ಹಾಗೂ ಬಂದ ನೆಂಟರಿಷ್ಟರಿಗೆ ಸಂಜೆ ಅಡುಗೆ ಕೋಣೆಯಲ್ಲಿ ಔತಣದ ತಯಾರಿ ನಡೆಯುತ್ತಿತ್ತು. ಈ ಮನೆಯ ಹಿಂಬದಿ ಎತ್ತರದ ಜಾಗದಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಸುಶೀಲಾ ಎಂಬವರಿಗೆ ಸೇರಿದ ಮನೆಯಿದ್ದು, ಕಳೆದ ಸುಮಾರು 10 ದಿನಗಳಿಂದ ಇದಕ್ಕೆ ಆವರಣಗೋಡೆ ಕಟ್ಟುವ ಕೆಲಸಗಳು ನಡೆಯುತ್ತಿತ್ತು. ನ.24ರ ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಆವರಣ ಗೋಡೆ ಕುಸಿಯುವ ಲಕ್ಷಣಗಳು ಗೋಚರಿಸಿದ್ದು, ಇದನ್ನು ಕಂಡ ಮೇಸ್ತ್ರಿಯೂ ಕೆಳಗಡೆ ಮನೆಯವರನ್ನು ಬೊಬ್ಬೆ ಹಾಕಿ ಮನೆಯಿಂದ ಹೊರಗೆ ಓಡುವಂತೆ ಎಚ್ಚರಿಸಿದ್ದರು. ಆಗ ಅಡುಗೆ ಕೋಣೆಯಲ್ಲಿದ್ದವರೆಲ್ಲಾ ಹೊರಗೋಡಿ ಬಂದಿದ್ದರು. ಆತ ಎಚ್ಚರಿಸಿದ ಸೆಕೆಂಡ್‌ಗಳ ಅವಧಿಯಲ್ಲಿ ಧರೆ ಸಹಿತ ಆವರಣಗೋಡೆ ಕುಸಿದು ಕೆಳಗಿನ ಮನೆಯ ಮೇಲೆ ಬಿದ್ದಿದೆ. ಇದರಿಂದ ಜಬ್ಬಾರ್ ಅವರ ಮನೆಯ ಅಡುಗೆ ಕೋಣೆ ಸಂಪೂರ್ಣ ಧ್ವಂಸವಾಗಿದ್ದು, ಮನೆಗೂ ಹಾನಿಯಾಗಿದೆ.

ಮನೆಯಲ್ಲಿದ್ದ ಫ್ರಿಡ್ಜ್, ಗ್ಯಾಸ್, ಗ್ಯಾಸ್ ಸ್ಟವ್, ಪಾತ್ರೆಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಮನೆಯಲ್ಲಿ ಇಲ್ಯಾಸ್ ಅವರ ಕುಟುಂಬ ಸದಸ್ಯರಲ್ಲದೆ, ನೆಂಟರಿಷ್ಟರೂ ಇದ್ದು, 7-8 ಮಕ್ಕಳೂ ಇದ್ದರು. ಹೆಚ್ಚಿನವರು ಅಡುಗೆ ಕೋಣೆಯಲ್ಲಿ ಔತಣ ತಯಾರಿಸುವ ಕೆಲಸದಲ್ಲಿದ್ದರು. ಆದರೆ ಆವರಣ ಗೋಡೆ ಕಟ್ಟುತ್ತಿದ್ದ ಮೇಸ್ತ್ರಿ ನೀಡಿದ ಎಚ್ಚರಿಕೆಯ ಮೇರೆಗೆ ಇವರೆಲ್ಲಾ ಮನೆಯಿಂದ ಹೊರಗೋಡಿ ಬಂದಿದ್ದರಿಂದ ಯಾವುದೇ ಅಪಾಯವಿಲ್ಲದೆ ಮನೆ ಮಂದಿ ಪಾರಾಗುವಂತಾಗಿದೆ. ಬಳಿಕ ಮಹಮ್ಮದ್ ಸೇರಿದಂತೆ ಸ್ಥಳೀಯರು ಬಂದು ಮಣ್ಣಿನಡಿ ಸಿಲುಕಿದ ವಸ್ತುಗಳನ್ನು ಹೊರತೆಗೆಯಲು ನೆರವಾದರು.

LEAVE A REPLY

Please enter your comment!
Please enter your name here