





ಪುತ್ತೂರು: ಕಣ್ಣು ಮುಚ್ಚಿ 24 ಗಂಟೆ ನಿರಂತರ ಸ್ಯಾಂಡ್ ಆರ್ಟ್ ಕಲಾ ವಿನ್ಯಾಸವನ್ನು ಮಾಡುವ ಸಾಧನೆಯ ಮೂಲಕ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಪುತ್ತೂರು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಹಿರೇಬಂಡಾಡಿಯ ಶಮಿಕ ಎಂ.ಕೆ ಅವರು ಹೆಜ್ಜೆ ಇಡಲಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ಮಾತನಾಡಿ ವರ್ಣಕುಟೀರ ಸಂಸ್ಥೆಗೆ 25 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಗಾನಯಾನ, ಮಂತ್ರಯಾನ ಎಂಬ ಕಾರ್ಯಕ್ರಮ ಮಾಡಿದ್ದೇವೆ. ಇದೀಗ ಸಂಸ್ಥೆಯ ವಿದ್ಯಾರ್ಥಿನಿ ಶಮಿಕ ಅವರು ಕಣ್ಣುಮುಚ್ಚಿಕೊಂಡು ಸ್ಯಾಂಡ್ ಆರ್ಟ್ ಅನ್ನು 24 ಗಂಟೆ ಕಲಾ ವಿನ್ಯಾಸ ಮಾಡಲಿದ್ದಾರೆ.





ಡಿ.6 ಮತ್ತು 7ರಂದು ಸಂಸ್ಥೆಯಲ್ಲಿ ಈ ಸಾಧನೆ ನಡೆಯಲಿದ್ದು, ಏಷ್ಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನ ಮುಖ್ಯಸ್ಥ ಡಾ. ಮನೀಶ್ ವೈಷ್ಣೋಯಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ಗಂಟೆ 12ರಿಂದ ಮಾರನೆ ದಿನ ಮಧ್ಯಾಹ್ನ 12 ಗಂಟೆಯ ತನಕ ನಿರಂತರ ಸ್ಯಾಂಡ್ ಆರ್ಟ್ ಮಾಡಲಿದ್ದಾರೆ. ಇದರ ಜೊತೆಗೆ ಸಂಸ್ಥೆಯ 5 ಮಂದಿ ಹಿನ್ನೆಲೆ ಹಾಡನ್ನು ಹಾಡಲಿದ್ದಾರೆ. ಪ್ರತಿಯೊಂದು ಹಾಡಿನ ಭಾವನೆಗೆ ತಕ್ಕಂತೆ ಶಮಿಕ ಅವರು ಸ್ಯಾಂಡ್ ಆರ್ಟ್ ಮಾಡಲಿದ್ದಾರೆ. 24 ಗಂಟೆಯ ಅವಧಿಯಲ್ಲಿ 3 ಗಂಟೆಗೊಮ್ಮೆ ವಿಶ್ರಾಂತಿಯನ್ನು ಕೊಡಲಾಗುವುದು ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು, ಸದಸ್ಯ ಬಾಲಸುಬ್ರಹ್ಮಣ್ಯ ಶರ್ಮ ಮತ್ತು ಶಮಿಕ ಅವರ ತಂದೆ ಕೇಶವ ಅವರು ಉಪಸ್ಥಿತರಿದ್ದರು.
ಗಾಂಧಾರಿ ವಿದ್ಯೆ ಪಡೆದ ಶಮಿಕ
ಗಾಂಧಾರಿ ವಿದ್ಯೆ ಎಂದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದರೂ ‘ಮೂರನೇ ಕಣ್ಣಿನಿಂದ’ ನೋಡುವ ವಿದ್ಯೆಯಾಗಿದೆ. ಇದರ ಮೂಲಕ ವ್ಯಕ್ತಿಗಳು ಸ್ಪರ್ಶ, ವಾಸನೆ ಮತ್ತು ಇತರ ಸಂವೇದನೆಗಳನ್ನು ಬಳಸಿ ವಸ್ತುಗಳನ್ನು ಗುರುತಿಸುತ್ತಾರೆ, ಪುಸ್ತಕ ಓದುತ್ತಾರೆ ಅಥವಾ ಸೈಕಲ್ ಚಲಾಯಿಸುತ್ತಾರೆ. ಈ ವಿದ್ಯೆಯು ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇದೇ ವಿದ್ಯೆಯನ್ನು ಶಮಿಕ ಅವರು ಪಡೆದಿದ್ದಾರೆ. ಇಂದ್ರಪ್ರಸ್ತ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಮಿಕ ಅವರು ಮೂಡಿಗೆರೆಯ ಸತೀಶ್ ಪದ್ಮನಾಭ ಗುರೂಜಿಯವರಿಂದ ಗಾಂಧಾರಿ ವಿದ್ಯೆಯನ್ನು ಪಡೆದಿದ್ದಾರೆ. ಈ ಕುರಿತು ಅವರು ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರ ಮುಂದೆ ಕಣ್ಣಿಗೆ ಬಟ್ಟೆ ಕಟ್ಟಿ ತನಗೆ ಕಾಣದ ಅಕ್ಷರನ್ನು ಓದಿ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಈ ವಿದ್ಯೆಯನ್ನು ಆನ್ಲೈನ್ ಮೂಲಕ ಕಲಿತುಕೊಂಡಿದ್ದಾರೆ ಎಂದು ಶಮಿಕ ಅವರ ತಂದೆ ಕೇಶವ ಅವರು ತಿಳಿಸಿದ್ದಾರೆ. ಇದೀಗ ಅವರು ಕಣ್ಣು ಮುಚ್ಚಿಕೊಂಡು 24 ಗಂಟೆಯಲ್ಲಿ ಸುಮಾರು 300 ಸ್ಯಾಂಟ್ ಆರ್ಟ್ ರಚಿಸುವ ಮೂಲಕ ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಗೆ ಪ್ರಯತ್ನ ಮಾಡಲಿದ್ದಾರೆ.









