





ನೆಲ್ಯಾಡಿ: ಪರಿಸರ ಜಾಗೃತಿ ನಿಟ್ಟಿನಲ್ಲಿ ಸೈಕಲ್ ಸವಾರಿ ಮಾಡುತ್ತಿರುವ ತಮಿಳುನಾಡು ಮೂಲದ ಅನ್ಬು ಚಾರ್ಲ್ಸ್ ನ.25ರಂದು ಮಧ್ಯಾಹ್ನ ಗೋಳಿತ್ತೊಟ್ಟಿಗೆ ಆಗಮಿಸಿದ್ದರು. ಈ ವೇಳೆ ರಿಕ್ಷಾ ಚಾಲಕರು, ವರ್ತಕರು ಊಟ ನೀಡಿ ಸತ್ಕರಿಸಿ, ಧನ ಸಹಾಯವೂ ಮಾಡಿ ಪ್ರೋತ್ಸಾಹಿಸಿದರು.
68 ವರ್ಷ ವಯಸ್ಸಿನ ಅನ್ಬು ಚಾರ್ಲ್ಸ್ ನಿತ್ಯ ಸೈಕಲ್ನಲ್ಲೇ 20 ಕಿ.ಮೀ.ಪ್ರಯಾಣ ಮಾಡುತ್ತಿದ್ದು ದಾರಿಮಧ್ಯೆ ಸಿಗುವ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಹಸಿರು ಪಾಠ ಮಾಡುವುದು ಇವರ ಕಾಯಕವಾಗಿದೆ. ಪೊಲೀಸ್ ಠಾಣೆ, ದೇವಸ್ಥಾನವೇ ಇವರ ತಂಗುದಾಣ ಆಗಿದೆ. ಅವಿವಾಹಿತರಾದ ಅನ್ಬು ಚಾರ್ಲ್ಸ್ ತಮಿಳುನಾಡಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. 2005ರಲ್ಲಿ ಸಂಭವಿಸಿದ ಸುನಾಮಿಯಂತಹ ಪ್ರಾಕೃತಿಕ ವಿಕೋಪದಿಂದ ಘಾಸಿಗೊಂಡ ಇವರು, ಇದಕ್ಕೆಲ್ಲಾ ಪರಿಸರದ ಮೇಲೆ ಆಗುತ್ತಿರುವ ಪ್ರಹಾರವೇ ಕಾರಣ ಎಂದುಕೊಂಡು ಶಿಕ್ಷಕ ವೃತ್ತಿಗೆ ಗುಡ್ಬೈ ಹೇಳಿ ಪರಿಸರ ಜಾಗೃತಿ ಕಾಯಕ ಆರಂಭಿಸಿದ್ದರು.


2005ರಿಂದ ಸೈಕಲ್ ಯಾತ್ರೆ;
ಪರಿಸರ ಜಾಗೃತಿ ಉದ್ದೇಶವಿಟ್ಟುಕೊಂಡು 2005ರಲ್ಲಿ ಅನ್ಬು ಚಾರ್ಲ್ಸ್ ತಮಿಳುನಾಡಿನಿಂದಲೇ ಸೈಕಲ್ ಸವಾರಿ ಆರಂಭಿಸಿದ್ದರು. ಕಳೆದ 20 ವರ್ಷಗಳಿಂದ ಸೈಕಲ್ ಯಾತ್ರೆ ಮಾಡುತ್ತಿರುವ ಇವರು ಜಮ್ಮು ಕಾಶ್ಮೀರದ ತನಕವೂ ಹೋಗಿದ್ದಾರೆ. ಈ ತನಕ ಸುಮಾರು 20 ರಾಜ್ಯಗಳಲ್ಲಿ ಸಂಚಾರ ಮಾಡಿದ್ದಾರೆ. ಪ್ರತಿದಿನ 20 ಕಿ.ಮೀ. ಸೈಕಲ್ನಲ್ಲಿ ಪ್ರಯಾಣ ಮಾಡುತ್ತಾರೆ. ದಾರಿಯಲ್ಲಿ ಸಿಗುವ ಒಂದು ಅಥವಾ ಎರಡು ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ನೈಸರ್ಗಿಕ ವಿಪತ್ತು, ಅದನ್ನು ರಕ್ಷಿಸುವ ಬಗೆ, ಮಳೆ ನೀರು ಉಳಿಸಿಕೊಳ್ಳುವ ವಿಧಾನ ಕುರಿತು ಪಾಠ ಮಾಡುತ್ತಾರೆ. 100ರಲ್ಲಿ ಕನಿಷ್ಠ 20 ವಿದ್ಯಾರ್ಥಿಗಳು ನನ್ನ ಮಾತು ಪಾಲಿಸಿದರೆ ಅದೇ ನನಗೆ ನೆಮ್ಮದಿ ಎಂಬುದು ಚಾರ್ಲ್ಸ್ ಅವರ ಮನದ ಮಾತಾಗಿದೆ.





