





ಪುತ್ತೂರು: IIT-ಕೋಲ್ಕತ್ತದಲ್ಲಿ ನವೆಂಬರ್ 25 ರಿಂದ 27ರ ವರೆಗೆ ಆಯೋಜಿಸಲಾದ ISG-ISRS ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆತ್ಮನಿರ್ಭರ ಭಾರತ್ ಕಡೆಗೆ ಭೂ ವಿಜ್ಞಾನ ಮತ್ತು ಬಾಹ್ಯಾಕಾಶ ನಾವೀನ್ಯತೆಗಳ ಕುರಿತು ಸಂಶೋಧನಾ ವರದಿಯನ್ನು ಮಂಡಿಸಲು ಯುವ ವಿಜ್ಞಾನಿ ತಮನ್ ಎಸ್.ಎನ್ ರವರು ಆಯ್ಕೆಯಾಗಿದ್ದಾರೆ, ಮಾತ್ರವಲ್ಲ ದಕ್ಷಿಣ ಕನ್ನಡ ಹಾಗೂ ಉಡುಪಿಯಿಂದ ಭಾಗವಹಿಸಿದ “ಏಕೈಕ ಯುವ ವಿಜ್ಞಾನಿ” ಎಂಬ ಅರ್ಹತೆಯನ್ನು ಗಳಿಸಿರುತ್ತಾರೆ.



ಪುತ್ತೂರಿನ ಮುಕುಟಕ್ಕೆ ಮತ್ತೊಂದು ಗರಿ:
ISG ಅಂದರೆ ಇಂಡಿಯನ್ ಸೊಸೈಟಿ ಆಫ್ ಜಿಯೋಮ್ಯಾಟಿಕ್ಸ್ ಹಾಗೂ ISRS ಅಂದರೆ ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್ ಆಗಿದ್ದು ಕೋಲ್ಕತ್ತದಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಿಚಾರ ಸಂಕಿರಣ-2025 ಇದರಲ್ಲಿ ಆತ್ಮನಿರ್ಭರ ಭಾರತ್ ಕಡೆಗೆ ಭೂ ವಿಜ್ಞಾನ ಮತ್ತು ಬಾಹ್ಯಾಕಾಶ ನಾವೀನ್ಯತೆಗಳ ಕುರಿತು ಸಂಶೋಧನಾ ವರದಿಯನ್ನು ಮಂಡಿಸಲು ಭಾರತದ ವಿವಿಧ ರಾಜ್ಯಗಳಿಂದ ಇಂಡಸ್ಟ್ರಿ, ಇಸ್ರೋ, ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸುಮಾರು 250 ಮಂದಿ ವಿಜ್ಞಾನಿಗಳು ಅವಕಾಶವನ್ನು ಪಡೆದಿರುತ್ತಾರೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಚೇರ್ಮನ್ ಡಾ.ವಿ ನಾರಾಯಣ್, ಗಗನಯಾತ್ರಿ ಪಿ.ಕೆ ನಾಯರ್ ರವರು ಭಾಗವಹಿಸಿರುವುದು ಹೆಗ್ಗಳಿಕೆಯಾಗಿದೆ. ಇಂತಹ ಒಂದು ಸುವರ್ಣಾವಕಾಶಕ್ಕೆ ಪುತ್ತೂರಿನ ತಮನ್ ಎಸ್.ಎನ್ ರವರು ಭಾಜನರಾಗಿರುವುದು ಪುತ್ತೂರಿನ ಮುಕುಟಕ್ಕೆ ಮತ್ತೊಂದು ಗರಿ ಪೋಣಿಸಿದಂತಾಗಿದೆ.





ಯುವ ವಿಜ್ಞಾನಿ ತಮನ್ ಎಸ್.ಎನ್ ರವರು ತಮ್ಮ ಪ್ರಾಥಮಿಕ(4ನೇ ವರೆಗೆ) ಬೆಥನಿ ಶಾಲೆಯಲ್ಲಿ, ಐದನೇ ತರಗತಿಯಿಂದ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪಡೆದು ಪ್ರಸ್ತುತ ಮೈಸೂರಿನ NIE ಇಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ತಮನ್ ಎಸ್.ಎನ್ ರವರು ತಮ್ಮ ಹತ್ತನೇ ತರಗತಿಯಲ್ಲಿ ಬಾಲ ವಿಜ್ಞಾನಿ ಪ್ರಶಸ್ತಿ, ಇನ್ಸ್ಪೈರ್ಡ್ ಅವಾರ್ಡ್, ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಯ ಜೊತೆಗೆ ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳಿಗೆ ಪುರಸ್ಕೃತರಾಗಿದ್ದಾರೆ.
ಯುವ ವಿಜ್ಞಾನಿ ತಮನ್ ಎಸ್.ಎನ್ ರವರು ಮೊಟ್ಟೆತ್ತಡ್ಕ ನಿವಾಸಿ ಸುರೇಂದ್ರ ಎ ಹಾಗೂ ನಳಿನ ಕುಮಾರಿರವರ ಪುತ್ರ.