ಸಕಲೇಶಪುರ, ನೆಲ್ಯಾಡಿ ಮೂಲಕ ನ.25ರಂದು ಮಧ್ಯಾಹ್ನ ಗೋಳಿತ್ತೊಟ್ಟಿಗೆ ಆಗಮಿಸಿದ್ದ ಅನ್ಬು ಚಾರ್ಲ್ಸ್ರವರಿಗೆ ಗೋಳಿತ್ತೊಟ್ಟಿನ ಬ್ರಹ್ಮಶ್ರೀ ಹೋಟೆಲ್ನ ಮಾಲಕರು ಊಟ ನೀಡಿ ಸತ್ಕರಿಸಿದರು. ಈ ವೇಳೆ ರಿಕ್ಷಾ ಚಾಲಕರು, ಸಾರ್ವಜನಿಕರೂ ತಮ್ಮಿಂದಾದ ಧನ ಸಹಾಯ ನೀಡಿ ಸಹಕರಿಸಿದರು. ಇಲ್ಲಿ ಸ್ವಲ್ಪ ವಿಶ್ರಾಂತಿ ಮೊರೆ ಹೋದ ಅನ್ಬು ಚಾರ್ಲ್ಸ್ ’ಸುದ್ದಿಯೊಂದಿಗೆ ಮಾತುಕತೆ’ ಗೆ ಸಿಕ್ಕರು. ಸಂಜೆ ವೇಳೆ ಮತ್ತೆ ತಮ್ಮ ಪ್ರಯಾಣ ಮುಂದುವರಿಸಿದರು.
20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚಾರ;
ಕಳೆದ 20 ವರ್ಷಗಳಿಂದ ಸೈಕಲ್ನಲ್ಲಿ ಸಂಚಾರ ನಡೆಸುತ್ತಿರುವ ಅನ್ಬು ಚಾರ್ಲ್ಸ್ ಈ ತನಕ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚಾರ ಮಾಡಿದ್ದಾರೆ. ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಪಾಂಡಿಚೇರಿ, ಪಶ್ಚಿಮಬಂಗಾಳ, ಗುಜರಾತ್, ರಾಜಸ್ತಾನ, ಬಿಹಾರ, ಜಮ್ಮು ಕಾಶ್ಮೀರಗಳಲ್ಲೂ ಸಂಚಾರ ಮಾಡಿದ್ದಾರೆ. ನೇಪಾಳ ಗಡಿಯಲ್ಲಿ ಸಂಚರಿಸುವಾಗ ಪೊಲೀಸರ ಕಡೆಯವನೆಂದು ಗ್ರಹಿಸಿ ನಕ್ಸಲರು ಅಪಹರಿಸಿ 15 ದಿನ ಒತ್ತೆ ಇಟ್ಟುಕೊಂಡಿದ್ದರೂ ಎಂದು ಅನ್ಬು ಚಾರ್ಲ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಈ ತನಕ ಸುಮಾರು 60 ಸಾವಿರ ಕಿ.ಮೀ.ಗೂ ಹೆಚ್ಚು ಸಂಚಾರ ಮಾಡಿದ್ದಾರೆ. ಸೈಕಲ್ ಹಳೆಯದಾಗುತ್ತಿದ್ದಂತೆ ಬದಲಾವಣೆ ಮಾಡುತ್ತಿದ್ದಾರೆ. ಪರಿಸರದ ಮೇಲಿನ ಇವರ ಕಾಳಜಿಗೆ ಮೆಚ್ಚಿ ಹಲವು ಕಡೆಗಳಲ್ಲಿ ಪರಿಸರ ಪ್ರೇಮಿಗಳೇ ಹೊಸ ಸೈಕಲ್ ಕೊಡಿಸಿದ್ದೂ ಇದೆ. ಒಟ್ಟಿನಲ್ಲಿ ಪರಿಸರದ ಕಾಳಜಿಯೊಂದಿಗೆ ಅನ್ಬು ಚಾರ್ಲ್ಸ್ ನಡೆಸುತ್ತಿರುವ ಸೈಕಲ್ ಯಾತ್ರೆಗೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.
ಶುದ್ಧ ವಾಯು, ಜಲ, ನೆಲ ಎಲ್ಲರ ಹಕ್ಕು. ಇದಕ್ಕೆ ಮತ, ಪಂಥಗಳ ಭೇದವಿಲ್ಲ. ಪರಿಸರದ ಕುರಿತು ಜಾಗೃತರಾಗದಿದ್ದರೆ ಮುಂದೊಂದು ದಿನ ನೀರಿಗಾಗಿ ಯುದ್ಧ ನಡೆದರೂ ಆಶ್ಚರ್ಯ ಪಡಬೇಕಿಲ್ಲ. ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
-ಅನ್ಬು ಚಾರ್ಲ್ಸ್, ಪರಿಸರ ಪ್ರೇಮಿ








